ತುಳು ಭಾಷೆಗೆ ಮಾನ್ಯತೆ ನೀಡಲು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ
ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಮನವಿ ಸಲ್ಲಿಸಿದರು.
ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದು ಹಾಗೂ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂಬ ಹೋರಾಟ ಬಹು ಕಾಲದಿಂದ ನಡೆಯುತ್ತಿದೆ.
ತುಳು ಭಾಷೆಯ ಕುರಿತು ಬಹಳಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶಾಸಕ ಕಾಮತ್ ತುಳುವಿಗೆ ವಿಶೇಷ ಸ್ಥಾನಮಾನ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಯಿಸಿರುವ ಶಾಸಕ ಕಾಮತ್, ಸುಮಾರು 2500 ವರ್ಷಗಳ ಇತಿಹಾಸವಿರುವ ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಪೂರಕವಾಗಿ ರಾಜ್ಯ ಸರಕಾರವು ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವುದು ಅಗತ್ಯವಾಗಿದೆ. 1.5 ಕೋಟಿಗಿಂತಲೂ ಹೆಚ್ಚು ತುಳುಭಾಷಿಗರಿದ್ದು ತುಳುವಿಗೆ ತನ್ನದೇ ಆದ ಲಿಪಿಯಿದೆ.
ತುಳುಭಾಷೆಯಲ್ಲಿ 14ನೇ ಶತಮಾನಕ್ಕಿಂತಲೂ ಹಿಂದಿನಿಂದಲೇ ಕಾವ್ಯಗಳು ಸೃಷ್ಟಿಯಾಗಿದೆ ಎಂದಿದ್ದಾರೆ. ತುಳುಲಿಪಿಯಲ್ಲಿ ಸಾಹಿತ್ಯಿಕ ಪ್ರಕಾರಗಳು ರಾಮಾಯಣ, ಮಹಾಭಾರತದಂತಹ ಉದ್ಗ್ರಂಥಗಳು ಪ್ರಾಪ್ತಿಯಾಗಿದೆ.
ತುಳು ಲಿಪಿಯ ಸಹಸ್ರಾರು ಶಿಲಾಶಾಸನಗಳು, ತಾಮ್ರ ಪತ್ರಗಳು, ತಾಡೆಯೋಲೆಗಳ ದಾಖಲೆಗಳು ಕರಾವಳಿ ಪ್ರದೇಶದಲ್ಲಿ ಲಭ್ಯವಿದೆ. ನೀಲೇಶ್ವರದಿಂದ ಅಂಕೋಲ, ಮೂಡಣ ಘಟ್ಟ, ಪಡುವಣ ಕಡಲು, ಮೃದು ಮಣ್ಣಿನ ಈ ನೆಲವನ್ನು ತುಳುರಾಜ್ಯ ಎಂದೇ ಶಾಸನಗಳು ನಮಗೆ ಲಭ್ಯವಾಗಿರುವುದು. ಹಾಗಾಗಿ ರಾಜ್ಯದ ಅಧಿಕೃತ ಭಾಷೆಯಾಗಿ ಹಾಗೂ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸಕಾಲವಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಪಸ್ಥಿತರಿದ್ದರು.