ಹಲವು ವಿಶೇಷತೆಗಳೊಂದಿಗೆ ನಡೆಯಲಿದೆ ಭಜನ ಸತ್ಸಂಗ ಸಮಾವೇಶ: ನಡೆದಿದೆ ಭಾರಿ ಸಿದ್ದತೆ ,ಐತಿಹಾಸಿಕ ಕ್ಷಣಕ್ಕೆ ಪುತ್ತೂರು ಕಾತರ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನಂತೆ ಭಜನೆಯಿಂದ ಬದಲಾವಣೆ ಎಂಬ ಉದ್ದೇಶದೊಂದಿಗೆ ಈಗಾಗಲೇ ಜಿಲ್ಲೆಯಾದ್ಯಂತ ಭಜನಾ ಮಂಡಳಿಗೆ ಹೊಸ ರೂಪವನ್ನು ಕೊಡುವ ಕಾರ್ಯಕ್ರಮ ಕಳೆದ 22 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಭಜನಾ ಸತ್ಸಂಗ ಸಮಾವೇಶ -2020 ಕಾರ್ಯಕ್ರಮ ಫೆ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವಮಾರು ಗದ್ದೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಭಜನಾ ಸತ್ಸಂಗ ಸಮಾವೇಶ ಸಮಿತಿ ಮತ್ತು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸಹಯೋಗದಲ್ಲಿ ನಡೆಯಲಿದೆ.
ಈ ಕುರಿತುಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು ,ಸಿದ್ದತೆಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಭಜನಾ ಸಂಕೀರ್ತನೆ ಯಾತ್ರೆ: ಮಧ್ಯಾಹ್ನ ಆಯ್ದ ಭಜನಾ ಮಂಡಳಿಗಳಿಂದ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ಗಂಟೆ 2 ರಿಂದ ಸಂಜೆ ಗಂಟೆ 4 ತನಕ ಜಿಲ್ಲೆಯ ವಿವಿಧ ಭಜನಾ ಮಂಡಳಿಯವರಿಂದ ಬೃಹತ್ ಭಜನಾ ಸಂಕೀರ್ತನೆ ಯಾತ್ರೆ ಜರುಗಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ನೆಲ್ಲಿಕಟ್ಟೆ, ಬಸ್‌ನಿಲ್ದಾಣ, ಎಪಿಎಂಸಿ ರಸ್ತೆ, ಅರುಣಾ ಚಿತ್ರಮಂದಿರ, ಕೋರ್ಟ್‌ರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಜನಾ ಸಂಕೀರ್ತನೆ ಯಾತ್ರೆ ನಡೆಯಲಿದೆ .
ಭಜನೆಗೆ ಸಂಬಂಧಿಸಿ 2 ಗೋಷ್ಠಿಗಳು: ಗ್ರಾಮ ವಿಕಾಸ ಮತ್ತು ಭಜನೆಯಿಂದ ಬದಲಾವಣೆ ಕುರಿತು ಎರಡು ಗೋಷ್ಠಿಗಳು ಜರುಗಲಿದೆ. ಬೆಳಿಗ್ಗೆ ಕೇಂದ್ರ ಒಕ್ಕೂಟದ ಪದಗ್ರಹಣ ವೇಳೆ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೃಷಿ ಮಹೋತ್ಸವ ಕುರಿತು ಯಾಂತೀಕೃತ ಕೃಷಿ ವಿಧಾನ ನಿಟ್ಟಿನಲ್ಲಿ ಗ್ರಾಮ ವಿಕಾಸ ಗೋಷ್ಠಿಯನ್ನು ಮಾಡಲಿದ್ದಾರೆ. ಮಧ್ಯಾಹ್ನ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್‍ಯನಾರಾಯಣ ಭಟ್ ಅವರು ಭಜನೆಯಿಂದ ಬದಲಾವಣೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕೋಟಿ ಶಿವಪಂಚಾಕ್ಷರಿ ಜಪಯಜ್ಞ: ಸಂಜೆ ಗಂಟೆ 4 ರಿಂದ 4.30ರ ತನಕ ಕೋಟಿ ಶಿವಪಂಚಾಕ್ಷರಿ ಜಪಯಜ್ಞ ಜರುಗಲಿದೆ. ಜಪಯಜ್ಞದಲ್ಲಿ ಭಾಗವಹಿಸಿದ ಎಲ್ಲರಿಗೂ ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಶ್ರೀ ಲಕ್ಷ್ಮೀ ನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ರುದ್ರಾಕ್ಷಿ ಪ್ರಸಾದ ಅನುಗ್ರಹ ಮಾಡಿದ್ದಾರೆ.
ಭಜನೋತ್ಸವ, ಭಜನಾ ಸತ್ಸಂಗ ಸಮಾವೇಶ: ಸಂಜೆ ಗಂಟೆ 4.30 ರಿಂದ 5.30ರ ತನಕ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಭಜನೋತ್ಸವ ಕಾರ್ಯಕ್ರಮ ಜರುಗಲಿದ್ದು, 3 ಕುಣಿತ ಭಜನೆ ಮತ್ತು 3 ಸಾಮೂಹಿಕ ಭಜನೆ ಜರುಗಲಿದೆ. ವೇದಿಕೆಯ ಮೂಲಕ ಭಜನಾ ಮಾಹಿತಿ ನೀಡಿದಂತೆ ಭಜನೆ ಕಾರ್ಯಕ್ರಮ ನಡೆಯಲಿದೆ .
ಸಂಜೆ ಗಂಟೆ 5.30ಕ್ಕೆ ಭಜನಾ ಸತ್ಸಂಗ ಸಮಾವೇಶ ಸಭೆ ಜರುಗಲಿದೆ.
ಕೇಂದ್ರ ಒಕ್ಕೂಟದ ಐತಿಹಾಸಿಕ ಪದಗ್ರಹಣ: ಭಜನಾ ಸತ್ಸಂಗ ಸಮಾವೇಶದ ಕಾರ್ಯಕ್ರಮದಲ್ಲಿ ಕೇಂದ್ರ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರುಗಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಮತ್ತು ಯೋಜನೆ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಅವರ ಜೊತೆಯಾದ ಉಪಸ್ಥಿತಿಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನಡೆಯುತ್ತಿದೆ .
ತಾಲೂಕಿನಲ್ಲಿ 2700 ಮಂದಿ ಸ್ವಸಹಾಯ ಮತ್ತು ಪ್ರಗತಿ ಬಂಧು ಸಂಘಗಳಿದ್ದು, ಸುಮಾರು 25ಸಾವಿರಕ್ಕೂ ಮಿಕ್ಕಿ ಸದಸ್ಯರು ಸಂಘದಲ್ಲಿ ಇದ್ದಾರೆ. 9 ವಲಯದಲ್ಲಿ 122 ಒಕ್ಕೂಟಗಳಿದ್ದು ಸತ್ಸಂಗ ಸಮಾವೇಶಕ್ಕೆ ಸುಮಾರು 1220 ಮಂದಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲಿದ್ದಾರೆ.
3 ಬೇಡಿಕೆ ಈಡೇರಿಕೆಗಾಗಿ ಸರಕಾರಕ್ಕೆ ಮನವಿ ಸುಮಾರು ಶೇ.70 ರಷ್ಟು ಭಜನಾ ಮಂದಿರಗಳು ಸರಕಾರಿ ಜಾಗದಲ್ಲಿ ಇದೆ. ಈ ಭಜನಾ ಮಂದಿರವಿದ್ದ ಸ್ಥಳವನ್ನು ಸಕ್ರಮ ಮಾಡಿ ಭಜನಾ ಮಂಡಳಿಯವರ ಹೆಸರಿಗೆ ಮಾಡಿಸುವ ಮತ್ತು ಭಜನೆಯ ಮೂಲಕ ಸಮಾಜದ ಸ್ವಾಸ್ತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಭಜನಾ ಪರಿಷತ್ ಮಂಡಳಿಗೆ ಅಕಾಡೆಮಿ ಸ್ಥಾನ ನೀಡಬೇಕು ಹಾಗೂ ಹನುಮ ಜಯಂತಿಯಂದು ಭಜನಾ ದಿನಾಚರಣೆಯನ್ನು ಆಚರಿಸುವ ಕುರಿತು ಸರಕಾರವನ್ನು ಒತ್ತಾಯಿಸುವ ಮನವಿ ಮಾಡುವ ನಿರ್ಣಯ ಭಜನಾ ಸತ್ಸಂಗ ಸಮಾವೇಶದ ಮೂಲಕ ನಡೆಯಲಿದೆ.
ಶ್ರೀ ಮಹಾಲಿಂಗೇಶ್ವರ ದೇವರಿಗೆ ಕೋಟಿ ಬಿಲ್ವಾರ್ಚನೆ ಭಜನಾ ಮಂಡಳಿಗಳು ಸಮವಸ್ತ್ರದೊಂದಿಗೆ ಭಾಗವಹಿಸಬೇಕು ಮತ್ತು ಶಿವ ಪಂಚಾಕ್ಷರಿ ಪಠಣ ಸಮಯದಲ್ಲಿ ಎಲ್ಲರು ಒಟ್ಟಾಗಿ ‘ ಓಂ ನಮಃ ಶಿವಾಯ’ ಶಿವಪಂಚಾಕ್ಷರಿ 108 ಸಾರಿ ಪಠಣ ಮಾಡಬೇಕು. ಜೊತೆಗೆ ಪ್ರತಿಯೊಬ್ಬರು ಬರುವಾಗ ೨ ಮುಷ್ಠಿ ಬಿಲ್ವಪತ್ರೆಯನ್ನು ಹಿಡಿದು ಕೊಂಡು ಬರಬೇಕು. ಭಜನಾ ಕಾರ್ಯಕ್ರಮ ಮುಗಿದ ಬಳಿಕ ಶ್ರೀ ಮಹಾಲಿಂಗೇಶ್ವರ ದೇವರಿಗೆ ಕೋಟಿ ಬಿಲ್ವಾರ್ಚನೆ ಸಮರ್ಪಿತವಾಗಲಿದೆ.
ಪ್ಲಾಸ್ಟಿಕ್ ನಿಷೇಧ ಶ್ರೀ ಕ್ಷೇತ್ರ ಧರ್ಮಸ್ಥಳಧ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಪುತ್ತೂರು ನಗರಸಭೆ ಪೂರ್ಣ ಸಹಕಾರ ನೀಡುವ ಭರವಸೆಯನ್ನು ಈಗಾಗಲೇ ನೀಡಿದೆ. ಜೊತೆಗೆ ಸಮಾವೇಶದಲ್ಲಿ ಎಲ್ಲೂ ಕೂಡಾ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಮನವಿ ಮಾಡಿದ್ದು ಒಟ್ಟು ಪ್ಲಾಸ್ಟಿಕನ್ನು ನಿಷೇಧಿಸಲಾಗಿದೆ.