ಫೆ.8 : ಕಲ್ಲೇಗ ಕಲ್ಲುಡ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ
ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.8ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಫೆ.8ರಂದು ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ನಂತರ ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ಶ್ರೀ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ಗೋಂದಲು ಪೂಜೆ, ನಂತರ ಶ್ರೀ ಕಲ್ಲುಡ ಕುಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ ಎಂದು ಶ್ರೀ ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಹಿನ್ನೆಲೆ
ಇತಿಹಾಸ ಪ್ರಸಿದ್ಧ ಪುತ್ತೂರು ತಾಲೂಕಿನ ಕಲ್ಲೇಗ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಸ್ಥಾನ ತುಳುನಾಡಿನ ಪ್ರಮುಖ ಆರಾಧನಾ ಕೇಂದ್ರ ಗಳಲ್ಲೊಂದು. ಪುತ್ತೂರಿ ನಿಂದ ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಮೂರು ಕಿ.ಮೀ. ಕ್ರಮಿಸಿದಾಗ ಸಿಗುವ ಈ ದೈವಸ್ಥಾನ ವಿಶೇಷ ಸಾಹಿಧ್ಯ ಹೊಂದಿದ ಕ್ಷೇತ್ರವಾಗಿದೆ. ಕಲ್ಲೇಗದಲ್ಲಿ ಪ್ರಮುಖವಾಗಿ ಆರಾಧಿಸಲ್ಪಡುವ ದೈವಗಳು ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ. ಇವಲ್ಲದೆ ಧೂಮಾವತಿ, ಪೊಟ್ಟಭೂತ, ಮಹಾಮ್ಮಾಯಿ ಮತ್ತು ಮಾರಿಗುಳಿಗ ಶಕ್ತಿಗಳನ್ನು ಆರಾಧಿಸಲಾಗುತ್ತಿದೆ. ಶ್ರೀ ಕ್ಷೇತ್ರದ ಪ್ರಧಾನ ಆರಾಧ್ಯ ದೈವ ಕಲ್ಕುಡ ದೈವದ ಗುಡಿ ಸಂಪೂರ್ಣ ಶಿಲಾಮಯದಿಂದ ಕೂಡಿದ್ದು, ತಾಮ್ರದ ಹೊದಿಕೆಯ ಚಾವಣಿಯನ್ನು ಹೊಂದಿದೆ.
ಎಡ ಭಾಗದಲ್ಲಿ ಕಲ್ಲುರ್ಟಿ, ಬಲಭಾಗದಲ್ಲಿ ಮಹಾಮ್ಮಾಯಿಯ ಗುಡಿಯಿದೆ. ಈ ಮೂರು ಗುಡಿಗಳಲ್ಲೂ ಪೀಠವಿದ್ದು ದೀಪ ಸಂಕಲ್ಪದಲ್ಲಿ ಶಕ್ತಿಗಳನ್ನು ಆರಾಧಿಸಲಾಗುತ್ತಿದೆ. ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ಗುಳಿಗನಿಗೆ ಆರೂಢದ ಹೊರ ಪಾರ್ಶ್ವದ ಆಗ್ನೇಯದಲ್ಲಿ ಕಟ್ಟೆ ಕಟ್ಟಲಾಗಿದೆ. ಹೊರ ಭಾಗದ ವಾಯುವ್ಯದಲ್ಲಿ ಪಶ್ವಿಮಾಶ್ರ ಯವಾಗಿರುವ ಜೂಮ್ರ ಜೂಮಾದಿ, ಪೊಟ್ಟ ಭೂತ ಸಾನಿಧ್ಯಕ್ಕೆ ಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಶಕ್ತಿಗಳನ್ನು `ಶಿಲಾ ಸಂಕಲ್ಪದಲ್ಲಿ ಪೂಜಿಸಲಾಗುತ್ತಿದೆ.
ಆವರಣದ ಹೊರ ಪಾರ್ಶ್ವ ನೈರುತ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ನಾಗನಿಗೆ ಕಟ್ಟೆ ನಿರ್ಮಿಸಿ ನಾಗಬ್ರಹ್ಮ ನಾಗರಾಜ, ನಾಗಕನ್ನಿಕೆ ಮತ್ತು ಎರಡು ಉಪನಾಗ ಬಿಂಬಗಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ನೇಮೋತ್ಸವದ ದಿನ ಬೆಳಿಗ್ಗೆ ನಾಗತಂಬಿಲ ನಡೆಯುತ್ತದೆ.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರಿಗೂ ಕಲ್ಕುಡ ದೈವಸ್ಥಾನಕ್ಕೂ ಅವಿನಾಭಾವ ಸಂಬಂಧವಿದ್ದು, ಪುತ್ತೂರು ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯು ಕಲ್ಲೇಗ ದೈವಸ್ಥಾನದ ಕಟ್ಟೆಯಲ್ಲಿ ನಡೆಯುತ್ತದೆ.
ಭಂಡಾರ ಮನೆ-ಕಾರ್ಜಾಲು ಗುತ್ತು
ನೇಮೋತ್ಸವದಂದು ಶ್ರೀ ಕಲ್ಕುಡ ದೈವಗಳ ಭಂಡಾರವನ್ನು `ಕಾರ್ಜಾಲು ಗುತ್ತು’ ಮನೆಯಿಂದ ಪಲ್ಲಕ್ಕಿಯಲ್ಲಿರಿಸಿ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ತರುವುದು ಸಂಪ್ರದಾಯ. `ಕಾರ್ಜಾಲು ಗುತ್ತು’ ಕಲ್ಲೇಗದ ಭಂಡಾರ ಮನೆಯಾಗಿದ್ದು ಇದು ಆಡಳಿತ ಮೊಕ್ತೇಸರರ ಮನೆಯೂ ಆಗಿದೆ.
‘ಕಾರ್ಜಾಲು ಗುತ್ತು’ ಬಗ್ಗೆ ಹೇಳುವುದಾದರೆ ಇಲ್ಲಿನ ಪ್ರಧಾನ ದೈವ ಧೂಮಾವತಿ, ಧೂಮಾವತಿ ಬಂಟ (ಧೂಮಾವತಿ ದೈವದ ಸೇವಕ ದೈವ) ಈ ದೈವಗಳು ಪ್ರಾಚೀನ ಶಕ್ತಿಗಳಾಗಿದ್ದು, ಕಲ್ಕುಡ-ಕಲ್ಲುರ್ಟಿ ಅನಂತರ ಇಲ್ಲಿಗೆ ಬಂದ ದೈವಗಳು. ಮುಂದೆ ಸಾರ್ವಜನಿಕ ಆರಾಧನೆಗಾಗಿ ಕಲ್ಲೇಗದಲ್ಲಿ ನೆಲೆ ನಿಂತಾಗ ಗ್ರಾಮ ದೈವಗಳಾಗಿ ಕಲ್ಕುಡ-ಕಲ್ಲುರ್ಟಿ ದೈವಗಳು ಪ್ರಧಾನವಾಗಿ ಆರಾಧಿಸಲ್ಪಟ್ಟವು. ಕಲ್ಲೇಗದ ಕಲ್ಕುಡನಿಗೆ ಮರದ ಹುಲಿಯ ಬಂಡಿ ಇದ್ದು ಕಲ್ಕುಡನನ್ನು ಇಲ್ಲಿ `ರಾಜನ್ ದೈವ’ ಎಂದು ಪರಿಗಣಿಸಲಾಗಿದೆ.
ಹುಲಿ ಮೇಲೆ ಕೂತಿರುವ ಕಲ್ಕುಡನ ಮೂರ್ತಿಯ ಮುಖದಲ್ಲೂ ರಾಜ ಗಾಂಭೀರ್ಯ ಕಾಣಬಹುದು. ಇಲ್ಲಿನ ಕಲ್ಲುರ್ಟಿಯ ವಿಗ್ರಹ ಸುಮಾರು ಇನ್ನೂರು ವರ್ಷಗಳ ಹಿಂದಿನದಾಗಿದ್ದು, ವರ್ಷಂಪ್ರತಿ `ಪೊನ್ನಿ’ತಿಂಗಳಲ್ಲಿ ಕಲ್ಲೇಗದಲ್ಲಿ ನೇಮೋತ್ಸವ ನಡೆಯುತ್ತದೆ. ಅನಂತರ ಮಹಮ್ಮಾಯಿಗೆ ಗೋಂದೋಳು ಪೂಜೆ ನಡೆಯುತ್ತಿದೆ.