ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!

  • ಸುದರ್ಶನ್ ಬಿ. ಪ್ರವೀಣ್, ಬೆಳಾಲು

ಇತ್ತೀಚೆಗೆ ಬೆಂಗಳೂರಿನ ಟಿಕ್ಕಿ ಅಮೃತಾ ತನ್ನ ಹೆತ್ತಮ್ಮನನ್ನೇ ಇರಿದು ಕೊಂದು ಹಾಕಿದ್ದಳು. ಅಲ್ಲದೆ ತನ್ನ ಸಹೋದರನಿಗೂ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದಳು. ಆತನ ಅದೃಷ್ಟ ಗಟ್ಟಿಯಾಗಿತ್ತು. ಬದುಕುಳಿದು ಬಿಟ್ಟ.

ಈ ಒಂದು ಕ್ರೌರ್ಯವನ್ನು ದಿನಂಪ್ರತಿ ದೇಶಾದ್ಯಂತ ನಡೆಯುತ್ತಿರುವ ನೂರಾರು ಹಿಂಸಾ ಚಟುವಟಿಕೆಗಳಲ್ಲಿ ಒಂದು ಎಂದು ನಾವು ಪರಿಗಣಿಸಬಹುದು. ಆದರೆ ನಾವಿವತ್ತು ನಿಮ್ಮ ಗಮನಕ್ಕೆ ತರುತ್ತಿರುವುದು ಬೇರೆಯದೇ ವಿಷಯ.

ಈ ಟೆಕ್ಕಿ ಅಮೃತ ಕೊಂದಿರುವುದಾದರೂ ಯಾರನ್ನು ?

ಆಕೆ ತನ್ನ ಸ್ವಂತ ಅಮ್ಮನನ್ನೇ ಕೊಂದು ಮುಗಿಸಿದ್ದಾಳೆ. ಆಕೆಯ ಪೋಷಕರು ಮಧ್ಯಮವರ್ಗದವರು. ಹಾಗಾಗಿ ಆಕೆಗೆ ಅತ್ಯುತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ. ಆಕೆ ಕೂಡ ಚೆನ್ನಾಗಿ ಓದಿಕೊಂಡು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದಾಳೆ. ದುಡಿಯಲು ಶುರುಮಾಡಿದ್ದಾಳೆ.

ಬೆಂಗಳೂರಿಂದ ಮಹಾನಗರಿಯ ಥಳಕು-ಬಳಕುಗೆ, ಮಾಲ್ ಗಳಿಗೆ ಎಡತಾಕುವ ಕಲರ್ಫುಲ್ ವ್ಯಕ್ತಿತ್ವಗಳ ಆಕರ್ಷಣೆಗೆ, ಉನ್ಮತ್ತ ವೀಕೆಂಡುಗಳಿಗೆ ಆಕೆ ಬಹು ಬೇಗ ಬಲಿ ಬಿದ್ದಳು. ನೋಡ ನೋಡುತ್ತಿದ್ದಂತೆ ಸಾಲ ಹೆಗಲೇರಿತು. ಒಂದು ಸಾಲ ತೀರಿಸಲು ಮತ್ತೊಂದು ಸಾಲ. ಇರೋಬರೋ ಬ್ಯಾಂಕುಗಳ ಕ್ರೆಡಿಟ್ ಕಾರ್ಡುಗಳನ್ನು ಸಿಕ್ಕಸಿಕ್ಕಲ್ಲಿ ಉಜ್ಜತೊಡಗಿದಳು. ಕಾರ್ಡು ಗೀಚಿ ಗೀಚಿ ಆ ದುಡ್ಡಲ್ಲಿ ಕಾರು ಕೊಂಡಳು. ಎಲ್ಲಾ ಆಗಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬರೋಬ್ಬರಿ 15 ಲಕ್ಷ ರುಪಾಯಿ ಸಾಲ ತಲೆಯ ಮೇಲೆ ಭಾರವಾಗಿ ಕೂತಿತ್ತು ! ಬ್ಯಾಂಕಿನ ಕಲೆಕ್ಷನ್ ಏಜೆಂಟರು ಬೆನ್ನು ಬಿದ್ದಿದ್ದರು. ಯಾವಾಗ ಅಮ್ಮನಲ್ಲಿ ಸಾಲ ತೀರಿಸಲು ದುಡ್ಡು ಕೇಳಿದಳೋ, ಅಮ್ಮ ಅಷ್ಟು ದೊಡ್ಡ ಮೊತ್ತ ಕೊಡಲು ಸಹಜವಾಗಿ ಅಮ್ಮ ನಿರಾಕರಿಸುತ್ತಾಳೆ.

ಅಷ್ಟೇ! ಸೀದಾ ಎದ್ದು ಹೋಗಿ ಅಕೌಂಟಿನಲ್ಲಿ ಅಳಿದುಳಿದ ದುಡ್ಡಿನಿಂದ ಆನ್ ಲೈನ್ ನಿಂದಲೇ ಒಂದು ಚೂರಿಯನ್ನು ಆರ್ಡರ್ ಮಾಡುತ್ತಾಳೆ. ಡೆಲಿವರಿಯ ಹುಡುಗ ಕೈಗೆ ಚೂರಿ ಬಾಕ್ಸ್ ನೀಡಿದ್ದೇ ತಡ. ಚೂರಿಯನ್ನು ವೇಗವಾಗಿ ಹಿಂದಕ್ಕೆಳೆದುಕೊಂಡು ಅಮ್ಮನ ಮೇಲೆ ಆಕ್ರಮಣ ಮಾಡುತ್ತಾಳೆ. ನಿಷ್ಪಾಪಿ ಅಮ್ಮ, ತಾನೇ ರಕ್ತ ಮಾಂಸ ಕೂಡಿಸಿ ಬೆಳೆಸಿದ ಕಾರಣಕ್ಕಾಗಿ ಗೋಣು ಚೆಲ್ಲಿ ಮಲಗುತ್ತಾಳೆ. ಇದೊಂದು ಪ್ಲಾನ್ ಡ್ ಕೋಲ್ಡ್ ಬ್ಲಡೆಡ್ ಮರ್ಡರ್ !

ನಾನಿವತ್ತು ಅನಿವಾರ್ಯವಾಗಿ ಹೆತ್ತಮ್ಮನನ್ನು ಕೊಂದ ಅಮೃತಾಳ ಪ್ರಕರಣವನ್ನು ಆ ದಿನ ದೆಹಲಿಯ ಚಲಿಸುತ್ತಿರುವ ಬಸ್ಸಿನಲ್ಲಿ ನಿರ್ಭಯಾ ಅತ್ಯಾಚಾರ ಮಾಡಿದ ಹಂತಕರಿಗೆ ಪರಸ್ಪರ ಹೋಲಿಸಿ ನೋಡಬೇಕಾಗಿದೆ.
ನೀವು ಕೂಡ ಒಂದರೆ ಕ್ಷಣ ಈ ಬಗ್ಗೆ ಯೋಚಿಸಿ. ನಿಮ್ಮ ಪ್ರಕಾರ ಯಾವುದು ಅತ್ಯಂತ ಹೀನ ಕೃತ್ಯ? ಸ್ವಂತ ಅಮ್ಮನನ್ನು, ಕೈತುತ್ತು ಕೊಟ್ಟು ಬೆಳೆಸಿದ, ಬದುಕು ಕಲಿಸಿದ ತಾಯಿಯನ್ನು ಕೊಂದದ್ದು ಹೆಚ್ಚು ಪಾಪಕಾರ್ಯವೋ ಅಥವಾ ಯಾವುದೋ ಅನಾಮಿಕ ಹುಡುಗಿಯೊಬ್ಬಳನ್ನು ತಮ್ಮ ಸೆಕ್ಸ್ ಗಾಗಿ ಬಳಸಿಕೊಂಡು ಕೊಂದುಹಾಕಿದ ನಿರ್ಭಯ ಹಂತಕರ ಮನಸ್ಥಿತಿಯಾ? ಅಥವಾ ಎರಡೂ ಸಮಾನ ಶಿಕ್ಷೆಯ ಅಪರಾಧವಾ?

ದೆಹಲಿಯ ನಿರ್ಭಯಳನ್ನು ಆ ದಿನ ಅತ್ಯಾಚಾರ ಮಾಡಿ ಕೊಲೆಮಾಡಿದ್ದು ಆ ರಾತ್ರಿ ಮಿನಿ ಬಸ್ಸಿನಲ್ಲಿ ಆಕೆಯನ್ನು ಕಂಡಾಗ. ನಿರ್ಭಯ ಅವರ ಪಾಲಿಗೆ ಅಪರಿಚಿತಳಿದ್ದಳು. ಅದು ಹಂತಕರು ತಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ. ಅದು ಪ್ಲಾನ್ಡ್ ಮರ್ಡರ್ ಅಲ್ಲ. ಅಷ್ಟೇ ಅಲ್ಲದೆ ಅವರೆಲ್ಲ ಬಡವರು, ಸರಿಯಾದ ಶಿಕ್ಷಣವಿಲ್ಲದೆ ಕ್ಲೀನರು-ಡ್ರೈವರ್ ಗಳಾಗಿ ಜೀವನ ಶುರು ಮಾಡಿದವರು. ಮನೆಯ ಕಡೆಯೂ ತೀರಾ ಬಡವರು. ಅವರ ಸುತ್ತ ಮುತ್ತಲ ಸಮಾಜವೂ ಅಂತಹುದ್ದೇ. ಹಾಗಾದರೂ, ಹಿಂಸೆಯ ತೀವ್ರತೆಯ ಕಾರಣಕ್ಕಾಗಿ ಆ ನಾಲ್ಕೂ ಜನ ಹಂತಕರಿಗೆ ಗಲ್ಲು ಶಿಕ್ಷೆಯಾಗುತ್ತದೆ.

ಇವತ್ತಿನ ಅಮೃತಾಳು ಮಾಡಿದ್ದು ಪ್ಲಾನ್ಡ್ ಮರ್ಡರ್. ಪ್ಲಾನ್ಡ್ ಮರ್ಡರ್ ಅನ್ನು ಕೋರ್ಟು ಕಠೋರವಾಗಿ ತೆಗೆದುಕೊಳ್ಳುತ್ತದೆ. ಯಾಕೆಂದರೆ, ಪ್ಲಾನ್ ಮಾಡುವಾತನಿಗೆ/ ಮಾಡುವಾಕೆಗೆ ಸರಿ-ತಪ್ಪನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯಾವಕಾಶವಿರುತ್ತದೆ. ಅದಲ್ಲದೆ, ಅಮೃತಾಳದು ಹಿಂಸೆಯ, ಪೈಶಾಚಿಕತೆಯ ಪರಾಕಾಷ್ಠೆ. ಯಾಕೆಂದರೆ, ಓರ್ವ ಹೆಣ್ಣಾಗಿ, ಆಕೆ ಕತ್ತು ಸೀಳಿ ಹಾಕಿದ್ದು ತನ್ನ ಸ್ವಂತ ಅಮ್ಮನನ್ನೇ ! ಹಾಗಾದರೆ ಅಮೃತಾಗೂ ಗಲ್ಲು ಶಿಕ್ಷೆಯಾಗುತ್ತ ?

ಬೇಕಾದರೆ ನೀವು ನೋಡುತ್ತಾ ಇರಿ ; ಈ ಅಮೃತ ವರ್ಷವಾಗುವುದರೊಳಗಾಗಿ ಜೈಲಿನಿಂದ ಹೊರಬರುತ್ತಾಳೆ ! ಯಾಕೆಂದರೆ ಇದು ಭವ್ಯ ಭಾರತ ! ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವದ ದೇಶ !! ಅಸಮಾನ ಕಾನೂನುಗಳ ದೇಶ !! ಮೀಡಿಯಾದಲ್ಲಿ ಬಂದು ದೊಡ್ಡ ಮಟ್ಟದ ಪ್ರಚಾರ ಬಂದರೆ ಅದಕ್ಕೆ ಒಂದು ಶಿಕ್ಷೆ, ಇಲ್ಲದಿದ್ದರೆ ಇನ್ನೊಂದು ಥರದ ಶಿಕ್ಷೆ. ಅಮೃತಾಳ ಎದುರು, ಅವಳ ತಾಯಿಯ ಪರವಾಗಿ ಬೀದಿಯಲ್ಲಿ ನಿಂತು ಕ್ಯಾಂಡಲ್ ಹೊತ್ತಿಸಲು ಸಮಯ ಯಾರಿಗಿದೆ ? ನಿರ್ಭಯಾ ವಿದ್ಯಾರ್ಥಿನಿಯಾಗಿದ್ದಳು. ಅವಳಿಗೆ ವಿದ್ಯಾರ್ಥಿಗಳ ಸಪೋರ್ಟ್ ಸಿಕ್ಕಿತು. ಸಪೋರ್ಟ್ ಸಿಕ್ರೆ ಮಾತ್ರ ನ್ಯಾಯಾನಾ ? ಚೆನ್ನಾಗಿದೆ.

ಅವತ್ತು ನಿರ್ಭಯ ಹಂತಕರ ಎದುರು ಕೂಗುಹಾಕಲು, ಬೀದಿಯಲ್ಲಿ ಬಂದು ನಿಲ್ಲಲು ಘೋಷವಾಕ್ಯ ಮೊಳಗಿಸಲು, ಸೋಶಿಯಲ್ ಮೀಡಿಯಾದಲ್ಲಿ ಮೆಸೇಜುಗಳ ಮಹಾಪೂರವನ್ನೇ ಹರಿಸಲು ಮಹಿಳೆಯರು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸೋಕಾಲ್ಡ್ ಚಿಂತಕರು – ಇಡೀ ದೇಶಕ್ಕೆ ದೇಶವೇ ಎದ್ದು ಕುಳಿತಿತ್ತು. ಮೀಡಿಯಾಗಳು ಸಿಕ್ಕ ಅವಕಾಶವನ್ನು ಬಾಚಿಕೊಂಡು ಗಜೆಟ್ ಗಟ್ಟಲೆ ಬರೆದು ಬರೆದು ಹಾಕುತ್ತಿದ್ದರು. ಅದು ಇವತ್ತಿಗೂ ನಿಂತಿಲ್ಲ. ಈಗ ಅಮೃತಾಳ ನತದೃಷ್ಟ ತಾಯಿಯ ಪರವಾಗಿ ಮಾತಾಡಲು ಸ್ತ್ರೀ ಹೋರಾಟಗಾರರ ಗಂಟಲು ಯಾಕೆ ಕಟ್ಟಿದೆ ? ಆ ದಿನ ಬೀದಿಗಿಳಿದಿದ್ದ ವಿದ್ಯಾರ್ಥಿ-ವಿದ್ಯಾರ್ಥಿಗಳೇನು ಮೊಬೈಲು ಕೈಲಿ ಹಿಡಿದು ವಾಟ್ಸ್ ಅಪ್ ನಲ್ಲಿ ಬ್ಯುಸಿ ಇದ್ದಾರಾ?

ನಮ್ಮ ಕಾನೂನು ಕೂಡ ಹಾಗೆ ಇದೆ. ನಮ್ಮಲ್ಲಿ ಸಮಾನ ಕಾನೂನಿಲ್ಲ. ಸ್ತ್ರೀಯರ ಪರ ಇವೆ ನಮ್ಮ ಎಲ್ಲ ಕಾನೂನುಗಳು. ಇಲ್ಲದೆ ಹೋದರೆ, ಸ್ತ್ರೀಯರ ಹಕ್ಕುಗಳಿಗೆ ಹೋರಾಡುವ ಜನರು, ವಿದ್ಯಾರ್ಥಿಗಳು ಅಮೃತಾಳ ತಾಯಿಯ ಪರವಾಗಿ ಕೂಗು ಹಾಕಬೇಕು ; ಅಮೃತಾಳಿಗೂ ಗಲ್ಲು ಶಿಕ್ಷೆ ಕೊಡಿಸುವಂತಾಗಬೇಕು ! ನಮಗೆ ಸಾವಿನಲ್ಲೂ ಸಮಾನತೆ ಬೇಕು !!

ರೈತ ಸ್ನೇಹಿ ಲ್ಯಾಡರ್ ವಿದ್ಯುತ್ ಶಾಕ್ ಹೊಡ್ಯಲ್ಲ

1 Comment
  1. Bkc says

    ಖಂಡಿತವಾಗಲೂ ಆಕೆಗೆ ಗಲ್ಲು ಶಿಕ್ಷೆ ಆಗಲೇ ಬೇಕು

Leave A Reply

Your email address will not be published.