ಕುಂಡಡ್ಕ | ನಿಗೂಢವಾಗಿ ಕಣ್ಮರೆಯಾಗಿದ್ದ ಬಾಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆ
ಸವಣೂರು: ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ಬೆಳಿಗ್ಗೆ ನಾಪತ್ತೆಯಾದ ಕುಂಞ ಅವರ ಪುತ್ರ, ಪಾಲ್ತಾಡಿ ಗ್ರಾಮದ ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ( 11) ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.
ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಯಿಯ ಬಳಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ. ತುಂಬಾ ಹೊತ್ತಾದರೂ ಬಾರದಿರುವ ಕಾರಣ ಮನೆ ಮಂದಿ ಹುಡುಕಾಟ ನಡೆಸಿದ್ದು. ಆದರೆ ಆತ ಪತ್ತೆಯಾಗಿರಲಿಲ್ಲ.
ಮಗುವಿನ ನೆಂಟರ, ಗೆಳೆಯರ ಮನೆಗೆಲ್ಲ ಹುಡುಕಿದರೂ ಪತ್ತೆಯಾಗಿರಲಿಲ್ಲ.ಈ ನಡುವೆ ಬಾಲಕ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೆತ್ತವರ ಮುಖದಲ್ಲಿ ಈಗ ಒಂದು ನಿರಾಳತೆ.
ನಾಪತ್ತೆಯಾದ ಕೂಡಲೇ ಊರವರು ವಿವಿದೆಡೆ ಹುಡುಕಾಟ ನಡೆಸಿದರು. ಸವಣೂರು ಕಡೆಗೆ ಬಂದಿರಬಹುದೆಂಬ ಮಾಹಿತಿಯಿಂದ ಸವಣೂರು ಗ್ರಾ.ಪಂ.ಸಿ.ಸಿ.ಕೆಮರಾದಲ್ಲಿ ಫುಟೇಜ್‌ನ್ನು ನೋಡಲಾಯಿತು. ಬೆಳಿಗ್ಗೆ 8 ಗಂಟೆಗೆ ಬೆಳ್ಳಾರೆ ಯಿಂದ ಕುಂಡಡ್ಕ ಮೂಲಕ ಸವಣೂರು ಮಾರ್ಗವಾಗಿ ಪುತ್ತೂರು ಗೆ ಹೋಗುವ ಬಸ್ನಲ್ಲಿ ಹೋಗಿರಬಹುದೆಂಬ ಗುಮಾನಿಯಿಂದ ಬೆಳ್ಳಾರೆ ಸಂಚಾರ ನಿಯಂತ್ರಣಾಧಿಕಾರಿಯವರನ್ನು ಸಂಪರ್ಕಿಸಿ ಆ ಬಸ್‌ನ ನಿರ್ವಾಹಕರಲ್ಲಿ ವಿಚಾರಿಸಿದಾಗ ಕುಂಡಡ್ಕ ದಿಂದ ಬೆಳಿಗ್ಗೆ ಬಾಲಕನೋರ್ವ ಹತ್ತಿ ಪುತ್ತೂರಿನಲ್ಲಿ ಇಳಿದನೆಂದು ತಿಳಿಸಿದ್ದು, ಬಳಿಕ ಮನೆಯವರು ಪುತ್ತೂರು ಬಸ್‌ನಿಲ್ದಾಣಕ್ಕೆ ತೆರಳಿ ಬಾಲಕನನ್ನು ಪತ್ತೆಹಚ್ಚಿದ್ದರು. ಬೆಳ್ಳಾರೆ ಪೊಲೀಸರು ಪತ್ತೆಹಚ್ಚುವಲ್ಲಿ ಶ್ರಮಿಸಿದರು. ಊರ ಹಲವು ಸಂಘಟನೆಯ ಯುವಕರೂ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.