ಮಕ್ಕಳ ಪೌಷ್ಟಿಕ, ರುಚಿಕರ ತಿಂಡಿ ತಾಜಾ ಪೀ ನಟ್ ಬಟರ್ ಮನೇಲಿ ಮಾಡಿ ನೋಡಿ
ಮಕ್ಕಳು ಸ್ಕೂಲಿಂದ ಬಂದ ಕೂಡಲೇ ತಿಂಡಿಗೆ ದೊಡ್ಡ ರಂಪ ಮಾಡಿ ಬಿಡುತ್ತವೆ. ಅವರದೇನಿದ್ದರೂ ಚಪಲದ ಬಾಯಿ. ಅನ್ನ ಸಾರು, ಮುದ್ದೆ, ಚಪಾತಿ, ದೋಸೆ, ರೊಟ್ಟಿ, ಇಡ್ಲಿ – ಹೀಗೆ ಮನೆಯಲ್ಲಿ ದಿನ ನಿತ್ಯ ಮಾಡುವ ಆಹಾರ ಅವರಿಗೆ ಇಷ್ಟ ಆಗುವುದಿಲ್ಲ. ಬೆಳಿಗ್ಗೇನೂ ಅದೇ, ಮಧ್ಯಾಹ್ನ ಟಿಫಿನ್ ಗೂ ಅದೇ, ಈಗ ಸಂಜೆ ಕೂಡಾ ಅದೇನಾ ಅಂತ ನಿಮಗೆ ಪ್ರಶ್ನೆ ಮಾಡ್ತವೆ. ಅದಕ್ಕೆ ನಿಮ್ಮತ್ರ ಸರಿಯಾದ ಉತ್ತರ ಇರುವುದಿಲ್ಲ. ಅಂತಹ ನಿರುತ್ತರಮಯ ಸಂದರ್ಭಗಳಲ್ಲಿ ಅವರಿಗೆ ಸರ್ಪ್ರೈಸ್ ಆಗಿ ಕೊಡಿ ತಾಜಾ ಪೀ ನಟ್ ಬಟರ್. ಇದು ಮಾಡುವುದೆಷ್ಟು ಸುಲಭವೋ, ಅಷ್ಟೇ ತಾಜಾ ಮತ್ತು ಪೌಷ್ಟಿಕ.
ತಾಜಾ ಆಹಾರ ಮನೆಯಲ್ಲೇ ಮಾಡಬಹುದಾದರೆ, ಅಂಗಡಿಯಿಂದ ಪ್ರಿಸರ್ವೇಟೀವ್ ಹಾಕಿದ ಪೀ ನಟ್ ಬಟರ್ ಯಾಕೆ ಬೇಕು ?
ನೆಲಕಡಲೆಯನ್ನು ನಿಧಾನವಾದ ಉರಿಯಲ್ಲಿ ಅಗಲವಾದ ಕಬ್ಬಿಣದ ತವಾದ ಮೇಲೆ ಹುರಿಯಿರಿ. ಕಪ್ಪಾಗದಂತೆ, ಕರಟಿ ಹೋಗದಂತೆ ಮಗುಚುತ್ತಲೇ ಇರಿ. ಹುರಿದು ಸ್ವಲ್ಪ ಬಣ್ಣ ಬದಲಾಗುತ್ತಿರುವಂತೆ ತಿಂದು ರುಚಿ ನೋಡಿ. ಇನ್ನೂ ಹಸಿ ಇದ್ದರೆ ಮತ್ತಷ್ಟು ಹುರಿಯಿರಿ. ಆನಂತರ ತೆಗೆದು ಕೆಳಗಿಳಿಸಿ ಆರಲು ಬಿಡಿ.
ಆರಿದ ನಂತರ ಸಿಪ್ಪೆ ಸುಲಿದು ನೆಲಗಡಲೆಯನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಬೆಲ್ಲವನ್ನು ಹೆರೆದು ಹಾಕಿ. ಎರಡು ಚಮಚ ತುಪ್ಪ ಹಾಕಿ ಮಿಕ್ಸಿ ಓಡಿಸಿ. ಜಾಸ್ತಿ ಸಣ್ಣ ರುಬ್ಬುವ ಅಗತ್ಯ ಇಲ್ಲ. ಈಗ ಹಿಟ್ಟು ಚಪಾತಿ ಹಿಟ್ಟಿನ ಮಾದರಿ ದಪ್ಪಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ದಪ್ಪ ಆಯಿತೆಂದು ನೀರು ಸೇರಿಸಬೇಡಿ. ಮಿಕ್ಸಿಯಿಂದ ತೆಗೆದು ಉಂಡೆ ಕಟ್ಟಿ ಕೊಡಿ. ಅವರಿಗೆ ಬೇಡ ಎನ್ನಲು ಕಾರಣವೇ ಇಲ್ಲ.
ಇದನ್ನು ಫ್ರಿಜ್ಜಿನಲ್ಲಿಟ್ಟು ವಾರಗಟ್ಟಲೆ ತಿನ್ನಬಹುದು. ಇದಕ್ಕೆ ಬೆಣ್ಣೆ ಮಿಕ್ಸ್ ಮಾಡಿ ಬ್ರೆಡ್ ಗೆ ಹಚ್ಚಿ ಕೂಡಾ ತಿನ್ನಬಹುದು.
ಚೇತನಾ ಈಶ್ವರ್, ಹಳೆ ಚಂದಾಪುರ