ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ತೀರ್ಪಿನ ಸಂದರ್ಭ ಪ್ರಾಜ್ಞತೆ ಮೆರೆದ ಮುಸ್ಲಿಂಮರು
ಇದು ತುಂಬಾ ಅಚ್ಚರಿಯ ವಿಷಯ. ಭಾರತದ ಮುಸ್ಲಿಮರು ಬದಲಾಗಿದ್ದಾರೆ. ಧರ್ಮದ ವಿಷಯ ಬಂದಾಗ, ಧರ್ಮ ಮುಖ್ಯ, ಧರ್ಮ ಮಾತ್ರವೇ ಮುಖ್ಯ ಎಂಬ ನಿಲುವನ್ನು ಮುಸ್ಲಿಮರು ತಾಳುತ್ತಿದ್ದರೋ, ಅಂತಹ ಮುಸ್ಲಿಂ ಸಮುದಾಯ ಬದಲಾಗಿರುವ ಸ್ಪಷ್ಟ ನಿದರ್ಶನ ಈ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ಸಂದರ್ಭ ಅವರು ತೋರಿದ ತಾಳ್ಮೆ ಮತ್ತು ಪ್ರಾಜ್ಞತೆ. ಶತಮಾನಗಳಿಂದ ಮಗ್ಗುಲ ಮುಳ್ಳಾಗಿ ತಿಕ್ಕಿ ತಿವಿದು ಧಾರ್ಮಿಕವಾಗಿ, ರಾಜಕೀಯವಾಗಿ ಭಾರತವನ್ನು ಜರ್ಝರಿತವಾಗಿ ಮಾಡಿದ, ಅಯೋಧ್ಯೆ ರಾಮಮಂದಿರ- ಬಾಬರಿ ಮಸೀದಿ, ಕೊನೆಗೂ ಹಿಂದೂಗಳ ಕೈಸೇರಿದೆ. ಆ ಮೂಲಕ ಅರ್ಧ ಸಹಸ್ರಮಾನದ ಸಮಸ್ಯೆ ಒಂದು ತಾಂತ್ರಿಕ ಅಂತ್ಯ ಕಂಡಿದೆ.
ಭಾರತದ ಸುಪ್ರೀಂ ಕೋರ್ಟು ತನ್ನ ಆದೇಶದಲ್ಲಿ ಬಾಬರಿ ಮಸೀದಿ ಜಾಗ ಶಿಯಾಗೆ ಸೇರಿದ್ದಲ್ಲ. ಖಾಲಿ ಜಾಗದಲ್ಲಿ ಮಸೀದಿ ನಿರ್ಮಾಣವಾಗಿಲ್ಲ. ಮಂದಿರ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. ಆದರೆ ಅಲ್ಲಿ ಹನ್ನೆರಡನೆಯ ಶತಮನದಲ್ಲಿ ಮಂದಿರ ಇರಬಹುದಾದ ಸಾಕ್ಷ್ಯ ಪುರಾತತ್ವ ಇಲಾಖೆಯಿಂದ ಸಿಕ್ಕಿದೆ. ಪುರಾತತ್ವ ಇಲಾಖೆಯ ಮೂಲಕ ದೊರೆತ ಸಾಕ್ಷ್ಯಗಳಲ್ಲಿ ಕೆಲವು ”ಗ್ಯಾಪ್ಸ್” ಇದ್ದರೂ, ಆ ಸಾಕ್ಷ್ಯಗಳನ್ನು ತೆಗೆದುಹಾಕಲಾಗುವುದಿಲ್ಲ. ಉತ್ಖನನದಲ್ಲಿ ದೊರೆತ 12
ಶತಮಾನಕ್ಕೆ ಸೇರಿದ ಕಟ್ಟಡದ ಅವಶೇಷಗಳು ಮತ್ತು, ಬಾಬರಿ ಮಸೀದಿ ಕಟ್ಟಲಾಗಿರುವ ಹದಿನಾರನೆಯ ಶತಮಾನದ ಪ್ರಾರಂಭದಲ್ಲಿ
(1528), ಈ ಎರಡು ಘಟನೆಗಳ ಮದ್ಯೆ 400 ವರ್ಷಗಳಷ್ಟು ಸಮಯ ಏನಾಗಿತ್ತು ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಿದ್ದ ಮಾತ್ರಕ್ಕೆ ಅಲ್ಲಿ ಹಿಂದೆ ಮಂದಿರವಿರಲಿಲ್ಲವೆಂದು ಹೇಳಲು ಆಗುವುದಿಲ್ಲ.
ಧಾರ್ಮಿಕ ನಂಬಿಕೆಗಳನ್ನು ನಾವು ಒಪ್ಪುತ್ತೇವೆ, ಆದರೆ ಪುರಾಣಗಳನ್ನು ಒಪ್ಪಲ್ಲ ಎನ್ನುತ್ತಲೇ, ಪುರಾತತ್ವ ಇಲಾಖೆಯ ಉತ್ಕನನದ ಹಿಂದಿರುವ ಸೈನ್ಸು, ಶತಮಾನಗಳಿಂದ ಪ್ರಚಲಿತವಿರುವ ಜನರ ಮನದಲ್ಲಿ ಹಾಸುಹೊಕ್ಕಾಗಿರುವ ಧಾರ್ಮಿಕ ನಂಬಿಕೆ, ಪೌರಾತ್ಯ ಇತಿಹಾಸಕಾರರು ಅಲ್ಲಲ್ಲಿ ದಾಖಲಿಸಿದ ಲಿಖಿತ ಇತಿಹಾಸ, ರಾಮನ ಜನ್ಮಸ್ಥಾನ ಅಂತ ಇದ್ದರೆ ಒಂದೇ ಇರಬೇಕಾಗುತ್ತದೆ, ಆದರೆ ಮಸೀದಿ ಅಂತ ಎಲ್ಲಿ ಬೇಕಾದರೂ ಮಾಡಬಹುದು, ಹೀಗೆ ಒಟ್ಟಾರೆ ಸೈನ್ಸು, ಧರ್ಮ, ಇತಿಹಾಸ, ನಂಬಿಕೆ, ಜನಪರ ಕಾಳಜಿ ಎಲ್ಲದರ ‘ಪರ್ಫೆಕ್ಟ್ ಮಿಕ್ಸ್’ ಆಗಿ ತೀರ್ಪು ಹೊರಬಿದ್ದಿದೆ.
ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಸಾಕ್ಷಿಯನ್ನು ಬಹುದೊಡ್ಡ ಸಾಕ್ಷಿಯಾಗಿ ಪರಿಗಣಿಸಿದೆ ಕೋರ್ಟು. ಆ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ಪರವಾಗಿ ಶತಮಾನದ ಶನಿವಾರದ ತೀರ್ಪು ಪ್ರಕಟಿಸಿ ರಾಮಲಲ್ಲ ಪರ ಅರ್ಜಿಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಮಂಡಳಿಯ ಅರ್ಜಿಗಳನ್ನು ತಿರಸ್ಕರಿಸಿ, ಒಟ್ಟಾರೆಯಾಗಿ ಅಯೋಧ್ಯೆಯ ವಿವಾದಿತ ಜಾಗವನ್ನು ಪೂರ್ತಿಯಾಗಿ ಹಿಂದೂ ಸಂಘಟನೆಯಾದ ರಾಮಲಲ್ಲಗೆ ನೀಡಿ ತನ್ನ ಆದೇಶ ನೀಡಿದೆ.
ಬರೋಬ್ಬರಿ
1045 ಪುಟಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟು ತನ್ನ ಆದೇಶದಲ್ಲಿ ಸವಿವರವಾಗಿ ವಿವರಣೆ ನೀಡಿದೆ. ಒಟ್ಟಾರೆಯಾಗಿ ಅಯೋಧ್ಯೆಯ ವಿವಾದಿತ ಜಾಗವನ್ನು ಪೂರ್ತಿಯಾಗಿ ಹಿಂದೂ ಸಂಘಟನೆಯಾದ ರಾಮಲಲ್ಲಗೆ ನೀಡಿ ತನ್ನ ಆದೇಶ ನೀಡಿದೆ. ಅಂತೆಯೇ ಮುಸ್ಲಿಮರಿಗೆ ಅಯೋಧ್ಯೆಯಲ್ಲಿ 5 ಎಕರೆಗಳಷ್ಟು ಜಾಗವನ್ನು ಸುನ್ನೀ ವಕ್ಫ್ ಬೋರ್ಡ್ ಗೆ ನೀಡಬೇಕೆಂದು ಸರಕಾರಕ್ಕೆ ಆದೇಶಿಸಿದೆ. ಆ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಬೇಕೋ ಬೇಡವೋ ಎಂಬ ನಿರ್ಧಾರವನ್ನು ಮುಸ್ಲಿಂ ಬೋರ್ಡ್ ನೇ ಮಾಡಲು ಸೂಚಿಸಿದೆ.
ಸುಪ್ರೀಂ ಕೋರ್ಟು ಆದೇಶ ವನ್ನು ಎಲ್ಲಾ ಪಕ್ಷಗಳು ಸಂಘಟನೆಗಳು ಮತ್ತು ಜನಸಾಮಾನ್ಯರು ಸ್ವಾಗತಿಸಿದ್ದಾರೆ. ಸಹಜವಾಗಿ ಹಿಂದುತ್ವ ಪರ ಸಂಘಟನೆಗಳಿಗೆ ಖುಷಿಯಾಗಿರೋದು ಸಹಜ. ಅದರೆ ಮುಸ್ಲಿಂ ಜನತೆ ಪ್ರಾಜ್ಞರಾಗಿ, ಸ್ಥಿತಪ್ರಜ್ಞರಾಗಿ ನಡೆದುಕೊಳ್ಳುತ್ತಿದೆ ಎಂದರೆ ಆಶ್ಚರ್ಯವಾಗುತ್ತಿದೆ.
ಇದು ಒಂದು ವಿಚಿತ್ರ ಬೆಳವಣಿಗೆ ಮತ್ತು ತುಂಬಾ ಮುಖ್ಯವಾದ ಬೆಳವಣಿಗೆ.
ಹಿಂದೆಲ್ಲಾ ಧರ್ಮದ ವಿಷಯದಲ್ಲಿ ಭಾವನಾತ್ಮಕವಾಗಿ ರಿಯಾಕ್ಟ್ ಆಗುತ್ತಿದ್ದ ಮುಸ್ಲಿಂ ಸಮುದಾಯ ಆ ಭಾವನಾತ್ಮಕತೆಯಿಂದ ಹೊರಬಂದು ತುಂಬಾ ಜವಾಬ್ದಾರಿಯಿಂದ ಆಕ್ಟ್ ಮಾಡುತ್ತಿದ್ದಾರೆ. ಭಾರತದ ಮುಸ್ಲಿಂರನ್ನು ಇನ್ನೂ ಯಾರು ಕೂಡ ಮತ ಬ್ಯಾಂಕ್ ಆಗಿ, ರಾಜಕೀಯವಾಗಿ, ಧಾರ್ಮಿಕ ವಾಗಿ
exploit ಮಾಡುವ ಸನ್ನಿವೇಷ ಇನ್ನು ಭಾರತದಿಂದ ಮಾಯವಾಗಲಿದೆ.
ಇದೇ ತೀರ್ಪು ಹದಿನೈದಿಪ್ಪತ್ತು ವರ್ಷ ಹಿಂದೆ ತೀರ್ಪು ಬಂದಿದ್ದರೆ ಇಷ್ಟು
balanced ಆಗಿ ಮುಸ್ಲಿಮರು ರಿಯಾಕ್ಟ್ ಮಾಡುತ್ತಿರಲಿಲ್ಲ. ಅದಂತೂ ಪಕ್ಕ. ಸ್ವತಃ ಪ್ರತಿವಾದಿಯಾಗಿರುವ ಸುನ್ನಿ ವಕ್ಫ್ ಬೋರ್ಡ್ ಕೂಡ ಈಗಿನ ತೀರ್ಪಿನ ಮೇಲೆ ಮೇಲ್ಮನವಿ ಹೋಗದಿರಲು ನಿರ್ಧರಿಸಿದ್ದಾರೆ.
ಇದರ ಒಟ್ಟಾರೆ ನಡೆಯನ್ನು ಗಮನಿಸಿದರೆ ಭಾರತದಲ್ಲಿ, ಧರ್ಮವು ನಿಧಾನವಾಗಿ ಮತ್ತು ಸ್ಪಷ್ಟವಾಗಿ ಹಿನ್ನೆಲೆಗೆ ಸರಿಯುತ್ತಿದೆ. ಧರ್ಮ ಜಾತಿಯೇತರ ವಿಚಾರಗಳು ಮುಂದಿನ ದಿನಗಳಲ್ಲಿ ಭಾರತದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಖಚಿತವಾಗಿ ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿ , ರಾಷ್ಟ್ರೀಯತೆ, ಪರಿಸರ ರಕ್ಷಣೆ, ನಿರುದ್ಯೋಗ, ಆರೋಗ್ಯ, ಭ್ರಷ್ಟಾಚಾರ ರಹಿತ ಸಮಾಜ, ಸ್ವಚ್ಛ ಭಾರತ, ಕಾಳಧನ ಮುಂತಾದ ಸಂಗತಿಗಳಿಗೇ ಇನ್ನು ಭಾರತದಲ್ಲಿ ಸ್ಥಾನ !