ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಾಧನೆಗೆ ವಿವಿಧ ಚಟುವಟಿಕೆ : ಜಿಲ್ಲೆಯಲ್ಲಿ ಪುತ್ತೂರಿಗೆ ಪ್ರಥಮ ಸ್ಥಾನ ನಿರೀಕ್ಷೆ
ಪುತ್ತೂರು ಮಾರ್ಚ್ 27 ರಿಂದ ಆರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ಮೊರಾರ್ಜಿ ಶಾಲೆ ಸೇರಿದಂತೆ 78 ಪ್ರೌಢಶಾಲೆಗಳ ಒಟ್ಟು 4786 ಮಕ್ಕಳು ಹಾಜರಾಗಲಿದ್ದು, ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಶೇ100 ಫಲಿತಾಂಶ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆಯಲು ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.
ಬುಧವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಈಗಾಗಲೇ ಶಾಸಕರು, ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಪೋಷಕರು ಹಾಗೂ ಶಿಕ್ಷಕರ ಸಭೆಗಳನ್ನು ನಡೆಸಲಾಗಿದೆ. ಕೆಲವು ಆಯ್ದ ಶಾಲೆಗಳ ಎಸ್‍ಎಸ್‍ಎಲ್‍ಸಿ ಮಕ್ಕಳ ಮನೆಗೆ ಮುಂಜಾನೆ 5 ಗಂಟೆಗೆ ಭೇಟಿ ಮಾಡಿ ಮಕ್ಕಳ ಪರೀಕ್ಷಾ ತಯಾರಿ ಮತ್ತು ಪರೀಕ್ಷೆ ಎದುರಿಸುವ ಕುರಿತು ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ.
0-14 ಅಂಕ ಪಡೆದ ಮಕ್ಕಳಿಗೆ ಆಧ್ಯತೆ
10ನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಹಾಜರಾಗುವ ಮಕ್ಕಳನ್ನು ತಯಾರು ಮಾಡುವ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಪೂರ್ವ ತಯಾರಿ ಪರೀಕ್ಷೆ ನಡೆಸಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ಹಾಗೂ ಪೂರ್ವ ತಯಾರಿ ಪರೀಕ್ಷೆಯಲ್ಲಿ 0-14 ಅಂಕಗಳನ್ನು ಪಡೆದ ಮಕ್ಕಳ ಬಗ್ಗೆ ವಿಶೇಷ ಆಧ್ಯತೆ ನೀಡಿ ಅವರಿಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ತಾಲೂಕಿನ ಸುಳ್ಯಪದವು ಸರ್ವೋದಯ ಪ್ರೌಢಶಾಲೆ, ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ದುರ್ಗಾಂಬ ಪ್ರೌಢಶಾಲೆ ಆಲಂಕಾರು, ಸುಬೋಧ ಪ್ರೌಢಶಾಲೆ ಪಾಣಾಜೆ, ಸರ್ಕಾರಿ ಪ್ರೌಢಶಾಲೆ ಕಬಕ ಹಾಗೂ ನಗರ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ನೆರವಿನೊಂದಿಗೆ ರಾತ್ರಿ ಶಾಲೆಗಳನ್ನು ನಡೆಸುವ ಮೂಲಕ ಮಕ್ಕಳ ಪರೀಕ್ಷಾ ತಯಾರಿ ಕೆಲಸ ನಡೆಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 300 ಭಾಷಾ ಶಿಕ್ಷಕರು ಮತ್ತು 350 ಗಣಿತ, ವಿಜ್ಞಾನ, ಸಮಾಜ ಶಿಕ್ಷಕರಿಗೆ ವಿಶೇಷ ಮಾಹಿತಿ ಶಿಬಿರ ನಡೆಸಲಾಗಿದೆ. ವಿವಿಧ ಇಲಾಖೆ, ಸ್ವಯಂಸೇವಾ ಸಂಘಟನೆಗಳೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಕಾರ್ಯಾಗಾರಗಳನ್ನು ನಡೆಸಿದ್ದಾರೆ.
ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು ಇತ್ತೀಚೆಗೆ ಮುಂಜಾನೆ 4 ಗಂಟೆಗೆ ಎದ್ದು ಮಕ್ಕಳ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಪರೀಕ್ಷಾ ತಯಾರಿ ಪರಿಶೀಲನೆ ನಡೆಸಿದ್ದರು.
ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ಮನೆ ಭೇಟಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಾಲೂಕಿನ 23 ಸರ್ಕಾರಿ ಪ್ರೌಢ ಶಾಲೆಯ 675 ಗಂಡು ಮಕ್ಕಳು ಮತ್ತು 650 ಹೆಣ್ಣುಮಕ್ಕಳು, 22 ಅನುದಾನಿತ ಪ್ರೌಢಶಾಲೆಯ 702 ಗಂಡು, 823 ಹೆಣ್ಣುಮಕ್ಕಳು, 32 ಅನುದಾನಿತ ರಹಿತ ಪ್ರೌಢಶಾಲೆಯ 1021 ಗಂಡು ಮಕ್ಕಳು ಮತ್ತು 880 ಹೆಣ್ಣುಮಕ್ಕಳು ಹಾಗೂ 1 ಮೋರಾರ್ಜಿದೇಸಾಯಿ ಪ್ರೌಢಶಾಲೆಯ 15 ಗಂಡುಮಕ್ಕಳು ಹಾಗೂ 20 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 2413 ಗಂಡು ಮಕ್ಕಳು ಹಾಗೂ 2373 ಹೆಣ್ಣುಮಕ್ಕಳು ಹಾಜರಾಗಿ ಪರೀಕ್ಷೆ ಬರೆಯಲಿದ್ದಾರೆ.
ಈ ಮಕ್ಕಳಿಗೆ ಒಟ್ಟು 12 ಪರೀಕ್ಷಾ ಕೇಂದ್ರಗಳನ್ನು ನಿಗಧಿ ಮಾಡಲಾಗಿದ್ದು, 208 ಕೊಠಡಿ ವ್ಯವಸ್ಥೆ ಹಾಗೂ 228 ಮೇಲ್ವಿಚಾರಕರ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ ಪುತ್ತೂರು ತಾಲೂಕು ಜಿಲ್ಲೆಯಲ್ಲಿ 4 ನೇ ಸ್ಥಾನ ಪಡೆದಿತ್ತು. ಕಳೆದ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 4772 ಮಕ್ಕಳಲ್ಲಿ 647 ಮಕ್ಕಳು ಅನುತ್ತೀರ್ಣಗೊಂಡಿದ್ದರು.
ಈ ಬಾರಿ ಈ ಸಂಖ್ಯೆಯನ್ನು ಅತ್ಯಂತ ಕಡಿಮೆ ಮಾಡುವ ಇರಾದೆ ಹೊಂದಲಾಗಿದೆ. ಪೂರ್ವ ತಯಾರಿ ಪರೀಕ್ಷೆಯಲ್ಲಿ 750 ಮಕ್ಕಳು ಕಡಿಮೆ ಅಂಕ ಪಡೆದಿದ್ದು, ಈ ಮಕ್ಕಳನ್ನು ಪರೀಕ್ಷೆಯಲ್ಲಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.