SSLC ಪೂರ್ವಸಿದ್ದತಾ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕೌಟ್ ! ಎಚ್ಚರ ವಹಿಸಬೇಕಿದೆ ಶಿಕ್ಷಣ ಇಲಾಖೆ
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ, ಬೆಂಗಳೂರು ನಡೆಸಲು ಉದ್ದೇಶಿಸಿರುವ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಯ ವಿಜ್ಞಾನ ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಸೋರಿಕೆಯಾಗಿದೆ. ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ರಾಜ್ಯಮಟ್ಟದಲ್ಲಿ ಒಂದೇ ಪ್ರಶ್ನೆ ಪತ್ರಿಕೆ ಇರುತ್ತದೆ. ಈ ಪೈಕಿ 80 ಅಂಕಗಳಿರುವ ವಿಜ್ಞಾನ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಹಲೋ ಅಪ್ಲಿಕೇಶನ್ನಲ್ಲಿ ಈ ಪ್ರಶ್ನೆ ಪತ್ರಿಕೆ ಎಗ್ಗಿಲ್ಲದೆ ಹರಿದಾಡುತ್ತಿದೆ.
ಎಸೆಸೆಲ್ಸಿಯ ವಿಜ್ಞಾನದ ಪೂರ್ವ ಸಿದ್ಧತಾ ಪರೀಕ್ಷೆ ಪರೀಕ್ಷೆ ಫೆ.24 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಆದರೆ, ಇಡೀ ಪ್ರಶ್ನೆ ಪತ್ರಿಕೆಯೇ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿರುವುದಕ್ಕೆ ಕಾರಣ ತಿಳಿದಿಲ್ಲ. ಈಗಾಗಲೇ ಬಹುತೇಕ ಜಿಲ್ಲೆಗೆ ಪ್ರಶ್ನೆ ಪತ್ರಿಕೆಯನ್ನು ರವಾನಿಸಿ ಅಲ್ಲಿ ಎಲ್ಲೆಡೆ ಬಿಗಿ ಭದ್ರತೆಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗಿದ್ದರೂ ಪ್ರಶ್ನೆಪತ್ರಿಕೆ ಲೀಕ್ ಆಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ವ ಸಿದ್ದತಾ ಪರೀಕ್ಷೆ ನಡೆಸುವುದು ಮಕ್ಕಳಲ್ಲಿ ಅಂತಿಮ ಪರೀಕ್ಷೆಯ ಸ್ವರೂಪವನ್ನು ಅರ್ಥ ಮಾಡಿಸಲು ಅಂತಿಮ ಪರೀಕ್ಷೆಯ ಮಾದರಿ ಯಾವ ರೀತಿಯಲ್ಲಿ ಇರುತ್ತದೆನ್ನುವ ಪರಿಚಯವಾಗಲು, ಹೀಗಾಗಿ ಈ ಬಾರಿ ಮಂಡಳಿಯೇ ಬಹುಪಾಲು ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಿದೆ ಎಂದರು. ಇನ್ನು ಪರೀಕ್ಷೆಗಳು ಶಾಲೆಗಳಲ್ಲಿಯೇ ಮುಖ್ಯೋಪಾಧ್ಯಾಯ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತಿರುತ್ತವೆ.
ಶಾಲಾ ಮುಖ್ಯಸ್ಥರುಗಳು ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವರು. ಅವರ ಕೈಗೆ ಪ್ರಶ್ನೆ ಪತ್ರಿಕೆಗಳು ಮುಂಚೆಯೇ ತಲುಪಿರುತ್ತವೆ. ಅದು ಸಹ ಇಂತಹ ಪರಿಸ್ಥಿತಿಗೆ ಕಾರಣ ಆಗಿರಬಹುದು ಆದರೂ ಇದು ಒಂದು ರೀತಿಯ ನೈತಿಕ ಜವಾಬ್ದಾರಿಯ ಪ್ರಶ್ನೆಯಾಗಿದೆ ಎಂದರು. ಮಕ್ಕಳಿಗೆ ಅಂತಿಮ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಇದೊಂದು ಉತ್ತಮ ಅವಕಾಶವಾಗಿತ್ತು. ಈ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಎಂಬ ಕಲ್ಪನೆಯಿಂದ ಗ್ರಹಿಸುವುದೇ ಸರಿಯಲ್ಲ ಅನ್ನುವುದು ನನ್ನ ಭಾವನೆ. ಮೇಲಾಗಿ, ಅಂತಿಮ ಪರೀಕ್ಷಾ ವ್ಯವಸ್ಥೆ ಬೇರೆಯೇ ಆಯಾಮವನ್ನು ಹೊಂದಿರುತ್ತದೆ. ಎರಡೂವರೆ ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ನಡೆಯುತ್ತದೆ ಅದರ ಬಗ್ಗೆ ಯಾವ ಗೊಂದಲಕ್ಕೆ, ಆತಂಕಕ್ಕೆ ಅವಕಾಶವಿಲ್ಲ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಆದರೆ ಪರೀಕ್ಷೆಗೆ ಮುಂಚೆಯೇ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದರಿಂದ ಮಕ್ಕಳಿಗೆ ಇದು ಮುಂದಿನ ಪಬ್ಲಿಕ್ ಪರೀಕ್ಷೆ ಗೆ ಹೇಗೆ ಪೂರ್ವ ಸಿದ್ದತೆಗೆ ಅನುಕೂಲವಾಗುತ್ತದೆ ಎಂಬುದು ಯಕ್ಷ ಪ್ರಶ್ನೆ? ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಯ್ಕೆ ಸಮಿತಿಯಿಂದ ಲೀಕ್ ಆಯಿತೆ? ಮುದ್ರಣ ವಿಭಾಗದಿಂದ ಲೀಕ್ ಆಯಿತೆ? ವಿತರಣೆ ಸಂದರ್ಭದಲ್ಲಿ ಲೀಕ್ ಆಯಿತೇ? ಎಂಬುದರ ಕುರಿತು ತನಿಖೆ ನಡೆಸಬೇಕಿದೆ.
ಪೂರ್ವ ಸಿದ್ದತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿರುವುದರಿಂದ ಮುಂದಿನ ಪಬ್ಲಿಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ವಿತರಣಾ ವ್ಯವಸ್ಥೆಯಲ್ಲಿ ಭದ್ರತೆ ಹೆಚ್ಚಿಸಬೇಕಿದೆ. ಪ್ರಶ್ನೆ ಪತ್ರಿಕೆ ಲೀಕ್ ಆದ ಬಳಿಕ ಪರೀಕ್ಷೆಗಳು ಮುಂದೂಡಲ್ಪಡುವ ಪ್ರಮೇಯ ಎದುರಾಗುತ್ತದೆ. ಇದು ವಿದ್ಯಾರ್ಥಿಗಳ ಸ್ಥೈರ್ಯವನ್ನು ಕುಗ್ಗಿಸುವಂತಹದ್ದು. ಪ್ರಶ್ನೆ ಪತ್ರಿಕೆ ಲೀಕ್ ಆಗುವ ಕುರಿತು ಇದರ ತಡೆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಬೇಕಿದೆ.