ಕುಡಿಯುವ ನೀರಿನ ಬಗ್ಗೆ ಗಮನಹರಿಸಿ, ಬಿಲ್ ಪಾವತಿಸದೇ ಇರುವ ನೀರಿನ ಸಂಪರ್ಕ ಕಡಿತ
ಕಾಣಿಯೂರು ಗ್ರಾ.ಪಂ. ಸಾಮಾನ್ಯ ಸಭೆ
ಕಾಣಿಯೂರು: ಕುಡಿಯುವ ನೀರಿನ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಅಲ್ಲದೇ ಮೀಟರ್ ಅಳವಡಿಸದೇ ಹಾಗೂ ಬಿಲ್ ಪಾವತಿಸಿದೇ ಇರುವ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಕಾಣಿಯೂರು ಗ್ರಾ.ಪಂ, ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಾಮಾನ್ಯ ಸಭೆಯು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ, ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಗಣೇಶ್ ಉದುನಡ್ಕರವರು, ಗುಜ್ಜರ್ಮೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರೂ ಇಷ್ಟರವರೆಗೂ ಸರಿಪಡಿಸಿದ ಹಿನ್ನಲೆಯಲ್ಲಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಲವು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದವರು ಸದಸ್ಯರ ಮಾತಿಗೆ ಗೌರವ ಇಲ್ಲವ ಎಂದ ಗಣೇಶ್ರವರು ಕುಡಿಯುವ ನೀರಿನ ಬಗ್ಗೆ ಸಮಸ್ಯೆ ಬರಬಾರದು, ಸಮಸ್ಯೆಯಿದ್ದಲ್ಲಿ ಪೋಲೀಸರ ರಕ್ಷಣೆಯಲ್ಲಿ ಸರಿಪಡಿಸಿಕೊಳ್ಳಬೇಕು. ಅಲ್ಲದೇ ಪ್ರತಿ ವಾರ್ಡ್ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬರಬಾರದು ಎಂದು ಗಣೇಶ್ ಹೇಳಿದರು.
ಕುಡಿಯುವ ನೀರಿನ ಸಂಪರ್ಕವನ್ನು ಪಡೆದುಕೊಂಡ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿ ನೀರನ್ನು ಪಡೆದುಕೊಂಡು ಬಿಲ್ ಕಡ್ಡಾಯವಾಗಿ ಪಾವತಿಸಬೇಕು. ಬಿಲ್ ಪಾವತಿಸದೇ ಇರುವ ನೀರಿನ ಸಂಪರ್ಕವನ್ನು ನಿರ್ಧಾಕ್ಷೀಣವಾಗಿ ಕಡಿತಗೊಳಿಸಲು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು ಹೇಳಿದರು.
ಪ್ಲಾಸ್ಟಿಕ್ ಚೀಲದ ಬಳಕೆ ನಿಯಂತ್ರಣದ ಕುರಿತು ಸಂಬಂಧಪಟ್ಟ ಇಲಾಖೆಯ ಸುತ್ತೋಲೆಯನ್ನು ಸಭೆಗೆ ತಿಳಿಸಿದ ಪಿಡಿಓ ಜಯಪ್ರಕಾಶ್ರವರು ಪ್ಲಾಸ್ಟಿಕ್ ಬಳಕೆ ಕುರಿತು ಪಂಚಾಯತ್ನಿಂದ ಕ್ರಮಕೈಗೊಳ್ಳಬೇಕು. ಪುಣ್ಚತ್ತಾರು ಹೊಳೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕುತ್ತಿದ್ದು ಸಂಬಂಧಪಟ್ಟವರಿಗೆ ಈ ಕುರಿತು ನೋಟಿಸ್ ನೀಡಬೇಕು ಎಂದು ಹೇಳಿದರು.
ಪ್ರತಿಕ್ರಿಯಿಸಿದ ಸದಸ್ಯ ಗಣೇಶ್ ಉದುನಡ್ಕರವರು ಸ್ವಚ್ಚತ್ತೆಯ ಕುರಿತು ನಾವು ಮಾಹಿತಿ, ಮೀಟಿಂಗ್ ಮಾಡುವ ಕೆಲಸ ಅನಗತ್ಯ. ಶೇ 20ರಷ್ಟು ಜನ ಸ್ವಚ್ಚತ್ತೆಯ ಕುರಿತು ಗಮನಹರಿಸುತ್ತಿದ್ದಾರೆ ಎಂದು ಹೇಳಿದರು.
ಶ್ರದ್ದಾಕೇಂದ್ರದಲ್ಲಿ ಪ್ರತಿ ತಿಂಗಳು ಸ್ವಚ್ಚತ್ತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಒಕ್ಕೂಟದಿಂದ ಮಾಡುತ್ತಾ ಇದ್ದೇವೆ ಎಂದು ಸದಸ್ಯ ರಾಮಣ್ಣ ಗೌಡ ಮುಗರಂಜ ಹೇಳಿದರು. ಈ ಬಗ್ಗೆ ಮಾತನಾಡಿದ ಸದಸ್ಯ ಸುರೇಶ್ ಓಡಬಾಯಿ ಕಸವನ್ನು ವಿಲೇವಾರಿ ಮಾಡುವ ಕುರಿತು ಕ್ರಮಕೈಗೊಳ್ಳಬೇಕೆಂದರು. ಸ್ವಚ್ಚತ್ತಾಗಾರ ಕೆಲಸ ನಿರ್ವಹಿಸುತ್ತಿರುವ ಪಂಚಾಯತ್ ಸಿಬ್ಬಂದಿಯೊರ್ವರ ವೇತನದಿಂದಲೇ ಶೌಚಾಲಯ ಶುಚಿತ್ವಗೊಳಿಸುವ ವ್ಯಕ್ತಿಗೂ ವೇತನ ನೀಡುತ್ತಿರುವ ಬಗ್ಗೆ ಗ್ರಾ.ಪಂ ಸದಸ್ಯೆ ಲಲಿತಾ ತೋಟ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯೆ ಕುಸುಮಾವತಿ ಕೊಪ್ಪ ಧ್ವನಿಗೂಡಿಸಿದರು.
ಪ್ರತಿಕ್ರಿಯಿಸಿದ ಗಣೇಶ್ ಉದುನಡ್ಕರವರು ಸ್ವಚ್ಚತಾಗಾರ ಸಿಬ್ಬಂದಿ ನೇಮಕಗೊಳ್ಳುವ ಸಂದರ್ಭದಲ್ಲಿ ಕಾಣಿಯೂರು ಪೇಟೆಯ ಶೌಚಾಲಯ ಶುಚಿತ್ವದ ಕುರಿತು ಸಮಸ್ಯೆಯಿತ್ತು. ಈ ಹಿನ್ನಲೆಯಲ್ಲಿ ಅಂದು ಶೌಚಾಲಯ ಶುಚಿತ್ವಗೊಳಿಸುವ ವ್ಯಕ್ತಿಯನ್ನು ನೇಮಿಸಿ ಸ್ವಚ್ಚತ್ತಾಗಾರ ಸಿಬ್ಬಂದಿಯ ಸಂಬಳದಿಂದ ನೀಡುವಂತೆ ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಈ ಆಡಳಿತ ಮಂಡಳಿಯೂ ಅದೇ ರೀತಿ ಮುಂದುವರಿಸಲಿದೆ ಎಂದು ಗಣೇಶ್ ಹೇಳಿದರು.
ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನ ಎದುರುಗಡೆ ಇರುವ ವಿದ್ಯುತ್ ಪರಿವರ್ತಕ ಅಪಾಯದ ಸ್ಥಿತಿಯಲ್ಲಿದ್ದು, ಬಹಳ ಹಳೆಯ ಪರಿವರ್ತಕವಾಗಿರುವ ಹಿನ್ನಲೆ ಹಾಗೂ ಅಪಾಯದ ಸ್ತೀತಿಯಲ್ಲಿರುವುದರಂದ ಶೀಘ್ರ ಸ್ಥಳಾಂತರಕ್ಕೆ ಸದಸ್ಯ ಸುರೇರ್ಶ ಓಡಬಾಯಿ ಸಂಬಂಧಪಟ್ಟ ಇಲಾಖೆಗೆ ಬರೆಯಲು ಒತ್ತಾಯಿಸಿದರು.
ಈ ಬಗ್ಗೆ ಸ್ಥಳಾಂತರಕ್ಕೆ ಬರೆಯಲು ನಿರ್ಣಯಿಸಲಾಯಿತು. ಕಳಂಗಾಜೆ ಮಾಡ ಬಳಿ ಪೈಪುಲೈನು ವಿಸ್ತರಣೆ ಮಾಡಬೇಕು ಎಂದು ಸದಸ್ಯ ದಿನೇಶ್ ಗೌಡ ಇಡ್ಯಡ್ಕ ಹೇಳಿದರು. ಅಲ್ಲದೇ ಕೀಲೆ ಕಳಂಗಾಜೆ ಉಳ್ಳಾಕುಲ ದೈವಸ್ಥಾನದ ಬಳಿ ಬೀದಿ ದೀಪ ಅಳವಡಿಸುವಂತೆ ದಿನೇಶ್ ಇಡ್ಯಡ್ಕ ಒತ್ತಾಯಿಸಿದರು. ತೆರಿಗೆ ಪರಿಷ್ಕರಣೆ ಮಾಡುವ ಹಿನ್ನಲೆಯಲ್ಲಿ ಸರ್ವೆ ಕಾರ್ಯಮಾಡಬೇಕು ಎಂದು ದಿನೇಶ್ ಇಡ್ಯಡ್ಕ ಹೇಳಿದರು. ಈ ಕುರಿತು ಮಾತನಾಡಿದ ಪಿಡಿಓ ಜಯಪ್ರಕಾಶ್ರವರು ತೆರಿಗೆ ಪರಿಷ್ಕರಣೆ ಕಡ್ಡಾಯವಾಗಿ ಆಗಬೇಕಾಗಿದೆ. ಬಡತನದ ವ್ಯಕ್ತಿ ಒಂದು ಸಾವಿರ ತೆರಿಗೆ ಕಟ್ಟುತ್ತಿದ್ದರೆ, 300 ರೂ ತೆರಿಗೆ ಕಟ್ಟುತ್ತಿರುವ ವ್ಯಕ್ತಿಯ ಮನೆ ಅರಮನೆಯಂತಿದೆ. ಇಂತಹ ತಾರತಮ್ಯ ಯಾಕೆ ಎಂದ ಪಿಡಿಓ ಕಡ್ಡಾಯವಾಗಿ ತೆರಿಗೆ ಪರಿಷ್ಕರಣೆ ಸರ್ವೆ ನಡೆಯಬೇಕಾಗಿದೆ ಎಂದರು. ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿಯೇ ತೆರಿಗೆ ಪರಿಷ್ಕರಣೆ ಸರ್ವೆ ನಡೆಸುವ ಕುರಿತು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ, ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಗ್ರಾ.ಪಂ, ಸದಸ್ಯರಾದ ದಿನೇಶ್ ಗೌಡ ಇಡ್ಯಡ್ಕ, ಗಣೇಶ್ ಉದುನಡ್ಕ, ರಾಮಣ್ಣ ಗೌಡ ಮುಗರಂಜ, ಬೇಬಿ ಕುಕ್ಕುಡೇಲು, ಸೀತಮ್ಮ ಖಂಡಿಗ, ಸುಮಿತ್ರಾ ಕೂರೇಲು, ಉಮೇಶ್ ಆಚಾರ್ಯ ದೋಳ್ಪಾಡಿ, ಬಾಬು ಪುಣ್ಚತ್ತಾರು, ಸುರೇಶ್ ಓಡಬಾಯಿ, ವೀರಪ್ಪ ಗೌಡ ಉದ್ಲಡ್ಡ, ಪದ್ಮನಾಭ ಅಂಬುಲ, ಕುಸುಮಾವತಿ ಕೊಪ್ಪ, ಲಲಿತಾ ತೋಟ, ರುಕ್ಮಿಣಿ ನಾಗಲೋಕ ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಇಲಾಖಾ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಸ್ವಾಗತಿಸಿ, ಜಮಾಖರ್ಚು ವಾಚಿಸಿದರು. ಸದಸ್ಯೆ ರುಕ್ಮಿಣಿ ನಾಗಲೋಕ ವಂದಿಸಿದರು.