ನೇತ್ರಾವತಿ ನದೀ ತೀರದಲ್ಲಿ ಚಿರತೆ | ಮಂಗಳೂರಿನ ಕೋಟೆಪುರದ ಬಳಿ ಕಣ್ಮರೆಯಾಗುತ್ತಿದ್ದ ನಾಯಿಗಳು !
ಮಂಗಳೂರಿನ ಕೋಟೆಪುರ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಒಟ್ಟಾರೆ ಪ್ರದೇಶದಲ್ಲಿ ಭಯಭೀತ ವಾತಾವರಣವನ್ನು ಸೃಷ್ಟಿಸಿದೆ.
ಇತ್ತೀಚಿಗೆ ಕೋಟೆಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆಯ ನಾಯಿಗಳು ಹಠಾತ್ತಾಗಿ ಕಣ್ಮರೆಯಾಗುತ್ತಿದ್ದವು. ಇದು ದುಷ್ಕರ್ಮಿಗಳ ಕೃತ್ಯ ಎಂದು ಇಷ್ಟುದಿನ ಅಂದುಕೊಳ್ಳಲಾಗುತ್ತಿತ್ತು.
ಆದರೆ ಸೋಮವಾರ ಸಂಜೆ ಮನೆಯೊಂದರ ಮುಂದೆ ಹಠಾತ್ತಾಗಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ನಾಯಿಯೊಂದನ್ನು ಹಿಡಿದುಕೊಳ್ಳಲು ಬರುತ್ತಿದ್ದ ಚಿರತೆಯನ್ನು ಕೋಟೆಪುರದ ನಿವಾಸಿ ಇರ್ಫಾನ್ ಎಂಬವರು ಗಮನಿಸಿ ಚಿರತೆಯನ್ನು ಬೆನ್ನಟ್ಟಿದ್ದರು. ಹಾಗೆ ಓಡಿಸಿಕೊಂಡು ಹೋಗುವಾಗ ಕಾಲಿಗೆ ದೊಡ್ಡದಾಗಿ ಪೆಟ್ಟು ಮಾಡಿಕೊಂಡಿದ್ದರು.
ಇರ್ಫಾನ್ ಅವರು ಕಳೆದ ಆರು ತಿಂಗಳ ಹಿಂದೆಯೇ ಚಿಕ್ಕದೊಂದು ಚಿರತೆ ಮರಿಯನ್ನು ಕಂಡಿದ್ದರು. ಅದು ದೊಡ್ಡ ಬೆಕ್ಕಿನಂತೆ ಇತ್ತು. ಆದ್ದರಿಂದ ಅದು ಚಿರತೆಯ ಅಥವಾ ಬೆಕ್ಕಾ ಎನ್ನುವ ಅನುಮಾನ ಅವರದಾಗಿತ್ತು.
ಆದರೆ ಆನಂತರ ಊರಿನ ಕೆಲವರು ಚಿರತೆಯ ಚಲನವಲನವನ್ನು ಗಮನಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಆದರೆ ಇಲಾಖೆಯು ಹೆಚ್ಚಿನ ಸಾಕ್ಷ್ಯಾಧಾರಗಳಿಲ್ಲದೆ ಚಿರತೆ ಈ ಪ್ರದೇಶಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಮಳೆಗಾಲದಲ್ಲಿ ದೊಡ್ಡಪ್ರಮಾಣದಲ್ಲಿ ಪ್ರವಾಹಗಳು ಉಂಟಾಗಿ ಆ ಸಂದರ್ಭದಲ್ಲಿ ಚಿರತೆ ಮರಿಗಳು ತಾಯಿಯಿಂದ ಬೇರ್ಪಟ್ಟು ಕೋಟೆಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಸಾಧ್ಯತೆ ಇದೆ. ನೇತ್ರಾವತಿ ನದಿಯ ಆಸುಪಾಸಿನಲ್ಲಿ ಇರುವ ಪ್ರದೇಶಗಳನ್ನು ಚಿರತೆಗಳು ತಮ್ಮ ವಾಸಸ್ಥಾನವಾಗಿ ಮಾಡಿಕೊಂಡಿರುವ ಅನುಮಾನವಿದೆ.
ಈಗ ಕೋಡಿ, ಕೋಟೆಪುರ ಸೇನೆರೆ ಬೈಲ್ ಮುಂತಾದ ಪ್ರದೇಶಗಳಲ್ಲಿನ ಕೆಲವು ಮನೆಗಳಲ್ಲಿ ಇರಿಸಲಾದ ಸಿಸಿಟಿವಿಯಲ್ಲಿ ದಾಖಲಾದ ಚಿರತೆಯ ನಡೆಯನ್ನು ಕಂಡ ಮೇಲೆ ಎಲ್ಲಾ ಇಲಾಖೆಗಳೂ ಎಚ್ಚೆತ್ತುಕೊಂಡಿವೆ.
ಚಿರತೆ ಸಾಗಬಹುದಾದ ದಾರಿಯಲ್ಲಿ ಬೋನನ್ನು ಇರಿಸಿ ಅದರಲ್ಲಿ ಕೋಳಿ ಮತ್ತು ನಾಯಿಯನ್ನು ಕಟ್ಟಿ ಹಾಕಿ ಚಿರತೆಯನ್ನು ಹಿಡಿಯುವ ಕಾರ್ಯ ನಡೆಯುತ್ತಿದೆ. ಸುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣವಿದ್ದು ಶೀಘ್ರ ಚಿರತೆಯ ಬಂಧನ ಯಾವಾಗ ಆಗುತ್ತೊ ಎಂದು ಕಾಯುತ್ತಿದ್ದಾರೆ.
ಪ್ರಕೃತಿ ವೈಪರಿತ್ಯ ಉಂಟಾದ ಪರಿಣಾಮ ಜೀವ ರಾಶಿಗಳು ಆಹಾರ ಹುಡುಕುತ್ತಾ ನಾಡಿಗೆ ಬರುವ ಸಂಭವ ಜಾಸ್ತಿ ಇರುತ್ತದೆ. ಆದುದರಿಂದ ಕಾಡಿಗೆ ಹೋಗುವವರು ಸೊಪ್ಪು-ಸದೆ, ಕಟ್ಟಿಗೆ ತರಲು ಹೋಗುವವರು ಮತ್ತು ನದೀತೀರಕ್ಕೆ ಮೀನು ಹಿಡಿಯಲು ಹೋಗುವವರು ಗುಂಪುಗುಂಪಾಗಿ ಹೋಗಿ ಹಿಂಸ್ರಾ ಪ್ರಾಣಿಗಳ ಅಪಾಯದಿಂದ ತಪ್ಪಿಸಿಕೊಳ್ಳುವುದು ಲೇಸು. ಕಾಡಿಗೆ ಹೋಗುವಾಗ ಎಲ್ಲಕಡೆಯೂ ಎಚ್ಚರ ಅಗತ್ಯ.