ಜೆಡಿಎಸ್ ಎಂಬ ರಾಜಕೀಯ ವ್ಯಸನ

ಇವತ್ತು ಜೆಡಿಎಸ್ ಮತ್ತೆ ಬಿಜೆಪಿಯ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ, ಸರ್ಕಾರ ಬೀಳಲು ಬಿಡಲ್ಲ, ಮತ್ತೆ ಚುನಾವಣೆಯ ಭಾರ ಜನರಿಗೆ ಆಗಬಾರದು ಎಂದು ಹೇಳುತ್ತಿದೆ. ಆದರೆ ಅದರ ಹಿಂದಿರುವುದು ಪಕ್ಕ ಸ್ವಾರ್ಥ ಲೆಕ್ಕಾಚಾರ. ಅದು ಸಿಬಿಐ ದಾಳದಿಂದ ಬಚಾವಾಗುವುದಿರಬಹುದು, ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳದಿರಬಹುದು,ಸಿದ್ದುನ ಹಣಿಯಲಿರಬಹುದು, ಜೆಡಿಎಸ್ ನಿಂದ ಹೊರಹೋಗಲು ಒಂದು ಕಾಲು ಹೊರಗಿಟ್ಟ ಅತೃಪ್ತರನ್ನು ನಿಯಂತ್ರಿಸಲಿರಬಹುದು, ಸ್ವಾರ್ಥ ಮನಸ್ಸಿಗೆ ಸಾವಿರ ಕಾರಣಗಳು ! ಜೆಡಿಎಸ್ ಎಂಬ ಸ್ವಾರ್ಥ ಸಾಧಕನ ಬದುಕನ್ನು ಮೊದಲಿನಿಂದ ಒಂದು ಬಾರಿ ವಿಸಿಟ್ ಮಾಡಿಬರುವುದು ಈ ಸಂದರ್ಭದಲ್ಲಿ ಅನಿವಾರ್ಯ.

 

ರಾಷ್ಟ್ರರಾಜಕಾರಣ

ಜನತಾ ಪಕ್ಷವು 1977 ರಂದು ಜಯಪ್ರಕಾಶ ನಾರಾಯಣ ಮುಂದಾಳತ್ವದಲ್ಲಿ ರಚನೆಯಾಯಿತು. ಅದರ ಮುಖ್ಯ ಉದ್ದೇಶವೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ ಅನೀತಿಗಳ ವಿರುದ್ಧ ಹೋರಾಡುವುದಾಗಿತ್ತು. ಇದು ಭಾರತವು ಎಮರ್ಜೆನ್ಸಿಯ ಚಕ್ರ ಸುಳಿಯಿಂದ ಮುಕ್ತಗೊಂಡು ಜನರು ನಿಟ್ಟುಸಿರು ಬಿಡುತ್ತಿದ್ದ ಸಂದರ್ಭ. ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಬ್ಯಾನರಿನಡಿಯಲ್ಲಿ ಸ್ಪರ್ಧಿಸಿದ ಜನತಾಪರಿವಾರದ ಪಕ್ಷಗಳು ಜಯಭೇರಿಯನ್ನು ಭಾರಿಸಿದವು. ಖುದ್ದು ಇಂದಿರಾಗಾಂಧಿಗೆ ತನ್ನ ಕಾಂಗ್ರೆಸ್ ಆಡ ಸ್ವಕ್ಷೇತ್ರ ರಾಯ್ ಬರೇಲಿಯಲ್ಲಿ ಜಯಪ್ರಕಾಶ್ ನಾರಾಯಣರ ಎದುರು ಹೀನಾಯ ಸೋಲು ಉಂಟಾಗಿತ್ತು. ಆ ಸಂಧರ್ಭದಲ್ಲಿ ಮೊರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿಯಾದರು. ಆದರೆ ಅವರು ಅಧಿಕಾರದಲ್ಲಿದ್ದು ಕೇವಲ 170 ದಿವಸ ಮಾತ್ರ ಯಾವ ಕಾಂಗ್ರೆಸ್ಸನ್ನು ಸೋಲಿಸಲು ಟೊಂಕಕಟ್ಟಿ ಹೋರಾಡಿದ್ದವೋ ಅವೇ ಮಿತ್ರಪಕ್ಷಗಳು ತಮ್ಮ-ತಮ್ಮೊಳಗೆ ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡರು. ಮಿತ್ರಪಕ್ಷಗಳಿಗೆ ವಿರೋಧ ಪಕ್ಷದಲ್ಲಿದ್ದ ಕೆಲಸ ಮಾಡುವುದು ಗೊತ್ತಿತ್ತು. ಆದರೆ ಅಧಿಕಾರ ಸಿಕ್ಕಿದಾಗ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟವಾಯಿತು. ಮಿತ್ರಪಕ್ಷಗಳ ಕೆಲವರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡ ಪರಿಣಾಮವಾಗಿ ಜನತಾಪರಿವಾರದ ಸರಕಾರ ಬಿದ್ದುಹೋಯಿತು. ಆ ಮೂಲಕ ಕಾಂಗ್ರೆಸ್ಸೇತರ ಜನತಾ ಪರಿವಾರದ ಬದಲಿ ನಾಯಕತ್ವದದ ಬಗೆಗೆ ಜನರಿಗೆ ಭ್ರಮನಿರಸನ ಉಂಟಾಯಿತು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಇಂದಿರಾಗಾಂಧಿ ಗೆದ್ದು ಬಂದರು. ಜನತಾಪಕ್ಷವನ್ನು ಜನ ತಿರಸ್ಕರಿಸಿದ್ದರು. ಆ ನಂತರ ಸುದೀರ್ಘ 10 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತ್ತು. ಮೊದಲ ನಾಲ್ಕೂವರೆ ವರ್ಷ ಇಂದಿರಾ ಗಾಂಧಿಯೂ, ಆ ನಂತರ ರಾಜೀವ್ ಗಾಂಧಿಯೂ5 ಚಿಲ್ಲರೆ ವರ್ಷ ಪ್ರಧಾನಿಯಾಗಿದ್ದರು.(1980 – 1989 ರ ವರೆಗೆ). ಮುಂದೆ 1989 ರಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜನತಾ ಪರಿವಾರವನ್ನು ಮತ್ತೆ ಕೇಂದ್ರದಲ್ಲಿ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ ವಿ. .ಪಿ.ಸಿಂಗ್, ದೇವೇಗೌಡ ಮತ್ತು ಐ.ಕೆ. ಗುಜ್ರಾಲರು ಅವತ್ತು ಸೇರಿಕೊಂಡು 1988 ರ ಸುಮಾರಿಗೆ ಜನತಾಪಕ್ಷ ಮತ್ತು ಇತರ ಸಣ್ಣಪುಟ್ಟ like-minded ಪಕ್ಷಗಳು ಸೇರಿಕೊಂಡು ಜನತಾದಳವನ್ನು ರಚಿಸಿಕೊಂಡರು.
ಮುಂದಿನ ಲೋಕಸಭಾ ಚುನಾವಣೆ 1989 ಯಲ್ಲಿ ನಡೆಯುತ್ತದೆ ಮತ್ತು ವಿ.ಪಿ.ಸಿಂಗ್ ಪ್ರಧಾನಿಯಾಗುತ್ತಾರೆ. ಅವರು ಆಡಳಿತ ನಡೆಸಿದ್ದು 343 ದಿವಸ ಮಾತ್ರ. ನಂತರ ಚಂದ್ರಶೇಖರ್ ರವರು ಪ್ರಧಾನಿಯಾಗುತ್ತಾರೆ, ಅವರು 223 ದಿನ ಅಧಿಕಾರದಲ್ಲಿದ್ದರು .ಮತ್ತೆ ಜನತಾ ದಳದ ಒಳ ಜಗಳದ ಪರಿಣಾಮ, ಒಂದೂವರೆ ವರ್ಷದ ಒಳಗೇ ಜನತಾ ದಳದ ಸರ್ಕಾರ ಬಿದ್ದುಹೋಗುತ್ತದೆ ಮತ್ತದು ಪಿ.ವಿ.ನರಸಿಂಹ ರಾವ್ ಅವರ ಕಾಂಗ್ರೆಸ್ ಆಡಳಿತಕ್ಕೆ ದಾರಿಯಾಗುತ್ತದೆ. ಮುಂದೆ ಜನತಾ ದಳದಿಂದ (ಯುನೈಟೆಡ್ ಫ್ರಂಟ್ ) 1996 ರಲ್ಲಿ ದೇವೇಗೌಡರೂ,1997 ರಲ್ಲಿ ಗುಜ್ರಾಲರೂ ಪ್ರಧಾನಿಯಾಗುತ್ತಾರೆ.

ರಾಜ್ಯ ರಾಜಕಾರಣ:

ಕರ್ನಾಟಕದಲ್ಲಿ 1994-1998 ಜನತಾದಳದ ಪಾಲಿಗೆ ಪರ್ವಕಾಲ. 1994 ರಿಂದ 1996 ರವರೆಗೆ ರಾಜ್ಯದಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿರುತ್ತಾರೆ. ಅಷ್ಟರಲ್ಲಿ ಕೇಂದ್ರದಲ್ಲಿ 1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪರಿವಾರದ ಕೃಪೆಯಿಂದ ಹೆಚ್.ಡಿ.ದೇವೇಗೌಡರು ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಆಗುತ್ತಾರೆ.( ಜ್ಯೋತಿ ಬಸು ಅವರನ್ನು ಪಿಎಂ ಮಾಡಲು ಕಮ್ಯುನಿಸ್ಟರು ಒಪ್ಪುವುದಿಲ್ಲ. ದೇಶದ ದೌರ್ಭಾಗ್ಯ ಅದು. ಇಲ್ಲದೆ ಹೋದರೆ ದೇವೇಗೌಡರು ಪ್ರಧಾನಿಯಾಗುವುದು ಕನಸಾಗಿತ್ತು !!) ಅದಕ್ಕಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುತ್ತಾರೆ. ಆ ಸ್ಥಾನಕ್ಕೆ ಪಟೇಲರು ಬರುತ್ತಾರೆ. 324 ದಿನ ಆಡಳಿತ ನಡೆಸುವಷ್ಟರಲ್ಲಿ ದೇವೇಗೌಡರು ಸೀತಾರಾಮ ಕೇಸರಿ ಅವರ ಅಧ್ಯಕ್ಷತೆಯ ಕಾಂಗ್ರೆಸ್ಸಿನ ಬೆಂಬಲ ವಾಪಸ್ಸು ತೆಗೆದುಕೊಳ್ಳುವುದರೊಂದಿಗೆ ರಾಜ್ಯ ರಾಜಕಾರಣಕ್ಕೆ ವಾಪಸ್ ಸಾಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಜೆ ಹೆಚ್ ಪಟೇಲರು 1996 ರಿಂದ ಉಳಿದ ಟರ್ಮ್ ಅನ್ನು ಕರ್ನಾಟಕದಲ್ಲಿ ಪೂರ್ತಿ ಗಳಿಸುತ್ತಾರೆ. ಆದರೆ ಅದು ತುಂಬ ಕ್ಲಿಷ್ಟ ರಾಜಕೀಯ ಕಾಲ. ದೇವೇಗೌಡ-ಪಟೇಲ ಮತ್ತು ಇತರ ದಳದ ಪಟಾಲಂ-ಪರಿವಾರದ ಕಚ್ಚಾಟ ಹೊಯ್ದಾಟಗಳಿಂದಾಗಿ ಜನತಾ ಪಕ್ಷವು ವಿಭಜನೆಯಾಗುತ್ತದೆ. ಎಚ್ ಡಿ ದೇವೇಗೌಡರು ಜನತಾ ದಳ (ಸೆಕ್ಯುಲರ್) (ಜೆಡಿಎಸ್) ಅನ್ನು 1998 ರಲ್ಲಿ ಸ್ಥಾಪಿಸುತ್ತಾರೆ. ಹೇಗೂ ಮಾತೃ ಪಕ್ಷ ಜನತಾ ದಳ (ಯುನೈಟೆಡ್) ಮೂಲಕ ಬಾರಿ ಪ್ರಧಾನಿ ಆದರಲ್ಲ, ಇನ್ನು ಯಾಕೆ ಅವರ ಜತೆ (ಜೆಡಿಯು) ಇರಬೇಕು? ಹಾಗೆ ಗೌಡರ ದ್ರೋಹಚಿಂತನೆ ಕೆಲಸ ಮಾಡುತ್ತದೆ. ಈ ಸಿದ್ದರಾಮಯ್ಯ ಗೌಡರ ಜತೆ ಅಂದು ದೃಢವಾಗಿ ನಿಲ್ಲುತ್ತಾರೆ. ಆದರೆ ಮುಂದೆ ಆದದ್ದೇನು. ಆವತ್ತು, ದೇವೇಗೌಡರ ಜೊತೆ ನಿಂತದ್ದಕ್ಕೆ ಉಡುಗೊರೆಯಾಗಿ ಮುಂದೆ ಸಿದ್ದುವಿಗೆ ಬಹುದೊಡ್ಡ ಉಚ್ಚಾಟನೆಯ ಉಡುಗೊರೆಯನ್ನು ದೇವೇಗೌಡರು ನೀಡಲಿದ್ದರು !!

ಇಲ್ಲಿಯತನಕ ಜನತಾದಳದಲ್ಲಿ ಸ್ವಲ್ಪಮಟ್ಟಿಗಿನ ತತ್ವ-ಸಿದ್ಧಾಂತಗಳು ಸಿದ್ದಾಂತಗಳ ಇರುವಿಕೆ ಕಂಡುಬರುತ್ತದೆ. ನಂತರದ 2004ರ ಚುನಾವಣೆಯಲ್ಲಿ ಜನತಾದಳದ ಬೆಂಬಲದಲ್ಲಿ ಧರಂಸಿಂಗ್ ಅವರು ಮುಖ್ಯಮಂತ್ರಿಯಾಗುತ್ತಾರೆ. ಆಡಳಿತ ಎರಡು ವರ್ಷ ಕಳೆಯುವುದರೊಳಗಾಗಿ, ದೇವೇಗೌಡರಿಗೆ ಕುಮಾರಸ್ವಾಮಿಯವರ ಮೇಲಿನ ಪ್ರೀತಿ ಉಕ್ಕಿ ಉತ್ಕರ್ಷವಾಗಿ ಹೋಗುತ್ತದೆ. ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡ ಜೆಡಿಎಸ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ, ಬಿಜೆಪಿಯ ಬೆಂಬಲದೊಂದಿಗೆ. ಮೊದಲ 20 ತಿಂಗಳು ಕುಮಾರಸ್ವಾಮಿಯವರೂ ನಂತರದ 20 ತಿಂಗಳ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಎಂದು ಮಾತುಕತೆ ಯಾಗುತ್ತದೆ. ಆ ದಿನ ಕಾಂಗ್ರೆಸ್ಸಿಗೆ ಜೆಡಿಎಸ್ ನೀಡಿದ ಬೆಂಬಲವನ್ನು ವಾಪಸ್ಸು ಪಡೆದು, ಬಿಜೆಪಿಯ ಜೊತೆಗೆ ಜೆಡಿಎಸ್ ಸೇರುವ ಸಂದರ್ಭದಲ್ಲಿ ನಟಿಸಿದ ದೇವೇಗೌಡರನ್ನು ನೀವು ನೋಡಬೇಕಿತ್ತು. ಬಹುಶ: ಹಾಲಿವುಡ್ ನ ‘ಆಸ್ಕರ್” ಪ್ರಶಸ್ತಿಯ ಟೀಮಿನವರನ್ನು ಅದನ್ನು ನೋಡಿರಲಿಕ್ಕಿಲ್ಲ. ನೋಡಿದ್ದಿದ್ದರೆ ಅವರಿಗೆ ಆಸ್ಕರ್ ಪಕ್ಕಾ ಬಂದಿರುತ್ತಿತ್ತು. ಕುಮಾರಸ್ವಾಮಿಯೇ ಬಂಡಾಯವೆದ್ದು ದೇವೇಗೌಡರ ಮಾತನ್ನು ಧಿಕ್ಕರಿಸಿ ಬಿಜೆಪಿಯ ಜೊತೆ ಸರ್ಕಾರ ಮಾಡಲು ಹೊರಟಿದೆ, ಎಂದು ಜನರನ್ನು ನಂಬಿಸಲು ನಟಸಾರ್ವಭೌಮ ದೇವೇಗೌಡರು ಪ್ಲಾನ್ ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾರೆ. ಪಕ್ಷವಿರೋಧಿಯಾಗಿದ್ದರೆ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟಿಸಬಹುದಿತ್ತು. ಆದರೆ ಅದು ಯಾವುದನ್ನು ದೇವೇಗೌಡರು ಮಾಡುವುದಿಲ್ಲ. ಅಲ್ಲದೆ ಪಕ್ಷದಲ್ಲಿ ದೇವೇಗೌಡರನ್ನು ಬಿಟ್ಟರೆ ಹಿರಿತನದಲ್ಲಿ ಅರ್ಹತೆಯಲ್ಲಿ ಸಿದ್ದರಾಮಯ್ಯನವರನ್ನು ದೇವೇಗೌಡರು ಪಕ್ಷದಿಂದ ಉಚ್ಚಾಟಿಸುತ್ತಾರೆ. ಈ ಎಲ್ಲಾ ಸಂದರ್ಭಗಳಲ್ಲಿ ದೇವೇಗೌಡರ ನಾಟಕ ಕಂಪನಿಯ ಅಸಲಿಯತ್ತು ಮೊದಲ ಬಾರಿಗೆ ಜನರ ಮುಂದೆ ದೊಡ್ಡದಾಗಿ ಅನಾವರಣಗೊಂಡದ್ದು.

ಮುಂದೆ ಕುಮಾರಸ್ವಾಮಿಯವರು 20 ತಿಂಗಳು ರಾಜಕೀಯ ಸುಖ ಸವಿದು ನಂತರ ಮಾತಿನಂತೆ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಕುತಂತ್ರ ಕೆಲಸಮಾಡುತ್ತವೆ. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಳ್ಳದೇ ಸರ್ಕಾರ ಬಿದ್ದು ಹೋಗುತ್ತದೆ. ಈ ಮೂಲಕ ವಚನಭ್ರಷ್ಟತೆಯ ಮಸಿ ಜೆಡಿಎಸ್ಗೆ ಶಾಶ್ವತವಾಗಿ ಅಂಟಿಕೊಳ್ಳುತ್ತದೆ.

ಇತ್ತ ಸಿದ್ದರಾಮಯ್ಯನವರನ್ನು ಪಕ್ಷದಿಂದ ಉಚ್ಛಾಟಿಸಿದ ನಂತರ ಸಿದ್ದರಾಮಯ್ಯನವರು ನೇರ ಹೋಗಿ ಕಾಂಗ್ರೆಸ್ಸನ್ನು ಸೇರುತ್ತಾರೆ. ಮತ್ತು ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಅಗ್ನಿ ಪರೀಕ್ಷೆ ನಡೆಯುತ್ತದೆ ಬಿಜೆಪಿ – ಜೆಡಿಎಸ್ ಏನೇ ತಿಪ್ಪರಲಾಗ ಹಾಕಿದರೂ ಸಿದ್ದರಾಮಯ್ಯ 247 ಮತಗಳ ಅಂತರದಿಂದ ವಿಜಯಿಯಾಗುತ್ತಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು. ಅದು ದೇವೇಗೌಡ ಕುಮಾರಸ್ವಾಮಿ ದುಷ್ಟ ಸಂಘದ ಮೇಲಿನ ಜನರ ಆಕ್ರೋಶ ವಾಗಿತ್ತು .ಇಲ್ಲದೇ ಹೋದರೆ ಪೂರ್ತಿ ಸರಕಾರಿ ಮಷಿನರಿ ಗಳನ್ನಿಟ್ಟುಕೊಂಡರೂ ಸಿದ್ಧುವನ್ನು ಸೋಲಿಸಲಾಗಲಿಲ್ಲ ದೇವೇಗೌಡರಿಗೆ.

ವಚನಭ್ರಷ್ಟತೆಯ ನಂತರ, 2008 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸೀಟುಗಳನ್ನು ಪಡೆದು ಭರ್ಜರಿಯಾಗಿ ಜಯ ಗಳಿಸುತ್ತದೆ. ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುತ್ತದೆ. ಆದರೆ ಪಡೆದುಕೊಂಡ ಅಧಿಕಾರವನ್ನು ಸರಿಯಾಗಿ ನಡೆಸಿಕೊಂಡು ಹೋಗುವಲ್ಲಿ ಬಿಜೆಪಿ ವಿಫಲವಾಗುತ್ತದೆ. ಈ ಹಿಂದೆ ಪಕ್ಷಗಳು ಕೇಂದ್ರದಲ್ಲಿ ನಡೆದುಕೊಂಡ ರೀತಿಯಲ್ಲಿಯೇ ಲಂಚ ಹಗರಣದಲ್ಲಿ ಯಡಿಯೂರಪ್ಪನವರನ್ನು ಸಿಲುಕಿಸಲಾಗುತ್ತದೆ. ಯಡಿಯೂರಪ್ಪನವರನ್ನು ಜೈಲುಪಾಲಾಗುವ ಮಾಡುವಲ್ಲಿ ಕಾಂಗ್ರೆಸ್ ಜೆಡಿಎಸ್ ಕೂಟ ಮತ್ತು ಬಿಜೆಪಿಯ ಸ್ವಪಕ್ಷಿಯರೇ ಕೈಜೋಡಿಸಿ ಅದರಲ್ಲಿ ಸಫಲರಾಗುತ್ತಾರೆ. ಮುಂದೆ ಕೋಟಿನಲ್ಲಿ ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ತಪ್ಪೆಂದು ಅವರನ್ನು ನಿರಪರಾಧಿಯೆಂದು ಕೇಸನ್ನು ಖುಲಾಸೆ ಗೊಳಿಸುತ್ತದೆ. ಈ ಮೂಲಕ ಪಕ್ಷದೊಳಗಿನ ಮತ್ತು ವಿರೋಧಿಗಳ ಹುನ್ನಾರ ಜಾಹೀರಾಗುತ್ತದೆ. ಆದರೆ ಯಡಿಯೂರಪ್ಪನವರಿಗೆ ಅಷ್ಟರಲ್ಲಾಗಲೇ ಸರಿಪಡಿಸಲಾಗದಂತಹ ಡ್ಯಾಮೇಜು ಆಗಿ ಹೋಗಿರುತ್ತದೆ.

ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಮುನ್ನ ತಮ್ಮ ಆತ್ಮೀಯ, ವಿಧೇಯ, ನಂಬುಗೆಯ, ನಿಯತ್ತಿನ – ಮುಂತಾದ ಬಿರುದಾಂಕಿತ ಡಿ ವಿ ಸದಾನಂದಗೌಡರಿಗೆ ಮುಖ್ಯಮಂತ್ರಿ ಪಟ್ಟ ಸಿಗುವಂತೆ ಮಾಡುತ್ತಾರೆ ಯಡಿಯೂರಪ್ಪನವರು. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿ, ವಿಶ್ವಾಸದ್ರೋಹದ ಎರಡನೇ ಕಂತು ಬಿಚ್ಚಿಕೊಳ್ಳುತ್ತದೆ. ನಾವಿಬ್ಬರು ಗೌಡರು, ಒಕ್ಕಲಿಗರು ಎಂದು ಕರೆದುಕೊಳ್ಳುತ್ತ ಜೆಡಿಎಸ್ ಸದಾನಂದಗೌಡರಿಗೆ ಅವರಿಗೆ ಹತ್ತಿರವಾಗುತ್ತದೆ. ದೇವೇಗೌಡ ಮತ್ತು ಡಿವಿ ಸದಾನಂದ ಗೌಡರು ಇಬ್ಬರು ಪುತ್ತೂರಿನಲ್ಲಿ ನಡೆದ ಒಕ್ಕಲಿಗರ ಸಮಾರಂಭವೊಂದರಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವೇದಿಕೆ ಹಂಚಿಕೊಳ್ಳುತ್ತಾರೆ. ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಒಕ್ಕಲಿಗರು ಎನ್ನುತ್ತಾರೆ. ಅಲ್ಲದೆ, “ತಾವಿಲ್ಲಿ ಸಮಾರಂಭದಲ್ಲಿ ಒಟ್ಟಿಗೆ ಕೂತದ್ದು ನೋಡಿ ‘ಕೆಲವರಿಗೆ’ ಕಣ್ಣು ಕೆಂಪಾಗಬಹುದೆಂದು ಯಡಿಯೂರಪ್ಪನವರನ್ನು ಉದ್ದೇಶಿಸಿ ಕಾಮೆಂಟ್ ಮಾಡುತ್ತಾರೆ ಸದಾನಂದ ಗೌಡರು. ಯಡ್ಡಿಯ ಕಣ್ಣು ಕೆಂಪು ಮಾತ್ರವಲ್ಲ, ಬೆಂಕಿಯುಗುಳಲಾರಂಭಿಸುತ್ತದೆ ಮತ್ತು ಹಟದಲ್ಲಿ ಸದಾನಂದಗೌಡರನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಿ ಬಿಡುತ್ತಾರೆ. ಆ ಜಾಗಕ್ಕೆ ಜಗದೀಶ್ ಶೆಟ್ಟರ್ ಬಂದು ಕೂರುತ್ತಾರೆ.
ಹಾಗೆ, ಅತ್ಯಂತ ಒಳ್ಳೆಯ, ನಂಬುಗೆಯ, ಸದಾ ನಗುಮುಖದ ಅಮಾಯಕ ಸದಾನಂದ ಗೌಡರು, ದೇವೇಗೌಡರ ಟೀಮಿನ ಬಲಿಪಶುವಾಗಿ ಹೋಗುತ್ತಾರೆ. ಇಲ್ಲಿಯತನಕ, ಕರಾವಳಿಯ ಟೆರರ್ ಥರ ಇದ್ದವರು, ಒಟ್ಟಾರೆ ಕರಾವಳಿ ರಾಜಕೀಯದಿಂದ ಶಾಶ್ವತವಾಗಿ ದೂರಸರಿಯಲ್ಪಡುತ್ತಾರೆ.ಎಲ್ಲಿಯ ಪನ್ನೀರ್ ಸೆಲ್ವಂ? ಎಲ್ಲಿಯ ವಿಶ್ವಾಸ?
ತಮಿಳುನಾಡಿನ ಅಮ್ಮ ಜಯಲಲಿತಾಳಿಗೆ ಕಡೆಯ ಕಾಲದವರೆಗೂ ನಿಯತ್ತಿನಲ್ಲಿದ್ದ ಪನ್ನೀರ್ ಸೆಲ್ವಂ ಎಲ್ಲಿ, ನಮ್ಮ ಕರಾವಳಿಯ ಪುತ್ತರ್ ಡಿ ವಿ ಸದಾನಂದಗೌಡರೆಲ್ಲಿ?

ಸರ್ವ ಅವಿಶ್ವಾಸಮಯಂ!!

ಎಲ್ಲವೂ ದೇವೇಗೌಡ ಟೀಮಿನ ಮಹಿಮೆ !

ಜೆಡಿಎಸ್ ಎಂಬ ಅಪ್ಪ, ಮಕ್ಕಳಿಬ್ಬರು, ಸೊಸೆ, ಮೊಮ್ಮಕ್ಕಳಿಬ್ಬರ ಪಕ್ಷವು, ಹೇಗೆ ಯಾವ ಒಳ್ಳೆಯ ಮನೆತನದಿಂದ (ಜನತಾ ಪಕ್ಷ) ಹುಟ್ಟಿತು ಮತ್ತು ಬರಬರುತ್ತ ಯಾವೆಲ್ಲ ರೀತಿಯಲ್ಲಿ ರಾಜ್ಯದಲ್ಲಿ ಹೀನ ರಾಜಕೀಯ ಅನಿಷ್ಟಗಳಿಗೆ ನಾಂದಿ ಹಾಡಿತು ಎಂಬುದೇ ಈ ಲೇಖನದ ಉದ್ದೇಶ. ಬರೆಯುತ್ತ ಹೋದಂತೆಲ್ಲ, ಪಟ್ಟಿ ಮಾಡುತ್ತಾ ಹೋದಂತೆಲ್ಲ ಒಂದು ಅಸಹ್ಯ ನಮ್ಮನ್ನು ಭಾದಿಸದೆ ಇರದು. ಇಂತಹ ಅಪಸವ್ಯ ಕನ್ನಡಿಗರಂತಹ ಮುಗ್ಧ ಜನರಿಗೆ ಬೇಡವೇ ಬೇಡ !

ಇವತ್ತು ಸೆಕ್ಯುಲರ್ ಎಂಬ ಪದವನ್ನು ತನ್ನ ಹೆಸರಿನೊಂದಿಗೆ ಇಟ್ಟುಕೊಂಡಿರುವ ಜೆಡ್(ಎಸ್ ) ಅದೆಷ್ಟು ಜನರನ್ನು, ಪಕ್ಷಗಳನ್ನು ಜಾತಿವಾದಿಯಾಗಿಸಿದೆ, ವಿಶ್ವಾಸಘಾತತೆಗೆ ನೂಕಿದೆ; ಅದೆಷ್ಟು ಜನರನ್ನು ಮರುಳು ಮಾಡಿ ತನ್ನ ಬೇಳೆ ಬೇಯಿಸಿಕೊಂಡಿದೆ.

ಅದಲ್ಲದೆ ಮೊನ್ನೆ ಹದಿನೇಳು ಕಾಂಗ್ರೆಸ್-ಜೆಡಿಎಸ್ ಶಾಶಕರು ರಾಜೀನಾಮೆಯನ್ನಿತ್ತು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ, ರಾಜ್ಯಪಾಲರ ಮಾತಿಗೂ ತಲೆಬಾಗದೆ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ ಮಾಡಿದ್ದು ಇದೇ ಕುಮಾರಸ್ವಾಮಿ. ಅದರ ಹಿಂದಿದ್ದ ಮಾಸ್ಟರ್ ಮೈಂಡ್ ಅದೇ ಹೆಚ್ ಡಿ ಡಿ. ಅದು ಸಂವಿಧಾನವನ್ನು ಕೂಡ ಕಡೆಗಣಿಸುವ ವಿಕೃತತೆ ! ಅದು ದುಡ್ಡು, ಅಧಿಕಾರ ಮತ್ತು ಜಾತಿಯ ಬಲದ ಅಟ್ಟಹಾಸವಲ್ಲದೆ ಮತ್ತೇನು ಕೂಡಾ ಅಲ್ಲ.

ಜೆಡಿಎಸ್ ಜತೆ ಇದ್ದವರು, ಇವತ್ತು ಎಲ್ಲಿದ್ದಾರೆ? ಎಲ್ಲ ಹಿರಿಯರನ್ನೂ, ಪಕ್ಷಕ್ಕಾಗಿ ದುಡಿದ ಅಧಿಕಾರ ಲಾಲಸೆಗಾಗಿ ಮತ್ತು ಕುಟುಂಬ ರಾಜಕಾರಣಕ್ಕಾಗಿ ದೇವೇಗೌಡ ಮತ್ತು ಪಟಾಲಂ ದೂರ ತಳ್ಳಿದೆ. ಅದು ಕೃತಜ್ಞತೆಯ ಪರಮಾವಧಿ. ಸಿ ನಾಗೇಗೌಡ, ಬಿ.ಎಲ್ ಶಂಕರ್, ಬೈರೇಗೌಡ, ಬಚ್ಚೇಗೌಡ, ವೈ.ಕೆ ರಾಮಯ್ಯ, ಸಿದ್ದರಾಮಯ್ಯ, ಮುಂತಾದ ಘಟಾನುಘಟಿ ನಾಯಕರುಗಳನ್ನು ದೇವೇಗೌಡ ಯೂಸ್ ಆಂಡ್ ಥ್ರೋ ಪಾಲಿ ಬ್ಯಾಗ್ ಥರ ಬಿಸಾಕಿದ್ದಾರೆ. ವಿಶೇಷವೆಂದರೆ ಬಹುತೇಕರೆಲ್ಲ ಒಕ್ಕಲಿಗರು. ದೇವೇಗೌಡರಿಗೆ ಒಕ್ಕಲಿಗ ನಾಯಕರಾರೂ ಬೆಳೆಯುವುದು ಬೇಕಿಲ್ಲ. ಹಾಗೊಂದುವೇಳೆ ಬೇರೆ ಒಕ್ಕಲಿಗ ನಾಯಕನನ್ನ ಬೆಳೆಯಲು ಬಿಟ್ಟರೆ ಅದು ತಮ್ಮ ಮಕ್ಕಳಲ್ಲಿ ಒಬ್ಬನಾಗಿರಬೇಕು. ಅಷ್ಟೇ.

ಆದರೆ ನಮ್ಮ ಸಮಾಜವು ನಾವಂದುಕೊಂಡಷ್ಟು ನಿಸ್ಸಹಾಯಕವಲ್ಲ. ಪ್ರಜ್ಞಾವಂತಿಕೆ, ಕನ್ನಡಿಗರ ಆನ್ಸೆಸ್ಟ್ರಲ್ ಪ್ರಾಪರ್ಟಿ! ಅದನ್ನು ನಮ್ಮ ಸಮಾಜ ಅಗತ್ಯ ಬಂದಾಗ ಪ್ರಯೋಗಿಸುತ್ತ ಬಂದಿದೆ. ಮೇಲ್ನೋಟಕ್ಕೆ ನಿಸ್ಸಹಾಯಕನಂತೆ ಕಾಣುವ ಮತದಾರ,crisis ಬಂದಾಗ ಕೈಯಲ್ಲಿ ಬ್ರಹ್ಮಾಸ್ತ್ರ ಹಿಡಿದು ಸ್ಪೋಟಿಸುತ್ತಾನೆ !
ಅದೇ ಕಾರಣಕ್ಕೆ, ಆ ದಿನ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಎಂಬ ಹೆಣ್ಣು ಹೆಂಗಸು, ಮಂಡ್ಯದ ಜೆಡಿಎಸ್ ಭದ್ರಕೋಟೆ, 8 ಜನ ಜೆಡಿಎಸ್ ಶಾಶಕರಿದ್ದ ಕ್ಷೇತ್ರ, ಮೂರು ಜನ ಪವರ್ಫುಲ್ ಮಂತ್ರಿಗಳಿದ್ದ ಊರಿನಲ್ಲಿ, ಊರ ತುಂಬಾ ಒಕ್ಕಲಿಗರ ಪ್ರಾಬಲ್ಯವಿರುವ ಕಡೆಯಲ್ಲಿ, ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅಖಾಡಕ್ಕೆ ಇಳಿದು ತನ್ನ ಮಗ ನಿಖಿಲ್ ಅನ್ನು ಗೆಲ್ಲಿಸಲೇ ಬೇಕೆಂದು ತರಗೆಲೆಗೆ ಸಮಾನವಾಗಿ ದುಡ್ಡು ಚೆಲ್ಲಿ ಗೆಲ್ಲಲು ಪ್ರಯತ್ನಿಸಿದರೂ, ಆಕೆ ಇದೆಲ್ಲವನ್ನು ಮೀರಿ ಗೆದ್ದು ಬಿಡುತ್ತಾಳೆ. ಅದೂ, ಸುಮಲತಾ ಗೌಡತಿಯಲ್ಲ, ‘ನಾಯ್ದು ಎಂದು ಜೆಡಿಎಸ್ ಮಂತ್ರಿಗಳೇ ಬಕ್ಕ ಬಹಿರಂಗ ಪ್ರಚಾರಕ್ಕೆನಿಂತರೂ ಆಕೆ ಒಂದು ಲಕ್ಷ ಇಪ್ಪತ್ತು ಸಾವಿರ ಮತಗಳ ಭಾರೀ ಅಂತರದಿಂದ ಗೆಲ್ಲಿಸಿದ್ದು ಯಾರು?

ಜೆಡಿ( ಸ್) ನ ಅಳಿದುಳಿದ ಸೆಕ್ಯುಲರಿಸಂನ ಬಣ್ಣ, ಆ ದಿನ ಸುಮಲತಾನ್ನ ‘ಗೌಡತಿಯಲ್ಲ, ನಾಯ್ದು!’ ಎಂದು ಜರಿಯುವ ಮುಖೇನ ಕಾವೇರಿಯ ನೀರಿನೊಂದಿಗೆ ತೊಳೆದುಹೋಯ್ತು.

ಈಗ ಜಾತಿವಾದಿ, ವಿಶ್ವಾಸದ್ರೋಹಿ ಜೆಡಿಎಸ್ ಅನ್ನು ನಂಬುವವರಿಲ್ಲ. ಅತ್ತ ದೇವೇಗೌಡರ-ಕುಮಾರ ದ್ವಯರ ಕುತಂತ್ರಗಳು, ಮೋದಿ-ಅಮಿತ್ ಷಾ ರ ರಣವ್ಯೂಹದ ಎದುರು ನಿರಂತರವಾಗಿ ಸೋತು ಹೋಗುತ್ತಿವೆ. ಭೀಷ್ಮ, ಶಸ್ತ್ರ ತ್ಯಾಗ ಮಾಡದೆ ಹೋದರೂ, ಬಾಣದಲ್ಲಿ ಮುಂಚಿನ ಮೊನಚು, ಗುರಿಯಲ್ಲಿ ಹಿಂದಿನ ಖಚಿತತೆ ಈಗ ಉಳಿದಿಲ್ಲ. ಆರ್ಥಿಕವಾಗಿ ಎಷ್ಟೇ ಬಲಾಢ್ಯರಾಗಿದ್ದರೂ,’ಸದುದ್ದೇಶ’ವಿರದ ಅವರ ಕೌಟುಂಬಿಕ ರಾಜಕೀಯ ಜನರಿಗೆ ಈಗ ಅರ್ಥವಾಗಿ ಹೋಗಿದೆ. ಜನರಷ್ಟೇ ಅಲ್ಲ, ಜೆಡಿಎಸ್ ನ ನಾಯಕರುಗಳೂ ಪಕ್ಷದಿಂದ ದೂರ ಸರಿಯಲಾರಂಭಿಸಿದ್ದಾರೆ. ಮುಂದೇನಿದ್ದರೂ ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಮದ್ಯೆ ನೇರ ಹಣಾಹಣಿ.
ಅಪ್ಪ-ಮಕ್ಕಳ-ಕುಟುಂಬಸ್ಥರ ಜೆಡಿಎಸ್ ಪಕ್ಷದ ರಾಜಕೀಯ ವ್ಯಸನಕ್ಕೆ ಮದ್ದು ಅರೆಯಲಾರಂಭಿಸಿದ್ದಾರೆ ಜನರು !

ಸುದರ್ಶನ್ ಬಿ. ಪ್ರವೀಣ್, ಬೆಳಾಲು

1 Comment
  1. yowazstjvj says

    Muchas gracias. ?Como puedo iniciar sesion?

Leave A Reply

Your email address will not be published.