ಆಲೂ ಬಾತ್ । ವಿಶಿಷ್ಟ ಫ್ಲೇವರ್ ನಿಂದ ಜಿಹ್ವಾಗ್ನಿಯನ್ನು ಬಡಿದೆಬ್ಬಿಸಬಲ್ಲ ಬ್ರೇಕ್ ಫಾಸ್ಟ್
ಇವತ್ತು ನಾನು ಮಾಡಲಿರುವ ಅಡುಗೆ ಕಾಂಬಿನೇಷನ್ ಅಲೂ ಬಾತ್- ಸಾರು. ಆಲೂ ಬಾತ್ ಅನ್ನುವುದು ರೈಸ್ ಬಾತ್, ವಾಂಗಿ ಬಾತ್ ಮಾದರಿಯ ಪಲಾವ್ ನ ಸ್ಪೀಸಿಸ್ ಗೆ ಸೇರಿದ ಆಹಾರ ಅಂತ ಅಂದುಕೊಳ್ಳಬೇಡಿ. ಅವೆಲ್ಲಕ್ಕಿಂತಲೂ ತುಂಬಾ ಸುಲಭದ ಆಹಾರ. ಆಲೂ ಬಾತ್ ನ ಜತೆಗೆ ತೆಳು, ಆದರೆ ವಿಶಿಷ್ಟ ಸಾರು ಮಾಡಬೇಕು. ಅದಿದ್ದರೇನೇ ಆಲೂ ಬಾತ್ ಗೆ ಮಜಾ ಬರುವುದು. ಬೆಳಗ್ಗಿನ ಬ್ಯುಸಿ ಸಮಯದಲ್ಲಿ, ಸಿಂಪಲ್ಲಾಗಿ ಆಲೂ ಬಾತ್ ಮಾಡಿ ಒಂದು ತಿಳಿ ಸಾರು ( ಸ್ಪೆಶಲ್ಲಾಗಿ ಆಲೂಗೆ ಕಾಂಬಿನೇಷನ್) ಮಾಡಿದರೆ, ಅದೊಂದು ಸ್ಪೋಟಕ ಕಾಂಬಿನೇಷನ್.
ರಾತ್ರಿಯೆಲ್ಲಾ ಹಾಲು ಮೂಳು ತಿಂದು ಜಡ್ಡುಗಟ್ಟಿದ ನಾಲಿಗೆಗೆ, ಬೆಳಿಗ್ಗೆ ಸುಲಭಕ್ಕೆ ತಯಾರಿಸಬಹುದಾದ, ಹೊಟ್ಟೆ ತುಂಬುವ ಮತ್ತು ತನ್ನ ವಿಶಿಷ್ಟ ಫ್ಲೇವರ್ ನಿಂದ ಜಿಹ್ವಾಗ್ನಿಯನ್ನು ಬಡಿದೆಬ್ಬಿಸಬಲ್ಲ ತಾಕತ್ತು ಇವತ್ತಿನ ಈ ಅಡುಗೆಗೆ ಇದೆ.
ಮೊದಲು ಆಲೂ ಬಾತ್ ಮಾಡೋಣ.
ಬೇಕಾಗುವ ಪದಾರ್ಥಗಳು:
1 ) ಒಳ್ಳೆಯ ಕ್ವಾಲಿಟಿಯ ಸೂಜಿ ಅಕ್ಕಿ : 4 ಗ್ಲಾಸು ( 50 ರೂಪಾಯಿ ಪ್ರತಿ ಕೆಜಿ ಗಿಂತ ಅಧಿಕವಿರುವ ಯಾವುದೇ ಅಕ್ಕಿ ಆಗುತ್ತದೆ. ಇವತ್ತಿನ (29/11/19) ದರದಲ್ಲಿ.
2 ) ಆಲೂಗಡ್ಡೆ ಮಧ್ಯಮ ಗಾತ್ರದ್ದು : 02
3 ) ನೀರು : 8 ಗ್ಲಾಸು
4 ) ಲವಂಗ : 8 – 10
5 ) ಚಕ್ಕೆ : 4 ತುಂಡು
6 ) ಎಲೆ : 2-3 ತುಂಡು
7 ) ಎಣ್ಣೆ : 2 ಟೀ ಸ್ಪೂನ್
ಮಾಡುವ ವಿಧಾನ :
ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ತೊಳೆದು, ತುಂಡರಿಸಿಡಿ. ಪಲಾವ್ ಗೆ ಮಾಡುವುದಕ್ಕಿಂತ ಸ್ವಲ್ಪ ದೊಡ್ಡ ಸೈಜ್ ನಲ್ಲಿರಲಿ. ಅಕ್ಕಿಯನ್ನು ತೊಳೆದು ನೀರು ಬಸಿದಿಡಿ.
ಎರಡು ಚಮಚ ಎಣ್ಣೆಯನ್ನು ಕುಕ್ಕರ್ ಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ, ಚಕ್ಕೆ, ಎಲೆ, ಲವಂಗ ( ಬೇಕಿದ್ದರೆ ಏಲಕ್ಕಿ-1 ) ಕೂಡಾ ಹಾಕಬಹುದು.
ಅರ್ಧ ನಿಮಿಷ ಅಲ್ಲಾಡಿಸಿ, ನಂತರ ಬಸಿದಿಟ್ಟ ಅಕ್ಕಿ, ನೀರು ಮತ್ತು ತುಂಡರಿಸಿಟ್ಟ ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪಉಪ್ಪು ಬೆರೆಸಿ ರುಚಿ ನೋಡಿ.
ನಂತರ ಎರಡು ವಿಶಲ್ ಗೆ ಕುಕ್ಕರ್ ಆರಿಸಿ. ನಮ್ಮ ಆಲೂ ಬಾತ್ ರೆಡಿ ಆಗಿದೆ. ಇದು ಬಿಸಿಯಾರುವ ಮೊದಲೇ ನಾವು ಸಾರು ಮಾಡೋಣ. ಆಲೂ ಬಾತ್ ಅನ್ನು ಹಬೆಯಾಡುತ್ತಿದ್ದಂತೆಯೇ ಬಡಿಸಬೇಕು. ತಂಪಾದರೆ ಅದರಲ್ಲಿ ಮಜಾ ಇರೋದೇ ಇಲ್ಲ.
ಆಲೂ ಬಾತಿನ ಸಾರು :
ಬೇಕಾಗುವ ಪದಾರ್ಥಗಳು:
1 ) ಈರುಳ್ಳಿ ದೊಡ್ಡದು – 2
2 ) ಟೊಮ್ಯಾಟೊ ದೊಡ್ಡದು : 03
3 ) ಹಸಿಮೆಣಸು : 2
4 ) ಶುಂಠಿ ಬೆಳ್ಳುಳ್ಳಿ ಪೇಸ್ಟು : 50 ಗ್ರಾಂ ( 3 ಟೀ ಸ್ಪೂನ್ )
5 ) ಸಾಂಬಾರ್ ಪುಡಿ : 3 ಟೀ ಸ್ಪೂನ್
6 ) ಧನಿಯಾ ಪುಡಿ : 2 ಟೀ ಸ್ಪೂನ್
7 ) ಗರಂ ಮಸಾಲಾ ಪುಡಿ : 1 1/2 ಟೀ ಸ್ಪೂನ್
8 ) ಎಣ್ಣೆ : 3 ಟೀ ಸ್ಪೂನ್
9 ) ರುಚಿಗೆ ಉಪ್ಪು
ಮಾಡುವ ವಿಧಾನ :
ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಸಣ್ಣಗೆ ಬಿಸಿ ಮಾಡಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ. ನಂತರ ಹಸಿ ಮೆಣಸು ಹಾಕಿ ಬಾಡುವವರೆಗೆ ಹುರಿಯಿರಿ. ಈರುಳ್ಳಿ ಕೆಂಪಾಗುವ ಲಕ್ಷಣ ತೋರುತ್ತಿದ್ದಂತೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ನ ಘಮ ಬಿಡುವವರೆಗೆ ಕಲಸುತ್ತಾ ಇರಿ ( ಸುಮಾರು 1 ನಿಮಿಷ). ತಳ ಹಿಡಿಯದಂತೆ ಜಾಗ್ರತೆ ವಹಿಸಿ. ನಂತರ ಚೆನ್ನಾಗಿ ಹೆಚ್ಚಿದ ಟೊಮಾಟೊ ಹಾಕಿ ಕಲೆಸಿ. ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಗಟ್ಟಿಯಾಗುತ್ತಾ ಬಂದರೆ ಅರ್ಧ ಕಪ್ಪು ಬಿಸಿ ನೀರು ಸೇರಿಸಿ. ಸ್ವಲ್ಪ ಕುಡಿಸಿ ನಂತರ ಮೆಣಸಿನ ಪುಡಿ, ಸಾಂಬಾರ್ ಪುಡಿ, ಧನಿಯಾ ಪುಡಿ ಮತ್ತು ಗರಂ ಪುಡಿ ಸೇರಿಸಿ. ಗರಂ ಪುಡಿ ನೀವೇ ಆ ಕ್ಷಣಕ್ಕೆ ತಯಾರು ಮಾಡಿದರೆ ಒಳ್ಳೆಯದು. ಪ್ಯಾಕೆಟ್ ಪುಡಿಯೂ ಆಗುತ್ತದೆ. ಮಸಾಲೆ ಬೆರೆತ ಈ ಮಸಾಲಾ ದಪ್ಪವಾಗಿರುತ್ತದೆ. ಅದಕ್ಕೆ ನೀರು ಸೇರಿಸಿ. ತಿಳಿ ಸಾರಿನ ತರಹ ತುಂಬಾ ನೀರು ಮಾಡಬೇಡಿ. ಸ್ವಲ್ಪ ಮೀಡಿಯಂ ಇರಲಿ. ಉಪ್ಪು ಹಾಕಿ ರುಚಿ ನೋಡಿ ಚೆನ್ನಾಗಿ ಬೇಯಿಸಿ ( ಆಲೂ ಬಾತ್ ಗೆ ಉಪ್ಪು ಹಾಕಿರುವುದರಿಂದ ಇಲ್ಲಿ ಉಪ್ಪು ಹಿಡಿತದಲ್ಲಿರಲಿ) ನಂತರ ಎಳೆಯ ಕೊತ್ತಂಬರಿ ಸೊಪ್ಪು ಚೆನ್ನಾಗಿ ಹೆಚ್ಚಿ ಹಾಕಿ ಒಂದು ನಿಮಿಷ ಬೇಯಲು ಬಿಡಿ. ನೆನಪಿಡಿ, ಈ ಅಡುಗೆಯ ಉದ್ದಕ್ಕೂ, ಅಡುಗೆಯ ಪಾತ್ರೆಯ ಮುಚ್ಚಳ ಆದಷ್ಟು ಮುಚ್ಚಿರಲಿ. ರುಚಿ ನೋಡಿ ಕೆಳಗಿಳಿಸಿ.
ಮೊದಲು, ಎರಡು ಮೂರು ಸ್ಪೂನ್ ಸಾರನ್ನು ಬಿಸಿಬಿಸಿಯಾಗಿ ಸವಿಯಿರಿ. ನಂತರ ಸ್ಪೂನಿನಿಂದ ಒಂದಷ್ಟು ಸಾರನ್ನು ಹಬೆಯಾಡುವ ಆಲೂ ಬಾತಿನ ಮೇಲೆ ಹಾಕಿ ತಿನ್ನಿ. ಮಜಾ ಇರುತ್ತದೆ. ಇದು ಬೆಳಗ್ಗಿನ ಆಹಾರ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಲೂ ಬಾತ್ ಸಾರು ಕಾಂಬಿನೇಷನ್ ಮಸ್ತಾಗಿರುತ್ತದೆ. ಟ್ರೈ ಮಾಡಿ ರುಚಿ ಹೇಳಿ. ಒಂದು ವೇಳೆ ಚೆನ್ನಾಗಿ ಬರದೇ ಹೋದರೆ, ಮತ್ತೊಮ್ಮೆ ಪ್ರಯತ್ನಿಸಿ. ಅಷ್ಟಕ್ಕೂ ಇದು ತಯಾರಿಕೆಯಲ್ಲಿ ಸಿಂಪ್ಲೆಸ್ಟ್, ಫ್ಲೇವರ್ ಮತ್ತು ರುಚಿಯಲ್ಲಿ ವೈಲ್ಡ್ ನೆಸ್ ಇರುವ ಅಡುಗೆ. ನಾನಿದನ್ನು ತಿಂದು ರುಚಿಗೆ ಮರುಳಾದದ್ದು ಮತ್ತು ಕಲಿತದ್ದು ಬೀದರ್ ನಲ್ಲಿ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು