ಪ್ರಪಂಚದ ಮತ್ತೊಂದು ದೇಶ ನಿತ್ಯಾನಂದ ಸ್ವಾಮಿಯ ಎಲ್ಲವೂ ಫ್ರೀ ಇರುವ ‘ಕೈಲಾಸ ದೇಶ’| ಪಾಸ್ ಪೋರ್ಟ್ ಗೆ ನೂಕು ನುಗ್ಗಲು!
ರಸಿಕರ ರಾಜ ಸ್ವಾಮಿ ನಿತ್ಯಾನಂದ ಮಹಾರಾಜ್ ಗೆ ಅರ್ಜೆಂಟಾಗಿ ಒಂದು ದೇಶ ಬೇಕಂತೆ.
ಆತ ಅಲ್ಲೆಲ್ಲೋ ದೂರದಲ್ಲಿ, ದಕ್ಷಿಣ ಅಮೆರಿಕಾದ ಈಕ್ವೆಡಾರ್ ನ ಪಕ್ಕದಲ್ಲಿ ಹೋಗಿ ತನ್ನ ಅಂಡು ಊರಿದ್ದಾನೆ. ಅಲ್ಲಿ ಹೋಗಿ ಒಂದು ಚಿಕ್ಕ ಭೂಮಿ ಕೊಂಡು ಕೊಂಡು ಅದಕ್ಕೆ ಕೈಲಾಸ ಅಂತ ಹೆಸರಿಟ್ಟು, ತನ್ನದೇ ದೇಶ ಎಂದು ಘೋಷಿಸಿಕೊಂಡಿದ್ದಾನೆ.
ಜಗತ್ತಿನಲ್ಲಿ ಇಂತಹಾ ಹಲವು ಸಣ್ಣ ಗ್ರಾಮದ ಥರ, ನಮ್ಮ ಮೂರೆಕರೆ ಆರೆಕರೆ ಜಾಗದ ಥರದ ಸಣ್ಣ ಪುಟ್ಟ ಅಸಂಖ್ಯ ದ್ವೀಪಗಳು ಇವೆ. ಅಂತಹಾ ಭೂಮಿಯನ್ನು ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಈಗ ನಮ್ಮ (?!) ಜಗದ್ಗುರು ನಿತ್ಯಾನಂದ ತನ್ನ ಮೇಲೆ ಬಿದ್ದಿರುವ ರೇಪ್ ನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾನೆ. ಅಂತಹಾ ಜಾಗವನ್ನು ಕೊಂಡು, ಅದು ತನ್ನ ಸ್ವತಂತ್ರ ದೇಶ ಅಂತ ಘೋಷಿಸಿಕೊಂಡು ಆನಂತರ ವಿಶ್ವಸಂಸ್ಥೆಯಿಂದ ಮಾನ್ಯತೆಗಾಗಿ ಅಪ್ಲೈ ಮಾಡಿದ್ದಾನೆ.
ಅದಕ್ಕೆ ಮಾನ್ಯತೆ ಸಿಕ್ರೆ ಮತ್ತೇನು ಬೇಕು. ಅಲ್ಲಿ ಆತ ಮಾಡಿದ್ದೇ ಕಾನೂನು. ಆ ದೇಶದಲ್ಲಿ ಎಲ್ಲವೂ ಫ್ರೀ. ಆಹಾರ, ವಿದ್ಯಾಭ್ಯಾಸ, ಜ್ಞಾನ ಮತ್ತು ಆತನ ಇಷ್ಟದ ವಸ್ತು-ಅದು ಕೂಡ ಫ್ರೀ ! ಎಲ್ರೂ ಹ್ಯಾಪ್ಪಿ ಯಾಗಿರ್ಬೋದು !
ಆತನದು ಗಡಿಗಳೇ ಇಲ್ಲದ ದೇಶ. ಅದನ್ನು ಆತ ಸ್ಥಾಪಿಸಿದ್ದು ಅತಂತ್ರ (ಆತನಂತೆಯೇ !!) ಹಿಂದೂಗಳಿಗೆ, ಯಾರಿಗೆ ತಮ್ಮ ಹಿಂದೂ ಧರ್ಮವನ್ನು ಪಾಲಿಸಲು ಬೇರೆಲ್ಲಿಯೂ ಆಗುವುದಿಲ್ಲವೋ, ಅಂತವರಿಗಾಗಿ !
ದೇಶ ಅಂದಮೇಲೆ ಅದಕ್ಕೊಂದು ಸಂವಿಧಾನ ಬೇಡವೇ ? ಅಂತೆಯೇ ಸನಾತನ ಹಿಂದೂ ಧರ್ಮದ ಆಧಾರದಲ್ಲಿ ಸಾಮ್ರಾಜ್ಯ ಲಕ್ಷ್ಮಿ ಪೀಠಿಕಾ ಎಂಬ ಸಂವಿಧಾನ.
ಇದ್ದ ಮೇಲೆ ಆಡಳಿತಕ್ಕೆ ನಾನಾ ತರದ ಡಿಪಾರ್ಟ್ಮೆಂಟುಗಳು ಬೇಕಲ್ಲವೆ? ಅದಕ್ಕೆ, ಹೋಮ್ ಲ್ಯಾಂಡ್ ಸೆಕ್ಯೂರಿಟಿ ,ಭದ್ರತೆ, ಹಣಕಾಸು, ಖಜಾನೆ, ಗೃಹ,ಶಿಕ್ಷಣ, ತಂತ್ರಜ್ಞಾನ, ಮನುಷ್ಯ ಸೇವೆ ಮತ್ತು ಮುಖ್ಯವಾಗಿ enlightened civilization ಎಂಬ ವಿಚಿತ್ರ ಸಂಸ್ಥೆಯಿದೆ. ಅದರ ಬಗ್ಗೆ ಆತನೇ ವಿವರಿಸಬೇಕಷ್ಟೆ.
ಆತನ ದೇಶ 100 ಮಿಲಿಯನ್ ಶೈವರಿಗೂ, 2 ಬಿಲಿಯನ್ ಹಿಂದೂಗಳಿಗೂ ಆವಾಸ ಸ್ಥಾನ ವಾಗುತ್ತದೆ. ಇಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ತಮಿಳು ಭಾಷೆಗಳು ಅಧಿಕೃತ ಭಾಷೆಗಳಾಗಿರುತ್ತವೆ. ಈ ದೇಶಕ್ಕೆ ಅಧಿಕೃತ ಲಾಂಛನ ಮತ್ತು ಧ್ವಜವನ್ನು ಕೂಡ ಆತ ಈಗಾಗಲೇ ಡಿಸೈನ್ ಮಾಡಿದ್ದಾನೆ.
ಒಂದು ಕಾಲದಲ್ಲಿ 20 ರ ಹರೆಯದ ರಾಜಶೇಖರನ್ ಎಂಬ ಯುವಕ ಬೆಂಗಳೂರಿಗೆ ಬಂದು ಇಲ್ಲಿ ಬಿಡದಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಜಾಗ ತೆಗೆದುಕೊಂಡು ಆಶ್ರಮ ಮಾಡಿಕೊಂಡಿದ್ದ. ಆನಂತರ ಬೆಂಗಳೂರಿನಲ್ಲಿ ರೇಪ್ ಆಪಾದಿತನಾಗಿ, ನಂತರ ಗುಜರಾತ್ ಸೇರಿಕೊಂಡು, ಅಲ್ಲಿ ಕೂಡಾ ರೇಪ್ ನ ಆಪಾದನೆ ಬಂದ ಕೂಡಲೇ ದೇಶವನ್ನೇ ಬಿಟ್ಟು ತೊಲಗಿದ್ದಾನೆ. ಅದೂ ಕೂಡ ವೀಸಾ ಇಲ್ಲದೇನೇ ! ಆತನ ಪಾಸ್ ಪೋರ್ಟ್ ಅನ್ನು ಭಾರತ ಸರಕಾರ ನವೀಕರಿಸಲು ಒಪ್ಪಿರಲಿಲ್ಲ. ಆದರೇನಂತೆ ಈಗ ಆತನೇ ಅವನ ದೇಶದಲ್ಲಿ ಪಾಸ್ಪೋರ್ಟ್ ಕೊಡುವವನು. ನಿತ್ಯಾನಂದನಂತಹ ಬಹುಚರ್ಚಿತ ವಿವಾದಾತ್ಮಕ ವ್ಯಕ್ತಿ ಹೇಗೆ ಗಡಿ ದಾಟಿ ಹೋದ ? ಆತನಂತಹ ಪರಿಚಿತ ಮುಖಗಳೇ ತಪ್ಪಿಸಿಕೊಳ್ಳಬೇಕಾದರೆ, ಬೇರೆಯವರೆಲ್ಲರ ಕಥೆ ಏನು ? ಇದರಲ್ಲೇ ಗೊತ್ತಾಗುತ್ತಿದೆ: ನಮ್ಮ ನೆಲ ಜಲ ವಾಯು ಗಡಿಗಳೆಷ್ಟು ಭದ್ರ ಇವೆಯೆಂದು !
ಸಮಯ ನಿಮ್ಮಬಳಿ ಇದ್ದರೆ, ನಿತ್ಯಾನಂದನ ವೆಬ್ ಸೈಟ್ www.nithyananda.org ಗೆ ಭೇಟಿ ಕೊಡಿ. ಒಳ್ಳೆ ಟೈಮ್ ಪಾಸ್ ಅಂತೂ ಆಗುತ್ತದೆ.
ಆತನ ಊಹಾತ್ಮಕ ದೇಶಕ್ಕೆ ಪ್ರಜೆಯಾಗಿ ಬರಲಿಚ್ಛಿಸುವ ಯಾವುದೇ ಹಿಂದೂವಿಗೂ ಸ್ವಾಗತವಿದೆಯಂತೆ. ಎಲ್ಲವೂ ಫ್ರೀ ಇರುವ ರಸಿಕ ದೇಶ ಯಾರಿಗೆ ಬೇಡ ? ಪಾಸ್ ಪೋರ್ಟ್ ಗೆ ನೂಕು ನುಗ್ಗಲು ಉಂಟಾಗುವುದು ಗ್ಯಾರಂಟಿ !!!
ಸುದರ್ಶನ್ ಬಿ. ಪ್ರವೀಣ್, ಬೆಳಾಲು