ಹೈದರಾಬಾದಿನಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್ । ಮತ್ತೆ ಗಲ್ಲು ಶಿಕ್ಷೆಗೆ ನಾಲ್ವರು ಅರ್ಜಿ ಹಾಕಿ ಕೂತಿದ್ದಾರೆ !
ನಿನ್ನೆ ಮತ್ತೆ ನಿರ್ಭಯಾ ಹೈದರಾಬಾದಿನಲ್ಲಿ ಸತ್ತು ಉರಿದು ಹೋಗಿದ್ದಾಳೆ. ಇದು 2012 ರಂದು ದೆಹಲಿಯ ಗ್ಯಾಂಗ್ ರೇಪ್ ನ ಭೀಕರತೆ ಕಣ್ಣ ಮುಂದಿನಿಂದ ಮರೆಯಾಗಿ ಹೋಗುವುದರೊಳಗೆ ಮತ್ತೆ ಮತ್ತೊಂದು ಆತ್ಮಕನಲಿ ಹೋಗಿದೆ.
ಹೈದರಾಬಾದಿನ ಹೊರವಲಯದಲ್ಲಿರುವ ಶಂಷಾಬಾದ್ ಟೋಲ್ ನ ಹತ್ತಿರವಿರುವ ಪಾರ್ಕಿಂಗ್ ನಲ್ಲಿ, ಪಶು ವೈದ್ಯೆಯಾಗಿರುವ ಆಕೆ ತನ್ನ ಸ್ಕೂಟಿಯನ್ನು ನಿಲ್ಲಿಸಿ ಹೋಗಿದ್ದಳು. ಸಜ್ಜನಗರ್ ಪೊಲೀಸರು ಇದೊಂದು ಪೂರ್ವ ನಿಯೋಜಿತ ಕೆಲಸ ಎಂದಿದ್ದಾರೆ. ಆಪಾದಿತರು, ಆಕೆಯ ಚಟುವಟಿಕೆಯನ್ನು ತುಂಬಾ ಹಿಂದಿನಿಂದಲೇ ಗಮನಿಸಿದ್ದಾರೆ. ಬೇಕಂತಲೇ ಆಕೆ ಅಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಟೈರಿನ ಗಾಳಿ ತೆಗೆದು ಆಕೆ ಆ ರಾತ್ರಿಯ ಸಮಯದಲ್ಲಿ ನಿಸ್ಸಾಹಾಯಕಳಾಗುವಂತೆ ಮಾಡಿದ್ದಾರೆ. ತನ್ನ ಸ್ಕೂಟಿಯ ಗಾಳಿ ಹೋದ ಸಂದರ್ಭದಲ್ಲಿ, ಆಕೆಗೆ ಸಹಾಯ ಮಾಡುವ ನೆಪದಲ್ಲಿ ಒಬ್ಬಾತ ಸ್ಕೂಟರನ್ನು ಅಲ್ಲಿಂದ ಸಾಗಿಸಿದ್ದಾನೆ. ಆದರೆ, ಪಕ್ಕದಲ್ಲೇ ಇದ್ದ ಟ್ರಕ್ ಒಂದರಲ್ಲಿದ್ದ ಒಂದಷ್ಟು ಮಂದಿ ಆಕೆಯನ್ನೇ ಗಮನಿಸುತ್ತಿ ದ್ದಾರೆ. ಆಕೆಗೆ ಅಲ್ಲಿನ ಪರಿಸ್ಥಿತಿ ಅರ್ಥವಾಗಿ ಕೂಡಲೇ ಆಕೆ ತನ್ನ ತಂಗಿಗೆ ಫೋನೆತ್ತಿಕ್ಕೊಂದು ಫೋನ್ ಮಾಡಿದ್ದಾಳೆ. ತಂಗಿ ಕೂಡ, ಫೋನ್ ಕಟ್ ಮಾಡಬೇಡ, ಲೈನ್ ನಲ್ಲೆ ಇರು ಅಂತ ಹೇಳಿದ್ದಾಳೆ. ಅಷ್ಟರಲ್ಲಿ ಫೋನ್ ಕಟ್ ಆಗಿದೆ.
ಪರಿಸ್ಥಿಯನ್ನು ಅಪರಾಧಿಗಳು ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡಿದ್ದಾರೆ. ಅಲ್ಲೇ ಪಕ್ಕದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಒಬ್ಬರ ನಂತರ ಒಬ್ಬರು ಸರದಿಯಲ್ಲಿ ನಾಲ್ಕು ಜನ ಅತ್ಯಾಚಾರ ಮಾಡಿದ್ದಾರೆ. ಆ ಸಮಯದಲ್ಲಿ ಆಕೆ ಚೀರಾಡಿದ್ದಾಳೆ. ಆದರೆ ಗಂಡಿನ ಬಲಿಷ್ಠ ಬಾಹುಗಳು ಆಕೆಯ ಬಾಯಿಯನ್ನು ಮುಚ್ಚಿಸಿವೆ. ಆ ಸನ್ನಿವೇಶದಲ್ಲಿ ಆಕೆಯ ಮೂಗನ್ನೇ ಮುಚ್ಚಿದರೋ, ಗಂಟಲು ಹಿಸುಕಿದರೋ ಗೊತ್ತಿಲ್ಲ. ಆಕೆ ಉಸಿರು ನಿಂತು ಹೋಗಿದೆ.
ಇದೀಗ ಪೊಲೀಸರು ನಾಲ್ವರು ಅಪರಾಧಿಗಳನ್ನು ಬಂಧಿಸಿದ್ದಾರೆ. ಬಂಧಿತರು ಟ್ರಕ್ ಡ್ರೈವರ್ ಮೊಹಮ್ಮದ್ ( 26 ವರ್ಷ ), ಜೊಲ್ಲು ಶಿವ, ಜೊಲ್ಲು ನವೀನ್, ಮತ್ತು ಚಿಂತಕುಂಟ ಚೆನ್ನಕೇಶವುಲು ಎಲ್ಲರೂ 20 ವರ್ಷದ ಆಸುಪಾಸಿನವರು.
ಆಕೆಯನ್ನು ಕೊಲ್ಲುವ ಉದ್ದೇಶ ಇತ್ತಾ ಇಲ್ಲವಾ ಗೊತ್ತಿಲ್ಲ. ಸತ್ತ ನಂತರ ಆಕೆಯನ್ನು ಮತ್ತು ಆಕೆಯ ಸ್ಕೂಟಿಯನ್ನು ತಮ್ಮ ಟ್ರಕ್ ನ ಒಳಗೆ ಹಾಕಿಕೊಂಡು ಹೋಗಿ ಸ್ಕೂಟಿಯನ್ನು ಅತ್ಯಾಚಾರ ಕೊಲೆ ಆದ 40 ಕಿಲೋ ಮೀಟರುಗಳ ದೂರದಲ್ಲಿ ನಂಬರ್ ಪ್ಲೇಟ್ ಕಿತ್ತು ಹಾಕಿ ಇಳಿಸಿದ್ದರು. ಆ ನಂತರ ಆಕೆಯನ್ನು ರಂಗಾ ರೆಡ್ಡಿ ಜಿಲ್ಲೆಯ ಶದ್ ನಗರ್ ಪ್ರದೇಶದ ಪಕ್ಕದ ಬ್ರಿಜ್ ಒಂದರ ಹಿಂದೆ ಇರುವ ನಿರ್ಜನ ಪ್ರದೇಶದಲ್ಲಿ ತಂದು ಪೆಟ್ರೋಲ್ ಹಾಕಿ ಸುಟ್ಟುಹಾಕಿ ಓಡಿಹೋಗಿದ್ದರು.
2012 ರ ನಿರ್ಭಯ ಕೇಸಿನ 5 ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಈ ಡಿಸೆಂಬರ್ 16 ಕ್ಕೆ ನಿರ್ಭಯಾ ಸತ್ತು ಏಳು ವರ್ಷವಾಗಿದೆ. ರಾಮ್ ಸಿಂಗ್, ಮುಖೇಶ್ ಸಿಂಗ್, ವಿನಯ್ ಶರ್ಮಾ, ಮೊಹಮ್ಮದ್ ಆಫ್ರೋಜ್, ಪವನ್ ಗುಪ್ತಾ ಮತ್ತು ಅಕ್ಷಯ್ ಠಾಕೂರ್ ಶಿಕ್ಷಾರ್ಹರೆಂದ ಸುಪ್ರೀಂ ಕೋರ್ಟು ಘೋಷಿಸಿತ್ತು. ಅದರಲ್ಲಿ, ಮುಖ್ಯ ಅಪರಾಧಿ ರಾಮ್ ಸಿಂಗ್ ನು ಕೋರ್ಟು ಟ್ರಯಲ್ಸ್ ನ ಸಂದರ್ಭದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿ ಮೊಹಮ್ಮದ್ ಆಫ್ರೋಜ್ 2015 ರಲ್ಲಿ ಬಿಡುಗಡೆಯಾಗಿದ್ದ. ಅದು ದೇಶದಲ್ಲಿ ಬಹು ದೊಡ್ಡ ಸಂಚಲನವನ್ನು ಸೃಸ್ತಿಸಿತ್ತು. ಅಪರಾಧಿಯಾಗಿದ್ದ ಮೊಹಮ್ಮದ್ ಆಫ್ರೋಜ್ ಗೆ ಹದಿನೆಂಟು ವರ್ಷ ತುಂಬುವುದಕ್ಕೆ ಇನ್ನೂ ಮೂರು ತಿಂಗಳಿತ್ತು. ಆದುದರಿಂದ ಆತ ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದ.
ಆತ ಬಿಡುಗಡೆಯಾದ ಎರಡೇ ದಿನಕ್ಕೆ ಕೇಂದ್ರದ ಬಿಜೆಪಿ ಸರಕಾರ ಅವರು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ 2015 ಅನ್ನು ಅಂಗೀಕರಿಸಿತ್ತು. ಇದರಿಂದಾಗಿ 18 ವರ್ಷಕ್ಕಿದ್ದ ವಯಸ್ಕ ವಯಸ್ಸನ್ನು 16 ವರ್ಷಗಳಿಗೆ ಇಳಿಸಿದೆ ಸರಕಾರ.
ಕರ್ನಾಟಕದ ಹಲವಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಐ ಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಂದಿ ಹೈದರಾಬಾದಿನಲ್ಲಿದ್ದರೆ. ಈಗ ಘಟನಾ ನಡೆದ ಶಂಷಾಬಾದ್ ಮತ್ತು ಪಕ್ಕದ ಗಚ್ಚಿಬೋಲಿ ಮುಂತಾದ ಪ್ರದೇಶಗಳಿಂದ ವಾರವಾರವೂ ನಮ್ಮವರು ಅಲ್ಲಿಂದ ಬೆಂಗಳೂರು ಮಂಗಳೂರು ಮುಂತಾದ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಸಂಜೆ ಆರಕ್ಕೆಲ್ಲ ಅಲ್ಲಿನ ರಸ್ತೆಗಳು ಬಿಕೋ ಎನ್ನುತ್ತವೆ. ಪ್ರಯಾಣಿಕರು ಅಟ್ ಮೋಸ್ಟ್ ಜಾಗ್ರತೆಯಲ್ಲಿರುವುದು ಮುಖ್ಯ.
ನಿರ್ಭಯಾಳ ಅತ್ಯಾಚಾರ ಮತ್ತು ಅಮಾನವೀಯ ಕೊಲೆಯಾಗಿ, ಅವಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದ್ದರೂ, ಆ ಸುದ್ದಿ ದೇಶ ವಿದೇಶದಲ್ಲಿ ದಿನನಿತ್ಯ ಚರ್ಚೆಯಾಗಿದ್ದರೂ, ಇನ್ನೂ ಜನರಿಗೆ ಅದರ ಬಿಸಿ ತಟ್ಟಿಲ್ಲವೆಂಬುದಕ್ಕೆ ಇದೇ ದೊಡ್ಡ ಉದಾಹರಣೆ. ದಿನನಿತ್ಯ ಪ್ರತಿಕ್ಷಣ ಸೋಶಿಯಲ್ ಮೀಡಿಯಾಗೆ ಅಂಟಿಕೊಂಡು ಫೇಸ್ಬುಕ್, ವಾಟ್ಸಪ್ಪ್, ಶೇರ್ ಚಾಟ್, ಟ್ವಿಟ್ಟರ್ ನಲ್ಲೆ ಇರುವ ಯುವ ಜನರು ಮತ್ತೆ ಏನನ್ನು ಓದುತ್ತಾರೆ ? ಇಷ್ಟಕ್ಕೂ ಅವರು ‘ ಓದುತ್ತಾರೆಯೇ ‘, ಇಲ್ಲ ‘ ನೋಡುತ್ತಾರೆಯೇ? ‘ ಅರ್ಥವೇ ಆಗುತ್ತಿಲ್ಲ. ಶಿಕ್ಷೆಯಿಂದ ಅಪರಾಧವನ್ನು ತಡೆಯಲು ಅಸಾಧ್ಯ ಅನ್ನಿಸುತ್ತದೆ. ಹಾಗಾದರೆ ಮತ್ತೇನು ಬೇಕು? ನನಗಂತೂ ಗೊತ್ತಿಲ್ಲ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು