ಮಿಜಾರ್ ಅಶ್ವಥ್ಥಪುರ ಶ್ರೀನಿವಾಸ ಗೌಡ, ಕಾರ್ಕಳ ಬಜಗೋಳಿ ನಿಶಾಂತ್ ಶೆಟ್ಟಿ ಎಂಬ ಕರಾವಳಿಯ ಎರಡು ಚಿರತೆಗಳು

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ತನ್ನದೇ ಆದ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಅದನ್ನು ಇಂದು ಕೂಡಾ ಆಚರಿಸಿಕೊಂಡು ಬರುತ್ತಿದೆ.ಬೇಸಿಗೆ ಬಂತೆಂದರೆ ಸಾಕು ಕರಾವಳಿಯಲ್ಲಿ ಜನಪದ ಕ್ರೀಡೆಯಾದ ಸಾಲು ಸಾಲು ಕಂಬಳ ಕೂಟಗಳು ನಡೆಯುತ್ತದೆ.

 

ಇವುಗಳಲ್ಲಿ ಪವಿತ್ರ ಜಾಗಗಳಲ್ಲಿ ನಡೆಯುವ ಕಂಬಳ ಕೂಟಗಳಿಗೆ ದೇವಾರಾಧನೆ,ದೈವಾರಾಧನೆ ಹಾಗೂ ನಾಗಾರಾಧನೆಯ ವಿಶೇಷ ನಂಟಿದೆ. ಕಂಬಳ ಕೂಟದಲ್ಲಿ ಕೋಣಗಳ ಯಜಮಾನರ ಜೊತೆಗೆ ಕೋಣಗಳನ್ನು ಓಡಿಸುವವರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಕರಾವಳಿಯ ಕಂಬಳ ಇತಿಹಾಸದಲ್ಲಿ ನೂರಾರು ಕಂಬಳ ಓಟಗಾರರು ಕೂಟದ ಪ್ರಸ್ತುತ ಕೂಟದ ಅಖಾಡದಲ್ಲಿದ್ದಾರೆ.

ಇವುಗಳ ಪೈಕಿ ಪ್ರಸ್ತುತ ಇರುವೈಲ್ ಪಾಣಿಲ ಬಾಡ ಪೂಜಾರಿ ಮಾಲೀಕತ್ವದ ಕೋಣಗಳ ಓಟಗಾರ ಮತ್ತು ಮೂಡಬಿದ್ರೆ ನ್ಯೂ ಪಡಿವಾಲ್ಸ್ ಕೋಣಗಳ ಪೋಷಕ ಮೂಡಬಿದ್ರೆ ತಾಲೂಕಿನ ಮಿಜಾರು ಸಮೀಪದ ಅಶ್ವಥ್ಥಪುರ ನಿವಾಸಿ ಶ್ರೀನಿವಾಸ ಗೌಡರು ಕಳೆದ ಎಂಟು ವರ್ಷಗಳ ಕಂಬಳ ಕೂಟದಲ್ಲಿ ನೂರಾರು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡವರು. ಕಂಬಳ ಕೂಟವೆಂಬುವುದು ಕರಾವಳಿಯ ಭಾಗಕ್ಕೆ ಸೀಮಿತವಾಗಿರುವುದರಿಂದ ಈ ಕ್ಷೇತ್ರದಲ್ಲಿ ಸಾಧನೆಗೈದ ಹಲವಾರು ಪ್ರತಿಭೆಗಳು ರಾಜ್ಯಮಟ್ಟಕ್ಕೆ ಪರಿಚಯಗೊಂಡ ನಿದರ್ಶನಗಳೇ ಬಹಳ ವಿರಳ. ಜತೆಗೆ ಆಗಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವಗಳ ಕೊರತೆಯೂ ಒಂದು ಕಾರಣವೆನ್ನಬಹುದು. ಬರಿಗಾಲಲ್ಲಿ ಮೊಣಕಾಲ ಕೆಸರು ನೀರಿಗೆ ಮೈಯ್ಯೊಡ್ಡಿ ಕಂಬಳ ಟ್ರ್ಯಾಕ್ ನಲ್ಲಿ ಕೋಣಗಳ ಹಿಂದೆ ಓಡಿ ವೇಗ ಪಡೆದುಕೊಳ್ಳುವುದು ಸಾಧಾರಣ ಸಾಧನೆಯೇನಲ್ಲ.

ಶ್ರೀನಿವಾಸ ಗೌಡ

ಇದೆಲ್ಲದರ ಮಧ್ಯೆ ಈ ಬಾರಿಯ ಕಂಬಳ ಕೂಟದಲ್ಲಿ ಸತತ ಗೆಲುವಿನ ಮೂಲಕ ಪದಕ ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದ ಅಶ್ವಥ್ಥಪುರ ಶ್ರೀನಿವಾಸ ಗೌಡರು ಮೂಲ್ಕಿಯ ಐಕಳದ ಕಾಂತಬಾರೆ ಬೂದಬಾರೆ ಸಾಂಪ್ರದಾಯಿಕ ಕಂಬಳ ಗದ್ದೆಯಲ್ಲಿ 100 ಮೀಟರ್ ದೂರವನ್ನು 9.55 ಸೆಕುಂಡುಗಳಲ್ಲಿ ಓಡಿ ಸಾಧನೆಗೈದು ಜಮೈಕಾದ ವೇಗದ ಓಟಗಾರ ಉಸೇನ್ ಬೋಲ್ಟ್ ರ 9.58 ವೇಗವನ್ನು ಮುರಿದು ಕಂಬಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸಿ ರಾತ್ರಿ ಬೆಳಗಾಗುವುದರೊಳಗೆ ಸುದ್ದಿ ಮಾಡಿದ್ದಾರೆ.

ನಿಶಾಂತ್ ಶೆಟ್ಟಿ

ಇದರ ಮಧ್ಯೆ ಭಾನುವಾರ ವೇಣೂರಿನಲ್ಲಿ ನಡೆದ ಸೂರ್ಯಚಂದ್ರ ಜೋಡುಕರೆ ಕಂಬಳದಲ್ಲಿ ಜೋಗಿ ಬೆಟ್ಟ ನಿಶಾಂತ್ ಶೆಟ್ಟಿ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ.
143 ಮೀಟರ್ ಉದ್ದದ ಕರೆಯನ್ನು ಹೊಸಬೆಟ್ಟು ಗೋಪಾಲಕೃಷ್ಣ ಭಟ್ ಅವರ ಕೋಣಗಳ ಜೊತೆ ಓಡಿ 13.61 ಸೆಕುಂಡುಗಳಲ್ಲಿ ಗುರಿ ಸಾಧಿಸಿದ್ದಾರೆ. ಅಂದರೆ 100 ಮೀಟರ್ ಓಟವನ್ನು 9.52 ಸೆಕೆಂಡುಗಳಲ್ಲಿ ಓದಿ ಮುಗಿಸಿದ ಅತ್ಯುತ್ತಮ ಪರ್ಫಾರ್ಮೆನ್ಸ್ ಇದಾಗಿರುತ್ತದೆ!

ಉಸೇನ್ ಬೋಲ್ಟ್ ಗಟ್ಟಿಮುಟ್ಟಾದ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಸ್ಪೈಕ್ ಶೂ ಧರಿಸಿ ನಿರಂತರ ತರಬೇತಿ, ಸಲಕರಣೆಗಳ ಮೂಲಕ ಈ ಸಾಧನೆಗೈದರೆ, ಕರಾವಳಿಯ ಈ ಯುವಕರು ಬರಿಗಾಲಿನಲ್ಲಿ ಕೆಸರು ಗದ್ದೆಯಲ್ಲಿ ಓಡುವವರು. 28 ರ ಹರೆಯದ ಶ್ರೀನಿವಾಸ ಗೌಡನೆಂಬ ಯುವಕ ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣ ಪಡೆದು ಕಟ್ಟಡ ಕೆಲಸ ನಿರ್ವಹಿಸುವ ಬಡಕುಟುಂಬದ ಓರ್ವ ಕಾರ್ಮಿಕ.

ಅತ್ಯಾಧುನಿಕ ಸಲಕರಣೆಗಳಿಲ್ಲದೆ ಕಾಲು ಹೂತು ಹೋಗುವ ಕಂಬಳದ ಕೆಸರು ಗದ್ದೆಯಲ್ಲಿ ಓಡಿ ಈ ಸಾಧನೆಗೈದಿದ್ದಾರೆ. ಕಂಬಳ ಓಟದ ತರಬೇತಿಯ ಪ್ರಮುಖರಾದ ಕಾರ್ಬೆಟ್ಟು ರಘುರಾಮ ಶೆಟ್ಟಿ, ಇರ್ವತ್ತೂರು ಆನಂದ ಕೋಟ್ಯಾನ್, ನಕ್ರೆ ಜಯಕರ ಮಡಿವಾಳ, ಪಲಿಮಾರು ದೇವೇಂದ್ರ ಕೋಟ್ಯಾನ್, ರಾಜೇಶ್ ರವರಿಂದ ತರಬೇತಿ ಪಡೆದು ಉತ್ತಮ ಮೈಕಟ್ಟನ್ನು ಹೊಂದಿರುವ ಶ್ರೀನಿವಾಸ ಗೌಡರನ್ನು ಕೇಂದ್ರ ಕ್ರೀಡಾ ಪ್ರಾಧಿಕಾರ ಸಾಯ್ ಎಂಬ ಸಂಸ್ಥೆಯು ಪ್ರತಿಭೆಗೆ ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರೆ,ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜೀಜು,ಮಹಿಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಶ್ರೀನಿವಾಸ ಗೌಡರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.ಅಲ್ಲದೇ ಕನ್ನಡಿಗನ ಈ ಸಾಧನೆ ಕರ್ನಾಟಕಕ್ಕೂ ಒಂದು ಹೆಮ್ಮೆಯ ಸಂಗತಿಯೇ ಸರಿ.

ಆದರ್ಶ ಶೆಟ್ಟಿ

?-ಆದರ್ಶ್ ಶೆಟ್ಟಿ ಕಜೆಕ್ಕಾರ್ ಉಪ್ಪಿನಂಗಡಿ ವಿಳಾಸ: ಕಜೆಕ್ಕಾರ್ ಮನೆ,ಉಪ್ಪಿನಂಗಡಿ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು, ದ.ಕ-574241 ದೂರವಾಣಿ:9591063207

Leave A Reply

Your email address will not be published.