ತುಳುನಾಡು ಎಂಬ ವೈವಿಧ್ಯಮಯ ಕಲರ್ ಫುಲ್ ಪ್ರಪಂಚ

ರಾಜಪ್ಪ, ಲಿಂಗಪ್ಪ, ಸೂರಪ್ಪ, ದೇಜಪ್ಪ, ಚೆನ್ನಪ್ಪ, ಸಿದ್ದಪ್ಪ, ಐತಪ್ಪ, ಮೋನಪ್ಪ, ತಿಮ್ಮಪ್ಪ, ಮಂಜಪ್ಪ, ಕೃಷ್ಣಪ್ಪ, ವಾಸಪ್ಪ, ಬಾಳಪ್ಪ, ಸಂಕಪ್ಪ, ಕುಶಾಲಪ್ಪ, ಪೂವಪ್ಪ ಮುಂತಾದ ಅಪ್ಪಂದಿರು; ಗಂಗಯ್ಯ, ಪದ್ಮಯ್ಯ, ಶಿವಯ್ಯ, ನೋಣಯ್ಯ, ಗಂಗಯ್ಯ, ಡೀಕಯ್ಯ, ಡಾಗ್ಗಯ್ಯ ಮುಂತಾದ ಅಯ್ಯಂದಿರು; ರಾಜಕ್ಕ, ಪೊನ್ನಕ್ಕ, ರಾಮಕ್ಕ, ಚೆಲ್ವಮಕ್ಕ, ಹೊನ್ನಮ್ಮ, ದೇಜಮ್ಮ, ಅಕ್ಕಮ್ಮ, ನೀಲಮ್ಮ, ಸೇಸಮ್ಮ, ಮುಂತಾದ ಅಕ್ಕ-ಮ್ಮದಿರು. ಅತ್ತ ಊರ ಕೊನೆಯಲ್ಲಿ ಐತ್ತ, ಸೋಮ, ಅಂಗರ, ಬೂದ, ಗುರುವ, ತುಕ್ರೆ, ತಣಿಯೆ, ಅಂತೋನಿ, ಕೊರಗು, ಮಾನಿಗ, ದೂಜ- ಎಲ್ಲರು ಒಗ್ಗಟ್ಟಾಗಿ ಬಂದು ದೀಪಾವಳಿಯ ಪ್ರಯುಕ್ತದ ಊರ ಗೊಬ್ಬುದ ದಿನ ಕಬಡ್ಡಿ ಬೊಬ್ಬುದು, ಬಯ್ಯಗ್ ಬಳ್ಳು ಒಯಿತ್ತೆರುಂಡ ಅದು ನಮ್ಮ ಮಂಗಳೂರು ! ಅಕುಲು ಕುಡ್ಲದಕುಲು !

ಇವರೆಲ್ಲರೂ ಬಂದುದಾದರೂ ಎಲ್ಲಿಂದ ? ಇದೇ ಮಾರ್ಗದಲ್ಲಿ ಸಾಗಿ ಸ್ವಲ್ಪಮುಂದೆ ಹೋದರೆ ಸಿಗುವ ಮಣ್ಣಿನ ಮಾರ್ಗದಲ್ಲಿ ಎರಡು ಫರ್ಲಾ೦ಗು ದೂರ ನಡೆದರೆ, ಕಾಲು ದಾರಿ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಕ್ರಮಿಸಿ, ತಡಮೆ ದಾಟಿದರೆ ಗುಡ್ಡದಿಂದ ಕೆಳಕ್ಕೆ ಬೀಳಿಸಿದಂತಿರೋ ಮನೆಯಿಂದ ಅವರು ಎದ್ದು ಬಂದವರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆ ಮನೆಗಳಿಗೆ ಸರೋಳಿ, ಪುರೋಲಿ, ಮುಗುಳಿ, ಪೆಲತ್ತಡಿ, ಪುಳಿತ್ತಡಿ, ಭಾಗಿದಾಡಿ, ಕೇಪುದಡಿ, ಪೆಲತ್ತಡ್ಕ, ಮೈರೊಳ್ದಡ್ಕ, ಕುಂಡಡ್ಕ, ಕಾಣಿಯೂರು, ಮೂಡಾಯೂರು, ಕೊಂತೂರು, ಪಿಲವೂರು, ಸವಣೂರು, ಬರೆಮೇಲು, ಮಾರ್ಪಾಲು, ಓಣಿಯಾಲು, ಸವಣಾಲು, ವಳಾಲು, ಬೆಳಾಲು ಮುಂತಾಗಿ ಸಾವಿರಾರು ಹಾಡಿನ ತುಂಡಿನಂತಹಾ ಪ್ರಾಸಮಯ ಹೆಸರುಗಳು.

ಹಳ್ಳಿಯ ಹೆಂಗಸು, ಮನೆ ಕೆಲಸದ ಪ್ರಯುಕ್ತ ಸೀರೆಯನ್ನು ಎಳೆದು ಮೇಲಕ್ಕೆ ಕಟ್ಟಿಕೊಂಡಂತೆ ಕಾಣುವ ಅಟ್ಟಣಿಗೆಯ ಮನೆಯವರು. ಅವರೆಲ್ಲಿ ಹೆಚ್ಚಿನವರು ಕೃಷಿಕರು. ಮೀನು ತಿನ್ನುವವರು. ತೆಂಗಿನೆಣ್ಣೆಯಿಂದ ಅಡುಗೆ ಮಾಡುವವರು. ಅವರು ಕರಾವಳಿಯವರು. ಅವರು ಸುಂದರರು. ಅವರು ಹೃದಯವಂತರು. ದಾರಿ ಗೊತ್ತಾಗದೆ ದಾರಿ ಕೇಳಿದರೆ, ನಿಮ್ಮೊಂದಿಗೆ ದಾರಿಯುದ್ದಕ್ಕೂ ಸಾಗಿ ನಿಮ್ಮನ್ನು ಗಮ್ಯ ತಲುಪಿಸಿ ಬರುವಂತವರು.
ಅವರು ಉಡುಪಿಯ ರುಚಿಕಟ್ಟಾದ ಅಡುಗೆಯನ್ನು ವಿಶ್ವಕ್ಕೆ ಪರಿಚಯಿಸಿದವರು. ಸೌಂದರ್ಯದಲ್ಲಿ ಬಾಲಿವುಡ್ಡನ್ನೇ ಅಂಕೆಯಲ್ಲಿಟ್ಟುಕೊಂಡವರು. ಅವರು ಮಹತ್ವಾಕಾಕ್ಷಿಗಳು. ಅವರು ಯಾವುದಕ್ಕೂ ಹೆದರದವರು, ಆದರೆ ಚಿಕ್ಕ ಮಾನ ಮರ್ಯಾದೆಗೂ ಅಂಜುವವರು. ಸ್ವಂತಿಕೆ ಉಳಿಸಿಕೊಳ್ಳಲು ಮುಂಬೈನ ಅಂಡರ್ ವರ್ಲ್ಡ್ ಗೇ ಎದೆಯೊಡ್ಡಿ ಗೆದ್ದವರು.

ನಮ್ಮ ಸೆಲೆಬ್ರಿಟಿಗಳು

ನಮ್ಮ ರಾಣಿ ಉಳ್ಳಾಲದ ರಾಣಿ ಅಬ್ಬಕ್ಕ ಭಾರತದ ಮೊದಲ ಸ್ವತಂತ್ರ್ಯ ಹೋರಾಟಗಾರ್ತಿ. ಕ್ರಿಸ್ತ ಶಕ 1550 ಕ್ಕೇ ಆಕೆಯಲ್ಲಿ ನಮ್ಮನಾಡಿನ ಮೇಲಿನ ಅಭಿಮಾನದ ಜಾಗೃತವಾಗಿತ್ತು. ಪರಕೀಯರ ದಬ್ಬಾಳಿಕೆಯ ವಿರೋಧಿಸಿ, ತನ್ನ ಹಿತ್ತಾಳೆ ಹಿಡಿಕೆಯ ಖಡ್ಗ ಝಳಪಿಸಿದ್ದ ವೀರ ವನಿತೆ ಅಬ್ಬಕ್ಕನ ಅಬ್ಬರವನ್ನು ಕಂಡ ಪೋರ್ಚುಗೀಸರು ಕಂಗಾಲಾಗಿದ್ದರು. ಆಕೆ ನಮ್ಮತುಳು ನೆಲದ ಮೊದಲ ಸೆಲೆಬ್ರಿಟಿ !

ಐಶ್ವರ್ಯ ರೈ, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಶಿರಿಶ್ ಕುಂದರ್, ಅನುಷ್ಕಾಶೆಟ್ಟಿ, ಸ್ನೇಹ ಉಳ್ಳಾಲ್, ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಶೆಟ್ಟಿ, ಜೆನಿಲಿಯಾ ಡಿಸೋಜ, ಫ್ರೀಡಾ ಪಿಂಟೋ , ಲಕ್ಷ್ಮಿ ರೈ, ರೋಹಿತ್ ಶೆಟ್ಟಿ, ಶಮಿತಾ ಶೆಟ್ಟಿ, ಸರಹ್ ಜೇನ್ ಡೈಯಸ್, ಸಂದೀಪ್ ಮಲಾನಿ, ಸಂದೀಪ್ ಚೌಟ, ಸಂತೋಷ್ ಹೆಗ್ಡೆ, ಬಿ ಎಂ ಹೆಗ್ಡೆ, ಅರವಿಂದ ಅಡಿಗ, ದಯಾ ನಾಯಕ್, ರವಿಶಾಸ್ತ್ರಿ, ಗುರುದತ್, ವಿಜಯ್ ಮಲ್ಯ, ಜಾರ್ಜ್ ಫೆರ್ನಾಂಡಿಸ್, ಉಪೇಂದ್ರ, ಗುರುಕಿರಣ್, ಕಾಶೀನಾಥ್, ಶಿವರಾಂ ಕಾರಂತ್- ಪಟ್ಟಿ ಪುಟಗಟ್ಟಲೆ ಹೋಗುತ್ತದೆ. ಕೆಲವರನ್ನು ಮಾತ್ರ ಇಲ್ಲಿ ಇವತ್ತು ದಾಖಲಿಸಬಹುದು. ಹಾ ಮರೆತು ಹೋಗಿತ್ತು. ಶಾರುಕ್ ಖಾನ್ ಕೂಡ ಹುಟ್ಟಿದ್ದು ಇದೇ ಫಲವತ್ತಾದ ಮಣ್ಣಿನಲ್ಲಿ !

ನಟನೆ, ಗಾಯನ, ವೇಷಭೂಷಣ, ಅರ್ಥದಾರಿಕೆ ಮತ್ತು ಡಾನ್ಸ್ ಒಟ್ಟು ಐದು ಮಾಧ್ಯಮಗಳು ಇರುವ ಕಲಾಪ್ರಪಂಚದ ಏಕೈಕ ಕಲಾಪ್ರಕಾರವೇ ಯಕ್ಷಗಾನ. ಅದು ನಮ್ಮಮಣ್ಣಿನಳ್ಳಿ ಹುಟ್ಟಿದ್ದು. ಈಗ ದೇಶ ವಿದೇಶದಲ್ಲಿ ಬೆಳೆದು ನಿಂತಿದೆ.

ತೋಡುದ ಡೆಂಜಿ, ಕಡಲ್ದ ಎಟ್ಟಿ, ಔದ್ರಾಮಾಕನ ನುಂಗೆಲ್, ಅಬ್ಬಣ್ಣ -ವಲ್ಲಿ ಪುರ್ಬುಲೆನ ಬೋಂಟೆ, ಅಮುಂಜಿ ಬಾಲನ ಬಲೆತ್ತ ಮೀನು, ಮಲ್ಲಿಕಾನ ಮಿಲ್ಲಿ ಮೀನ್ ದ ಸಾರ್, ಹಳ್ಳಿ ಹೈದರ ಕಂಬಳ, ಸಂಕ್ರಾಂತಿಯ ದಿನದ ಕೋಳಿಯ ಕಟ್ಟ, ಒಟ್ಟೆ ಕೋರಿದ ರುಚಿ, ಭೂತದ ಕೋರಿದ ಸಾರಿನ ಘಮ, ನೇಮೊದ ನಲಿಕೆ, ಕೋಲೊದ ಪೊರ್ಲು, ರಾತ್ರೆ ಪೂರಾ ನಿದ್ದೆಗೆಟ್ಟು ಭೂತದ ಮಾತು ಕೇಳುವ ಮರ್ಲು ನಮ್ಮವರದು.

ಆಟಿಕಳೆಂಜ, ಪಿಲಿನಲಿಕೆ, ಸೇಸಮ್ಮಕ್ಕನ ಸೋಬಾನೆ, ಪೊಣ್ಣು ತುಚ್ಛದ್ ಕೊರ್ಪಿನಪಗದ ಕಣ್ಣೀರ್, ಪುರುಸೆರೆಕಟ್ಟುನಗ್ಲೆನ ದಿಮ್ಮಿಸಾಲೆ, ಕರಂಗೋಲು, ಗುವೇಳ್ದ ಮಣ್ಣು ದೆರ್ಪುನಗ ‘ಏರಿಯ’, ದಿನ್ನ ದೆರ್ಪುನಗ ಪಾಡುನ ‘ಆಯಿಸ್ಸ’, ಗುಡ್ಡೆದ ಅಂಚಿ ಇಪ್ಪುನಗಳೆನ್ ಲೆಪ್ಯರ ‘ಕೂಕುಲು’, ದೊಂದಿ ಪತ್ತೊಂದು ಮಾರಿ ಗೆಡಪುನ, ಪಂಜಿ ಪುಂಡಿದ ವನಸ್, ಬೊಳ್ಳದ ನೀರ್ಡ್ ಪೀ೦ಕ ಪಾಡುದು ಮುರ್ಕುನ, ಕೋರಿ-ಗೋಂಕುದ ಬಾಜೆಲ್ ಕುಲೆಕುಲೆಗ್ ದೀಪುನ, ಒಂದಾ ಎರಡಾ? ತುಳುನಾಡಿನ ಸಂಸ್ಕೃತಿಯಲ್ಲಿ ನೀವು ಪೂರ್ತಿ ಅನುಭವಿಸುತ್ತ ಜೀವಿಸಬೇಕೆಂದರೆ ನಿಮಗೆ ಒಂದು ಸಹಸ್ರಮಾನದಷ್ಟು ಆಯುಷ್ಯ ಬೇಕಾಗುತ್ತದೆ.

ಮಂಗಳೂರಿಗೆ ಎಲ್ಲಿಂದ ಬೇಕಾದರೂ ಹೊರಡಿ, ಹೇಗೆ ಬೇಕಾದರೂ ಹೊರಡಿ, ನಿಮ್ಮನ್ನು ನಮ್ಮಲ್ಲಿಗೆ ತಲಪಿಸಲು ರಸ್ತೆಗಳಿವೆ, ರೈಲುಗಳಿವೆ, ಅಂತಾರಾಷ್ಟ್ರೀಯ ವಿಮಾನಗಳಿವೆ ಮತ್ತು ಹಡಗುಗಳೂ ಕೂಡ. ನಮ್ಮಲ್ಲಿ ಒಳ್ಳೆಯ ರಸ್ತೆಗಳಿಗೆ, ಐದು ನಿಮಿಷಕ್ಕೊಂದು ಬಸ್ಸು ಸರ್ವೀಸಿದೆ. ಪ್ರತಿ ಮನೆಗೆ ಒಂದು ಬಜಾಜ್ ರಿಕ್ಷಾ, ತಪ್ಪಿದರೆ ಆಪೇ ಆಟೋ ಅಥವಾ ಮಹೀಂದ್ರಾ ಜೀಪು !!

ದೇವರ ನಾಡು-ದೈವದ ಬೀಡು

ನಮ್ಮನ್ನಿಲ್ಲಿ ಕಾಯಲು ಹತ್ತಾರು ದೇವರುಗಳಿದ್ದಾರೆ. ನಮ್ಮದು ದೇವರ ನಾಡು. ಕಟೀಲಿನ ದುರ್ಗಾ ಪರಮೇಶ್ವರಿ, ಶೃಂಗೇರಿಯ ಶಾರದಾಂಬೆ, ಮಂಗಳೂರಿನ ಮಂಗಳಾದೇವಿ, ಕೊಲ್ಲೂರ ಮೂಕಾಂಬಿಕಾ, ಕದ್ರಿಯ ಮಂಜುನಾಥ, ಉಡುಪಿಯ ಶ್ರೀ ಕೃಷ್ಣ, ಪೊಳಲಿಯ ದುರ್ಗಾಪರಮೇಶ್ವರಿ, ಕುಕ್ಕೆಯ ಸುಬ್ರಮಣ್ಯ, ಕೊಲ್ಲೂರಿನ ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ ಮತ್ತು ಸುರ್ಯದ ಸೂರ್ಯನಾರಾಯಣ. ಪಕ್ಕದಲ್ಲೇ ಅನತಿ ದೂರದಲ್ಲಿ ಧ್ಯಾನದಲ್ಲಿ ಬೃಹದೇಶ್ವರ ಮುರುಡೇಶ್ವರ !

ನಾವು ಕೇವಲ ದೇವರ ಮೇಲೆ ಮಾತ್ರ ಭಾರ ಹಾಕಿ ಕೂರುವವರಲ್ಲ. ಜನಸಂಖ್ಯೆ ವಿಪರೀತವಾದ ಕಾರಣ ದೇವರು ಕೂಡ ಬ್ಯುಸಿ ಇರಬಹುದು. ಅದೇ ಕಾರಣಕ್ಕೆ ನಮ್ಮನ್ನು ತಕ್ಷಣಕ್ಕೆ ಅಟೆಂಡ್ ಮಾಡಲು ತರಹೇವಾರಿ ದೈವಗಳಿವೆ. ದೇವರುಗಳಷ್ಟೇ ತೀವ್ರತೆಯಿಂದ ದೈವಗಳನ್ನೂ ನಾವು ನಂಬುತ್ತೇವೆ. ದೇವರು ಧ್ಯಾನಸ್ಥನಾಗಿ ಕೂತಾಗ ಗಡಿ ಕಾಯಲು ದೈವಗಳೇ ತಾನೇ ಬೇಕು?
ಕಲ್ಲುರ್ಟಿ, ಕಡಂಬು, ಕಾನತ್ತೂರು,ಗುಳಿಗ, ವಿಷ್ಣುಮೂರ್ತಿ ಒತ್ತೆಕೋಲ, ರಕ್ತೇಶ್ವರಿ, ಪಣೋಲಿಬೈಲು, ಇಪ್ಪದಜ್ಜ, ಕೊರಗಜ್ಜ, ಕಲ್ಕುಡ, ಚಾಮುಂಡಿ, ಪಿಲಿಚಾಮುಂಡಿ ಮುಂತಾದ ಭೂತ ದೈವಗಳು ನಮಗೆ ವರ್ತಮಾನದಲ್ಲಿ ಸಹಾಯ ಮಾಡುತ್ತವೆ. ಇದಲ್ಲದೆ ನಮಗೆ, ನಾಗದೇವನ ಏಳು ಸುತ್ತಿನ ಕೋಟೆಯ ಸರ್ಪಗಾವಲಿದೆ. ಇವರನ್ನೆಲ್ಲ ದಾಟಿ ಗೆದ್ದುಕೊಂಡು ನಮ್ಮನ್ನು ಮುಟ್ಟುವ ಧೈರ್ಯ ಯಾರಿಗಿದೆ?

ತುಳುವರಿಗೆ ಬಲಿ ಚಕ್ರವರ್ತಿ ಒಬ್ಬ ಅಸುರ ಮಾತ್ರವಲ್ಲ. ಆತ ನಮಗೆ ರಕ್ಷಣೆ ಒದಗಿಸಿದ ರಾಜ. ನಮ್ಮನ್ನು ಸ್ವಂತ ಮಕ್ಕಳಂತೆ ಸಲಹುತ್ತಿದ್ದ ಆತ ನಮಗೆ ಮಹಾ ವಿಷ್ಣುವಿನಷ್ಟೇ ಪ್ರೀತಿ ಪಾತ್ರ. ನಮಗೆ ಆತನೆಷ್ಟು ಇಷ್ಟವೆಂದರೆ, ದೇವತೆಗಳಿಗಾಗಿ ಬಲಿಯನ್ನು ಕೊಂಡ ಶ್ರೀಮನ್ನಾರಾಯಣನ ಮೇಲೆ ಕೋಪ ಬರುವಷ್ಟು !

ಬೀಚುಗಳು

ಬೇಸರಗೊಂಡ ಮನಸ್ಸಿನ ತಲೆ ನಿವಾರಿಸಲು ನಮ್ಮಲ್ಲಿ ಸಾಲು ಸಾಲು ಬೀಚುಗಳಿವೆ, ಪಣಂಬೂರು ಬೀಚಿನ ಸೌಂದರ್ಯ, ಸೋಮೇಶ್ವರದ ಸೊಬಗು, ಸುರತ್ಕಲ್ಲಿನ ಬೆರಗು, ಪಡುಬಿದ್ರಿಯ ಪ್ರಶಾಂತತೆ, ಉಳ್ಳಾಲದ ರೌದ್ರತೆ, ತನ್ನೀರಭಾವಿಯ ಸ್ವಚ್ಛತೆ, ಸಸಿಹಿತ್ಲಿನ ನೀರವತೆ ನಮ್ಮ ದುಗುಡಕ್ಕೊಂದಿಷ್ಟು ಸಾಂತ್ವನ ಹೇಳದೆ ಇರದು. ಬೀಚುಗಳು ತುಳುನಾಡಿನ ಯುವಪ್ರೇಮಿಗಳ ಪ್ರೀತಿಯ ತಾಣ. ಸುಮ್ಮನೆ ಯಾರಿಗೂ ಗೊತ್ತಾಗದಂತೆ ಕ್ಲಾಸಿಗೆ ಚಕ್ಕರ್ ಹೊಡೆದು, ಬೆಳಿಗ್ಗೆ ಹತ್ತು ಹನ್ನೊಂದಕ್ಕೆ ಬೀಚಿಗೆ ಹೋದರೆ ಮತ್ತೆ ಸೂರ್ಯಾಸ್ತದ ಲಕ್ಷಣ ಮೂಡಿದರೂ ವಾಪಸ್ಸು ಬರುವ ಮನಸ್ಸಾಗುವುದಿಲ್ಲ. ಆತನ ಬಲ ಹೆಗಲಿಗೆ ಜೋತುಬಿದ್ದು ಭುಜಕ್ಕೆ ಭುಜ ತಾಗಿಸಿ ನಡೆದರೇನೇ ಆಕೆಗೆ ತೃಪ್ತಿ. ಮರಳಿನಲ್ಲಿ ಕಾಲು ಹುದುಗಿಸಿ ಅನಂತ ಸಮುದ್ರ ದೆಡೆಗೆ ದೃಷ್ಟಿಹಾಯಿಸಿದಾಗಲೇ ಗಟ್ಟಿಗೊಳ್ಳುವುದು ಅವರ ನಿರ್ಧಾರಗಳು.

ನಮಡ ಬಲ್ಲಿ !!

ನಾವು ಯಾವುದರಲ್ಲಿಯೂ ಕಮ್ಮಿಯಿಲ್ಲವೆಂದು ಹೇಳುವುದು ಸಮಂಜಸವಾಗುವುದಿಲ್ಲ. ಬದಲಾಗಿ, ನಾವು ಯಾವುದರಲ್ಲಿ ಹೆಚ್ಚುಗಾರಿಕೆ ಹೊಂದಿದ್ದೇವೆಂದು ನಮ್ಮವರಲ್ಲದ ಜನರು ಮಾಡಿದ ಸರ್ವೆಗಳು ಹೇಳುತ್ತವೆ.
‘CEO ವರ್ಲ್ಡ್’ ಪ್ರಸ್ತುತಪಡಿಸಿದ 2019 ರ ಸಾಲಿನ ಪ್ರಪಂಚದ ಟಾಪ್ ಸುರಕ್ಷಾ ನಗರಗಳಲ್ಲಿ ಮಂಗಳೂರು ಕೂಡ ಒಂದು. ಈ ಪಟ್ಟಿಯಲ್ಲಿ ಮಂಗಳೂರಿಗೆ ಜಗತ್ತಿನಲ್ಲಿ 43 ನೆಯ ಸ್ಥಾನ. ಮೊದಲ ಸ್ಥಾನದಲ್ಲಿ, ಯುನೈಟೆಡ್ ಅರಬ್ ಎಮಿರೈಟ್ಸ್ ನ ಅಬುದಾಭಿ ಇದ್ದರೆ, ನಂತರದ ಸ್ಥಾನದಲ್ಲಿ ಕತಾರ್ ನ ದೋಹಾ ಇದೆ. ಮೂರನೆಯ ಸ್ಥಾನದಲ್ಲಿ ಕೆನಡಾದ ಕ್ಯುಬೆಕ್ ಸಿಟಿ. ಆಶ್ಚರ್ಯವಾಗಬಹುದು ನಿಮಗೆ : ಟಾಪ್ 50 ಸುರಕ್ಷತಾ ಪಟ್ಟಿಯಲ್ಲಿ, ಮಂಗಳೂರು 43 ನೆಯ ಸ್ಥಾನದಲ್ಲಿದ್ದರೂ, ಆ ಪಟ್ಟಿಯಲ್ಲಿ, ಭಾರತದ ಇನ್ಯಾವುದೇ ನಗರವಿಲ್ಲ ! ಭಾರತದ ಇನ್ನೊಂದು ನಗರ ಗುಜರಾತಿನ ವಡೋದರಾಕ್ಕೆ ವರ್ಲ್ಡ್ ರಾಂಕಿಂಗ್ ನಲ್ಲಿ 66 ನೆಯ ಸ್ಥಾನ (ಎರಡನೆಯ ಟಾಪ್). ಅಂದರೆ ಮಂಗಳೂರು, ಭಾರತದ ನಂಬರ್ 1 ಸುರಕ್ಷಾ ನಗರ !
ಅಷ್ಟೇ ಅಲ್ಲ, ಕ್ವಾಲಿಟಿ ಆಫ್ ಲೈಫ್, ಉತ್ತಮ ಆಹಾರ ವಿಧಾನ, ಉತ್ಕೃಷ್ಟ ಆರೋಗ್ಯ ಸೇವೆ, ಸಾರಿಗೆ ನೆಟ್ ವರ್ಕ್, ಸಾಕ್ಷರತೆ, ರುಚಿ ಭರಿತ ಆಹಾರ ಪದ್ಧತಿ- ಎಲ್ಲದರಲ್ಲಿ ತುಳುವರನ್ನು ಮೀರಿಸಲು ಯಾರಿಗೆ ತಾನೇ ಸಾಧ್ಯ?

ಬ್ಯಾಂಕುಗಳು

ದಕ್ಷಿಣ ಕನ್ನಡ ಬ್ಯಾಂಕುಗಳ ಅಜ್ಜಿ ಮನೆ. ಭಾರತದ ದೊಡ್ಡ ದೊಡ್ಡ ಬ್ಯಾಂಕು ಹುಟ್ಟಿದ್ದು ಬೆಳೆದದ್ದು ನಮ್ಮಲ್ಲಿ. ಅಮ್ಮೆ೦ಬಳ ಸುಬ್ಬರಾವ್ ಪೈ 1909 ರಲ್ಲಿ ಸ್ಥಾಪಿಸಿದ ಕೆನರಾ ಬ್ಯಾಂಕು, ಅತ್ತಾವರ ಬಾಲಕೃಷ್ಣ ಶೆಟ್ಟಿ ಯವರ ವಿಜಯಾ ಬ್ಯಾಂಕು , ಟಿ.ಎಂ.ಎ ಪೈ, ಉಪೇಂದ್ರ ಅನಂತ ಪೈ ಮತ್ತು ವಾಮನ ಶ್ರೀನಿವಾಸ ಕುಡ್ವ ಸ್ಥಾಪಿಸಿದ ಸಿಂಡಿಕೇಟ್ ಬ್ಯಾಂಕ್, ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ರ ಕಾರ್ಪೋರೇಶನ್ ಬ್ಯಾಂಕ್, ಬಿ. ಆರ್. ವ್ಯಾಸರಾಯ ಆಚಾರ್ ಮತ್ತು ಕೆ.ಎಸ್.ಎನ್.ಅಡಿಗರ ಕರ್ನಾಟಕ ಬ್ಯಾಂಕು ಎಲ್ಲವೂ ನಮ್ಮ ನೆಲದ ಆಲೋಚನೆಯಿಂದ ಮೊಳೆತು ದೇಶವ್ಯಾಪಿಸಿದ ಬ್ಯಾಂಕುಗಳು.

ಅಲ್ಲದೆ, ಆ ದಿನ ಮೂಲ ಬಂಡವಾಳಕ್ಕಾಗಿ ಪರದಾಡುತ್ತಿದ್ದಾಗ, ರಿಲಯನ್ಸ್ ಮಾಲೀಕ ಧೀರೂಭಾಯಿ ಅಂಬಾನಿಗೆ ಕರೆದು ಸಾಲ ಕೊಟ್ಟವರಾರೆಂದು ಬಲ್ಲಿರಾ? ಅವತ್ತು ಎಸ್ ಬಿ ಐ ತಿರಸ್ಕರಿಸಿದ ಲೋನ್ ಅಪ್ಲಿಕೇಶನ್ ಅನ್ನು ಪುರಸ್ಕರಿಸಿ ಅಂಬಾನಿಗೆ ಸಾಲ ಕೊಟ್ಟದ್ದು ನಮ್ಮ ಕೆ.ವಿ.ಕಾಮತರ ಐಸಿಐಸಿಐ ಬ್ಯಾಂಕು ! ಇವತ್ತಿನ ದೈತ್ಯ ಕಂಪನಿ ರಿಲಯನ್ಸ್ ನ ಸಕ್ಸಸ್ ನ ಹಿಂದೆ ನಮ್ಮವರೂ ಇದ್ದಾರೆ. ನಮ್ಮವರಿಗೆ ಪ್ರತಿಭೆಯನ್ನು ಗುರುತಿಸುವುದು ಗೊತ್ತು. ಇವತ್ತು ಈ ಎಲ್ಲ ಬ್ಯಾಂಕ್ ಗಳೂ ಬಲಿತು ಲಕ್ಷಾಂತರ ಉದ್ಯೋಗ ಸೃಷ್ಟಿಸಿವೆ. ಜನರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸಿವೆ. ಜನರ ಕನಸುಗಳಿಗೆ ಸಹಾಯ ಹಸ್ತ ಚಾಚಿವೆ.

ಸ್ಕೂಲು-ಆಸ್ಪತ್ರೆ

ನಮ್ಮ ಪ್ರತಿ ಊರಿಗೂ ಒಂದು ಹಿರಿಯ ಪ್ರಾಥಮಿಕ ಶಾಲೆಯಿದೆ. ಪ್ರೈವೇಟ್ ಶಾಲೆಗಳಿಗೆ ಸ್ಪರ್ಧೆನೀಡಿ ಸರಕಾರೀ ಶಾಲೆಗಳು ಫಲಿತಾಂಶ ಕೊಡುತ್ತಿವೆ. ತುಳುನಾಡೆನ್ನುವುದು ಕೆಆರ್ ಇಸಿ ಸುರತ್ಕಲ್, ನಿಟ್ಟೆ, ಆಲ್ವಸ್, ಅಲೋಶಿಯಸ್, ಎಕ್ಸ್ಪರ್ಟ್, ಮಹೇಶ್, ಎಸ್ ಡಿಎಂ, ಬಾಳಿಲ ಮುಂತಾದ ವರ್ಲ್ಡ್ ಕ್ಲಾಸ್ ಎಜುಕೇಷನಲ್ ಹಬ್ಬು. ಕೆಎಂಸಿ, ಮಣಿಪಾಲ, ಎ ಬಿ ಶೆಟ್ಟಿ, ಎ ಜೆ, ವೆನ್ ಲಾಕ್, ಫಾದರ್ ಮುಲ್ಲರ್, ಕಂಕನಾಡಿ, ಬಿ ಆರ್ ಶೆಟ್ಟಿ, ಯೇನೆಪೊಯ ಮುಂತಾದ ಉತ್ಕೃಷ್ಟ ವೈದ್ಯಕೀಯ ಸೇವೆಗಳ ವೆಬ್ಬು! ಟಿಎಂಎ ಪೈಯರು 1953 ರಲ್ಲಿ ಸ್ಥಾಪಿಸಿದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಪ್ರಾರಂಭವಾಗಿಯೇ ಎರಡು ತಲೆಮಾರು ಕಳೆದು ಯೋಯಿತು. ಅಲ್ಲಿ ಓದಿದ ಮೊದಲ ಬ್ಯಾಚಿನ ಡಾಕ್ಟರುಗಳ ಮೊಮ್ಮಕ್ಕಳು ಕೂಡ ಈಗ ಡಾಕ್ಟರುಗಳಾಗಿದ್ದಾರೆ ! ಅಲ್ಲಿ ಕಲಿತ ಡಾಕ್ಟರರುಗಳು ಇಡೀ ಪ್ರಪಂಚದ ಶುಶ್ರೂಷೆ ಮಾಡಿದ್ದಾರೆ.

Image result for kmc mangalore

ಹುಡುಗನಿಗೆ ಓದು ತಲೆಗೆ ಹತ್ತಿ, ಮನೆಯಲ್ಲಿ ಓದಿಸಲು ಅನುಕೂಲವಿದ್ದರೆ ಆತ/ಆಕೆ ದೊಡ್ಡ ಕೆಲಸಕ್ಕೆ ಸೇರುತ್ತಾನೆ/ಳೆ. ಓದು ತಲೆಗೆ ಹತ್ತದೆ ಹೋದರು ಅಡ್ಡಿಯಿಲ್ಲ. ಆತ ಹೇಗೋ ಗಲ್ಫ್ ಗೆ ಹೋದವರನ್ನು ಪತ್ತೆಮಾಡಿಕೊಂಡು ಒಂದು ವೀಸಾ ಅರೇಂಜ್ ಮಾಡಿಕೊಂಡು ದುಬೈ ಸೇರಿರುತ್ತಾನೆ. ಮತ್ತೆ ವಾಪಸ್ಸು ಬರುವಾಗ ಆತನ ಕೊರಳಲ್ಲಿ ಬೆರಳ ಗಾತ್ರದ ಚೈನು, ಇಷ್ಟಗಲದ ಬ್ರೇಸ್ಲೆಟ್ ಮತ್ತು ಅಕ್ಕನ ಮದುವೆಯ ಪ್ಲಾನು. ಊರಿಗೆ ಬಂದು ಒಂದು ಪುಟ್ಟ ಕೃಷಿ ಭೂಮಿ ಕೊಂಡು ವ್ಯವಸಾಯಕ್ಕೆ ತೊಡಗಿದರೆ ಲೈಫ್ ಸೆಟ್ಲ್ ಆದಂತೆ. ಕೊರಳ ಚೈನು ನೋಡಿ ಹೆಣ್ಣುಕೊಡಲು ಮುಂದೆ ಬರುವ ಜನರಿಗೇನೂ ಕೊರತೆ ಇಲ್ಲ.

ಕಲೆ ಸಾಹಿತ್ಯ

ಕರ್ನಾಟಕದ ಮೊತ್ತ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಕಟವಾದದ್ದು ಮಂಗಳೂರಿನಿಂದ. ಅದೂ 1841ರಲ್ಲಿ. ಕಿಟೆಲ್ಲರು ಇಲ್ಲಿಗೆ ಬಂದು ಕನ್ನಡ ಕಲಿತು, ನಮಗೆ ಇಂಗ್ಲಿಷ್ ಕಳಿಸಿದ್ದು ಇಲ್ಲೇ ! ಕನ್ನಡ-ಇಂಗ್ಲಿಷ್ ನಿಘಂಟು ತಯಾರಾದದ್ದು ಇದೇ ಊರಿನಲ್ಲಿ !
ದೇಶದಲ್ಲಿ ಯಾವುದೇ ಒಳ್ಳೆಯ ಹಾಡು ಬರಲಿ, ಸಂಗೀತ ಹುಟ್ಟಲಿ, ಬರುವ ವಾರದೊಳಗೆ ಅದು ನಮ್ಮ ತುಳುವಿನಲ್ಲಿ ಬಂದಿರುತ್ತದೆ. ಅದಕ್ಕೆಪುತ್ತೂರು ನರಸಿಂಹ ನಾಯಕ್ ದನಿಯಾಗಿರುತ್ತಾರೆ ! ಅದು ನಮ್ಮ ಸ್ಪೀಡು !!
‘ಪುತ್ತೂರ್ದ ಚಿಕ್ಕಮ್ಮ, ನಂತೂರಿದ ದೊಡ್ಡಮ್ಮ, ಕಣ್ಣೂರದ ಮೈತ್ತಿದಿ, ಕೂಳೂರುದ ಮಾಮಿಯೇ, ಮದಿಮೆ ಒಂಜಿ ಅವೊಡತ್ತೆ……” ಇಂತದ್ದೇ ಒಂದು ಹಾಡು.

ನಮ್ಮಊರಿನ ಹಳ್ಳಿಯ ಜನ ಎಂತವರೆಂದರೆ, ನೀವು ಇಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿದ್ದರೆ, ನಿಮ್ಮತ್ತ ಒಂದು ವಿನಾಕಾರಣದ ಸ್ಮೈಲ್ ಮಾಡುತ್ತಾರೆ. ತಲೆಯ ಮೇಲೆ ಇರುವ ಮಣ ಭಾರದ ಸೊಪ್ಪಿನ ಕಟ್ಟಿನ ಮಧ್ಯದಿಂದ ಮೂತಿ ತೂರಿಸಿ ಎಲೆ ಅಡಿಕೆ ಜಗಿದ ಹಲ್ಲು ತೋರಿಸಿ ನಗದೆ ಅವರು ಇರಲಾರರು.
ನಗುವುದು ನಮ್ಮ ಬ್ರ್ಯಾಂಡು, ಕುಸಲ್ ನಮ್ಮ ರಕ್ತದಲ್ಲೇ ಇದೆ. ಅದಕ್ಕೆ ತಕ್ಕಂತೆ ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಬಾಬಣ್ಣೆ ಬೂಬಣ್ಣೆ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಂದೀಪ್ ಶೆಟ್ಟಿ, ಸತೀಶ್ ಬಂದಾಳೆ, ವಿಜಯಕುಮಾರ್ ಕೊಡಿಯಾಲಬೈಲ್ ಮತ್ತಿತರರು ಕುಸಲ್ ಹಂಚುವ ಕಾರ್ಯದಲ್ಲಿ ಮಗ್ನ !

ಅಡುಗೆ-ಊಟದ ರುಚಿ

ಭಟ್ರುಗಳ-ಕೊಂಕಣಿಯರ ಮನೆಯ ಊಟದ ಗಮ್ಮತ್ತೇ ಬೇರೆ. ಅವರ ಮನೆಯಿಂದ ಮಧ್ಯಾಹ್ನ ಬರುವ ಊಟದ ಘಮವನ್ನು ವಿವರಿಸಿ ಹೇಳುವುದು ಕಷ್ಟ. ಅದರ ಪರಿಮಳಕ್ಕೆ ನಿಮ್ಮ ಬಾಯಿಯಿಂದ ಒಂದು ವರ್ಷಕ್ಕಾಗುವಷ್ಟು ಜ್ವಾಲಾರಸ ಜಿನುಗದೇ ಹೋದರೆ ಮತ್ತೆ ಕೇಳಿ. ಇಷ್ಟೇ ಇಷ್ಟು ಬೆರಳ ತುದಿಯಷ್ಟು ಬೆಲ್ಲ ಹಾಕಿದ ಕೊದ್ದೆಲ್, ಪೈನಾಪಲ್ಲು ಗಸಿ, ಅದೊಂದು ಇಂಗು ಹಾಕಿದ ರಸಂ ಮಾಡುತ್ತಾರೆ : ಹಾಗೆಯೇ, ಮಡಕೆಗಟ್ಟಲೆ ರಸಂ ಅನ್ನು ಕುಡಿಯಬೇಕೆನಿಸುತ್ತದೆ. ಇವರ ಮನೆ ಕೆಲಸ ಕಾರ್ಯಕ್ಕೆ ಜನರ ಅಭಾವ ಆಗುವುದೇ ಇಲ್ಲ. ಊಟದ ರುಚಿಯಲ್ಲೇ ಕೆಲಸಗಾರರನ್ನು ಕಟ್ಟಿಹಾಕುವ ಕಲೆ ಅವರಿಗೆ ಯಾರೂ ಹೇಳಿ ಕೊಡಬೇಕಿಲ್ಲ !

ಅಡುಗೆಯ ರುಚಿ ಸವಿಯಲು ಮಂಗಳೂರಿನಲ್ಲಿ ಅನಂತ ಅವಕಾಶಗಳಿವೆ. ಮಂಗಳೂರಿನ ಬಂದರಿನ ನಾರಾಯಣ ಹೋಟೆಲಿನ ಮೀನು ಊಟ, ಜ್ಯೋತಿ ಸರ್ಕಲ್ಲಿನ ಹೋಟೆಲ್ ‘ಮೀನಾ’, ಕದ್ರಿಯ ಗಜಲಿ, ಪಕ್ಕದಲ್ಲೇ ಮಚಲಿ, ಓಷನ್ ಪಾರ್ಕ್, ಗಿರಿ ಮಂಜಾಸ್, ತಾಜ್ ಮಹಲ್, ಶೆಟ್ಟಿ ಲಂಚ್ ಹೋಂ, ವುಡ್ ಲ್ಯಾಂಡ್ಸ್, ಲೈಟ್ ಹೌಸ್ ಚಾಟ್ಸ್ !

ಬಿಸಿಯೇರಿದ ದೇಹಕ್ಕೆ ತುಸು ತಂಪು ಮಾಡಿ, ಮತ್ತು ಅವಳ ಸಂಗಡ ಅಲೆದಾಡುತ್ತ ಮನಸ್ಸು ಬಿಸಿ ಮಾಡಿಕೊಳ್ಳಲು ಐಡಿಯಲ್ ಕ್ರೀಮ್ ಪಾರ್ಲರ್, ಪಬ್ಬಾಸ್ ! ಮತ್ತು ನಮ್ಮ ಪ್ರತಿ ದಿನದ ಸಂಗಾತಿಗಳಾದ ಲೋಕಲ್ ಭಟ್ಟರ-ಕೊಂಕಣಿಯರ ಊಟದ ಹೋಟೆಲಿನ ಮಸಾಲ ದೋಸೆ, ಗೋಳಿಬಜೆ, ಕಡ್ಲೆ-ಬಜಿಲ್, ಸಜ್ಜಿಗೆ-ಬಜಿಲ್ ಮತ್ತು ಬನ್ಸು! ಉಡುಪಿ ಹೋಟೆಲಿನ ಭಟ್ಟರು, ಹೋಟೆಲಿಗೆ ಕಾಪಿ ಹೀರಲು ಬರುವ ಸುಂದರಿಯ ಕೆನ್ನೆ ನೋಡುತ್ತಲೇ ಬನ್ಸಿನ ಹಿಟ್ಟು ಕಲಸುತ್ತಿರಬೇಕು; ಅದಕ್ಕೆ ಬನ್ಸು ಅವಳ ಕೆನ್ನೆಯಂತೆ ಉಬ್ಬಿದೆ !

ಹಳ್ಳಿ ಮನೆಯ ಅನುಭವ

ಬೈರಾಸು ಸುತ್ತಿಕೊಂಡು ಅಗೆಯಲು ಆತ ನಿಂತರೆ, ಕಾಡ ಹಂದಿ ಕೂಡ ಆತನೆಡೆಗೆ ಅಸೂಯೆಯಿಂದ ಕದ್ದು ನೋಡುವಂತೆ ಆತ ದುಡಿಯುತ್ತಾನೆ. ಈ ಕಡೆಯಿಂದ ಅಡಿಕೆ ಮರಕ್ಕೆ ಹತ್ತಿದರೆ ತೋಟದ ಆ ಬದಿಯಿಂದಲೇ ಆತ ಮದ್ದು ಬಿಟ್ಟು ಇಳಿಯುವುದು. ಒಂದು ಮರದಿಂದಿನ್ನೊಂದಕ್ಕೆಸಲೀಸಾಗಿ ಆತ ಜಾರಿಕೊಳ್ಳುತ್ತಾನೆ.

ಅದರೆ ಸಂಜೆಯಾಗುತ್ತಿದ್ದಂತೆ ಮತ್ತೊಂದು ಕಲರ್ ಫುಲ್ ಪ್ರಪಂಚ ಬಿಚ್ಚಿಕೊಳ್ಳುತ್ತದೆ. ಹೀಗೆ ದಿನವಿಡೀ ಮೈಬಗ್ಗಿಸಿ ದುಡಿದ ದೇಹ ಬಾಯಾರಿ ನಿಂತಿದೆ. ದೇಹದ ನರ ನಾಡಿಗಳಲ್ಲಿ ಎಂತದ್ದೋ ಹಾಹಾಕಾರ. ಗಂಟಲ ಬುಡದಲ್ಲಿಯೂ ನಿಲ್ಲದ ತಹತಹ ! ಅಂತಹ ಹೊತ್ತಲ್ಲಿ, ಎಲ್ಲಿಂದ ಹೊರಟರೂ, ಹೇಗೆ ಹೊರಟರೂ, ಕಣ್ಣು ಮುಚ್ಚಿಕೊಂಡು ಸೇರುವುದು ಅಲ್ಲಿಗೇನೇ !

ಇಂತಹ ಬಾಯಾರಿಕೆಯನ್ನು ಹೋಗಲಾಡಿಸಲು ಬಾಗಿಲು ತೆರೆದು ನಿಂತಿವೆ ಸಾಲು ಸಾಲು ವೈನ್ ಶಾಪುಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳು. ಇವಿಷ್ಟೇ ಅಲ್ಲದೆ, ಇವತ್ತು ಊರಿನ ಚಿಕ್ಕ ಪುಟ್ಟ ಅಂಗಡಿಗಳು ಕೂಡಾ ‘ಸುಖ ಹಂಚುವ’ ಫ್ರ್ಯಾಂಚೈಸೀ ಗಳಾಗಿ ನಿಂತಿವೆ !

ಇಂತಹುದರಲ್ಲಿ, ಅದೊಂದಿದೆ ಉಜಿರೆಯ ‘ ಜುಗುಲ್ ವೈನ್ಸ್’ ಅದೆಂಥ ಅಧ್ಭುತ ಹೆಸರು ! ವೈನ್ ಶಾಪಿಗೆ ಅದಕ್ಕಿಂತ ವಿಶಿಷ್ಟ, ಅದಕ್ಕಿಂತ ಕಲರ್ ಫುಲ್ ಬೇರೆ ಯಾರೂ ಇಡಲು ಸಾಧ್ಯವಿಲ್ಲ. ಬಹುಶ ಯಾರೋ ಕಿಲಾಡಿ, ಮೂರು ಪೆಗ್ಗು ಏರಿಸಿಕೊಂಡು ಲಹರಿಯಲ್ಲಿದ್ದಾಗ ಹುಡುಕಿ ಇಟ್ಟ ಹೆಸರಾಗಿರಬೇಕು ಅದು !
ಜುಗುಲ್ ವೈನ್ಸ್, ವಾಟ್ ಎ ಸೆಕ್ಸಿ ನೇಮ್ ?!
ಮತ್ತೆ, ‘ಪಿಡ್ಕ್’ ಮತ್ತು ‘ಪುಂಡಿ’ಯ ಮೇಲೆ ಇದೆ ನಮ್ಮ ಪೇಟೆಂಟು ! ಅದರ ಫಾರ್ಮುಲಾ ಇರುವುದು ನಮ್ಮಕೈಯಲ್ಲೇ. ತುಳುವರಲ್ಲದವರಿಗೆ ಹಾಗೆಂದರೇನೆಂದು ಕೂಡ ಗೊತ್ತಿಲ್ಲ. ನಮ್ಮಷ್ಟು ಸಲೀಸಾಗಿ ಫಿಡ್ಕ್ ಹಾಕುವುದೂ, ಪುಂಡಿ ಬೇಯಿಸುವುದು ಯಾರಿಗೆ ತಾನೇ ಸಾಧ್ಯ?! ಪುಂಡಿ ಬೇಯಿಸುವುದರಲ್ಲಂತೂ ಇದೆ ನಮ್ಮ ವರ್ಲ್ಡ್ ರೆಕಾರ್ಡು !

“ಎಂಚಿ ಸಾವಿಯ, ಸಂತೆಲು, ಬ್ಯಾವರ್ಸಿ, ಮರ್ಲ, ಹಡಬೆ, ಮೂಜಿ ಕಾಸ್ದಾಯ, ನಿನ್ನ ಅಮ್ಮಡ ಪನ್ (ಅಮ್ಮ ಅಂದರೆ ಅಪ್ಪ!), ಸಯ್ಯರಣ ಪೋತಿನ?, ಅಂಡೆ ಪಿರ್ಕಿ, ದಾನೇ ಮಲ್ಲ ಪಂಕಾ, ಬೊದುಳ, ಕೆಪ್ಪ, ಮಂಡೆ ದರ್ಪೋಡ……ಓಹ್ ಇಲ್ಲಿ ಬಯ್ಯಲು ಒಂದು ಜ್ಞಾನಪೀಠಕ್ಕಾಗುವಷ್ಟು ಕಲರ್ ಫುಲ್ ಸಾಹಿತ್ಯವಿದೆ. ಈ ಪಠ್ಯಪುಸ್ತಕದಿಂದ ಒಂದಷ್ಟು ಹೆಕ್ಕಿ ಗೆಳೆಯ ಗೆಳತಿಗೆ ಒಂದು ದಿನ ಬಯ್ಯದೆ (ಹೊಗಳದೆ ?) ಹೋದರೆ, ಆತ/ಆಕೆ ಇನ್ನೊಂದು ವಾರ ತಲೆಕೆಡಿಸಿಕೊಳ್ಳುತ್ತಾರೆ. ” ನೆಕ್ಕ್ ದಾನೇ ಅಂಡ್ಯ ರೋಗ?” ಎಂದು. ಮತ್ತೆ ಅವರಿಬ್ಬರೂ ಸರಿ ಆಗಬೇಕೆಂದರೆ ಒಂದು ‘ಸಿಟ್ಟಿಂಗ್’ ಆಗ್ಲೇಬೇಕು.

ಅಡುಗೆ ಮನೆಗೆ ತಾಗಿದಂತೆ, ಇಳಿಸಿದ ಮಾಡಿನ ಕೆಳಗೆ ಒಂದು ದೊಡ್ಡ ಕಡೆಯುವ ಕಲ್ಲಿದೆ. ಅಕ್ಕಮಕ್ಕ ಅದರಲ್ಲಿ ನಾಟಿ ಮಸಾಲ ಗಸಗಸ ರುಬ್ಬುತ್ತಾಳೆ. ಅವಳ ಗಂಡ ಹಿತ್ತಲಿನಲ್ಲಿ ತುಂಬಾ ಬ್ಯುಸಿ. ನಾಟಿ ಕೋಳಿ ಕುಯ್ದು, ಬಚ್ಚಲ ಮನೆಯ ಒಲೆಯಲ್ಲಿ ಘಮ ಬೀರುವವರೆಗೆ ಸುಟ್ಟು ತಂದು ರಿಪೇರಿ ಮಾಡಿಕೊಟ್ಟರೆ, ಮತ್ತರ್ಧ ಗಂಟೆಯಲ್ಲಿ ಮಣ್ಣಿನ ಪಾತ್ರೆಯ ಒಳಗೆ ಕೋಳಿಯು ಆ ಬಿಸಿಗೆ ಮೇಲೆ ಕೆಳಗೆ ಓಡಾಡಿ ಬೇಯುತ್ತದೆ. ಮನೆಯ ಮಕ್ಕಳೋ, ಪ್ರತಿ ಐದು ನಿಮಿಷಕ್ಕೊಂದು ಅಡುಗೆ ಮನೆಗೆ ಕಳ್ಳಬೆಕ್ಕಿನಂತೆ ಬಂದು, ಅಡುಗೆ ಮನೆಯ ಪರಿಮಳವನ್ನು ಕದ್ದು ಮೂಸಿ, ಅಜ್ಜಿಯಿಂದ ಬೈಸಿಕೊಳ್ಳದೆ ಹೋದರೆ ಅವರಿಗೆ ಸಮಾಧಾನವಿಲ್ಲ. ಮತ್ತೆ ಎಲ್ಲರೂ ಸ್ನಾನ ಮಾಡಿ, ಮತ್ತೊಂದು ಬಾರಿ ಗಂಟಲ ಬುಡಕ್ಕೆ ಲಾವಾರಸದಂತಹ ತೀರ್ಥವನ್ನು ಸುರಿದುಕೊಂಡು, ಮಣೆ ಎಳೆದುಕೊಂಡು ಊಟಕ್ಕೆ ಕೂತರೆ, ಅವಳು ಬಿಸಿ ಬಿಸಿ ಅಕ್ಕಿ ರೊಟ್ಟಿ ತಟ್ಟಿ ಕೊಡಬೇಕು, ಇವರೆಲ್ಲ, ಮುರಿದು ಮುರಿದು ಬಡಿದುಹಾಕಬೇಕು ! ಮಕ್ಕಳು ಕೂಡ, ಒಳ್ಳೆ ಪೈಲ್ವಾನ್ ಗಳು ತಿನ್ನುವಂತೆ ಬಟ್ಟಲು ತುಂಬಾ ಹಾಕಿಕೊಂಡು ತಿಂದು, ಪ್ಲೇಟ್ ಕ್ಲೀನ್ ಮಾಡಿಟ್ಟಂತೆ ಸೀ೦ಟಿ ಬಿಡುತ್ತಾರೆ.

ಕಾಡಿನ ನಿಗೂಢತೆ, ನದೀ ತೀರದ ನಿರ್ಲಿಪ್ತ ಮೌನ, ಸಮುದ್ರ ತೀರದ ಉದ್ಘೋಷ, ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗಿನ ತನ್ಮಯತೆ, ನಿರಂತರ ನೀರ ಪರದೆಯಂತೆ ಸುರಿಯುವ ವರ್ಷಘೋಷದ ಜತೆ ಹೆಜ್ಜೆ ಹಾಕುತ್ತಾ ನೆನೆಯುವ ಎಕ್ಸ್ಪೆರಿಮೆಂಟು, ಬಿರು ಬಿಸಿಲಿಗೆ ಮೈಯನ್ನು perspire ಮಾಡುತ್ತಾ, ನ್ಯಾಚುರಲ್ moisturize ಗೆ ಮೈಯನ್ನು ಒಡ್ಡುತ್ತಾ, ದೇಹ ಬಣ್ಣ ಹೆಚ್ಚಿಸಿಕೊಳ್ಳುವ ಅವಕಾಶ ನಮ್ಮ ಪ್ರಕೃತಿಗೆ ಇದೆ !

ನಮ್ಮ ಮಂಗಳೂರು, ತುಳುವಿನಲ್ಲಿ ಕುಡ್ಲ, ಕೊಂಕಣಿಯಲ್ಲಿ ಕೊಡಿಯಾಲ್, ಮಲಯಾಳದಲ್ಲಿ ಮಂಗಳಾಪುರಂ, ಮತ್ತು ಬ್ಯಾರಿ ಭಾಷೆಯಲ್ಲಿ ಮೈಕಲ ಆಗುತ್ತದೆ. ಮಂಗಳೂರು ಎಲ್ಲದರ ಸಂಕಲನ. ಯಾವುದೇ ಹೆಸರಿನಿಂದ ಕರೆದರೂ, ಯಾವುದೇ ಭಾಷೆಯಲ್ಲಿ ಜೀವಿಸಿದರೂ ಮಂಗಳೂರೆಂದು ಒಟ್ಟಾರೆಯಾಗಿ ಕರೆಯಲ್ಪಡುವ ತುಳುನಾಡಿನ ಆಂತರ್ಯ ಬದಲಾಗುವುದಿಲ್ಲ.
ಹೊಸದಕ್ಕೆ ತೆರೆದುಕೊಳ್ಳುತ್ತಾ, ಮಹತ್ವಾಕಾಂಕ್ಷೆಗಳನ್ನು ಹುಟ್ಟುಹಾಕುತ್ತ, ಚರಿತ್ರೆಯನ್ನು ಸೃಷ್ಟಿಸುತ್ತ, ತನ್ನ ನೆಲದ ಒರಿಜಿನಾಲಿಟಿಯನ್ನು ಕಳೆದುಕೊಳ್ಳದ ಧೀಮಂತ ಮನಸ್ಸುಗಳಿಗೆ ಇನ್ನೊಂದು ಹೆಸರು ನಮ್ಮ ಮಂಗಳೂರು !
ನಮ ಕುಡ್ಲದಕುಲು. ಸೊಲ್ಮೆಲು…

ಸುದರ್ಶನ್ ಬಿ.ಪ್ರವೀಣ್, ಬೆಳಾಲು 81478 20538

error: Content is protected !!
Scroll to Top
%d bloggers like this: