ಆದಿ ಸುಬ್ರಹ್ಮಣ್ಯದಂತೆ ಹುತ್ತಕ್ಕೆ ಪೂಜೆ ಸಲ್ಲಿಸುವ ಇನ್ನೊಂದು ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ ?

ಪುತ್ತೂರು : ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವುದು ಎಲ್ಲರಿಗೂ ತಿಳಿದ ಸಂಗತಿ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ದೇವಳವೊಂದಿದೆ. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆದಿ ಕುಕ್ಕೆಯ ಮಾದರಿಯಲ್ಲಿ ಆರಾಧನೆ ನಡೆಯುತ್ತದೆ. ಹಾಗಾಗಿ ಭಕ್ತರ ಪಾಲಿಗೆ ಇದು ಎರಡನೆಯ ಸುಬ್ರಹ್ಮಣ್ಯ. ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ಬಾಯಂಬಾಡಿ ಪಾಲ್ತಾಡಿ ತನಕ ಹಬ್ಬಿರುವ ಪರ್ವತ ಪಂಕ್ತಿಯ ಮಧ್ಯ ಭಾಗ ನಳೀಲು. ನಾಲ್-ಇಲ್ ಸೇರಿ ನಳೀಲು ಆಗಿದೆ.

ತುಳುವಿನಲ್ಲಿ ನಾಲ್ ಎಂದರೆ ನಾಲ್ಕು, ಇಲ್ಲ್ ಎಂದರೆ ಮನೆ ಎಂದರ್ಥ. ಪಾಕೃತಿಕ ಸೊಬಗಿನ ಊರಿದು. ಇಲ್ಲಿ ನಾಗರೂಪೀ ಸುಬ್ರಹ್ಮಣ್ಯ ಹತ್ತೂರಿನ ಭಕ್ತರ ಆರಾಧ್ಯ ದೇವರು. ಇತಿಹಾಸದ ಪ್ರಕಾರ ನಳೀಲಿನ ಸುಬ್ರಹ್ಮಣ್ಯ ಗುಡಿ ಮೂಲತಃ ಜೈನರಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರಬೇಕು. 300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದೆ. ಗುಡಿಯು ಪಾಳು ಬಿದ್ದಾಗ ಮೂರ್ತಿಯ ಸುತ್ತ ಹುತ್ತ ಬೆಳೆದು, ಬಳಿಕ ಅದಕ್ಕೆ ಆರಾಧನೆ ಸಲ್ಲುತ್ತದೆ ಎಂಬ ಐತಿಹ್ಯ ಇದೆ.

ಹುತ್ತರೂಪದಲ್ಲಿ ನೆಲೆ ನಿಂತ ಸುಬ್ರಹ್ಮಣ್ಯನಿಗೆ ಬಗೆ-ಬಗೆಯ ಸೇವೆಗಳು ಅರ್ಪಣೆಯಾಗುತ್ತಿದೆ. ದಿನನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸುತ್ತಾರೆ. ಹುತ್ತರೂಪದ ಗುಡಿಗೆ ಆರಾಧನೆ ನಡೆಯುತ್ತದೆ. ಪೂಜೆಯ ಬಳಿಕ ಬಟ್ಟಲಲ್ಲಿ ಹಾಲು-ನೀರಿಟ್ಟು ಬರುತ್ತಾರೆ. ಈ ಹಾಲನ್ನು ನಾಗ ಕುಡಿಯುತ್ತಾನೆ ಎಂಬ ನಂಬಿಕೆ ಇದರ ಹಿಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಆಗಾಗ ನಾಗ ಪ್ರತ್ಯಕ್ಷನಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಆಳೆತ್ತರಕ್ಕೆ ನಿಂತ ವಾಲ್ಮೀಕ ಕೆಲವೊಮ್ಮೆ ಪವಾಡದಂತೆ ಕುಬ್ಜಗೊಳ್ಳುವುದು ಇದೆ. ದೇವಳ ಪಕ್ಕದಲ್ಲಿನ ಸಣ್ಣ ಕುಂಡಿಕೆಯೊಂದರಲ್ಲಿ ನೀರು ಮೇಲೇಳುತ್ತಿರುವುದು ವಿಶೇಷ.

ಬಿರು ಬೇಸಿಗೆಯಲ್ಲೂ ನೀರು ಬತ್ತುವುದಿಲ್ಲ. ಇಲ್ಲಿ ಆಶ್ಲೇಷ ಬಲಿ, ಸರ್ಪ ಸೇವೆ ನಡೆಯುತ್ತದೆ. ಅದರ ಜತೆಗೆ ರಂಗಪೂಜೆ, ಹೂವಿನಪೂಜೆ, ನಾಗತಂಬಿಲ ಮೊದಲಾದ ಸೇವೆಗಳಿವೆ. ಎರಡು ದಿನಗಳ ಕಾಲ ಚಂಪಾ ಷಷ್ಠಿ ಮಹೋತ್ಸವ ಕೂಡ ವಿಜೃಂಭಣೆಯಿಂದ ಜರಗುತ್ತದೆ. ಷಷ್ಟಿ ವೃತವು ಇಲ್ಲಿದೆ. ವಿಶೇಷ ಕಾರ್ತಿಕ ಪೂಜೆಯು ನಡೆಯುತ್ತದೆ. ಪ್ರತೀ ವರ್ಷ ಫೆ.23 ಮತ್ತು ಫೆ.24 ರಂದು ವರ್ಷಾವಧಿ ಜಾತ್ರೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯುತ್ತದೆ.

Leave A Reply

Your email address will not be published.