ಶಬರಿಮಲೆಗೆ ಸ್ತ್ರೀಯರ ಪ್ರವೇಶದ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು: ಸುಪ್ರೀಂ
ಇವತ್ತು ಒಟ್ಟು ಎರಡು ತೀರ್ಪುಗಳು ಸುಪ್ರೀಂ ಕೋರ್ಟಿನಿಂದ ಬಂದಿದೆ. ಮೊದಲನೆಯದು ಶಬರಿಮಲೆಗೆ ಸ್ತ್ರೀಯರ ಪ್ರವೇಶ ಬೇಕೇ ಬೇಡವೇ ಎಂದು. ಕಳೆದ 2018 ರ ಸೆಪ್ಟೆಂಬರ್ ನಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟು ಮಹಿಳೆಯರಿಗೆ ಶಬರಿಮಲೆಯ ದೇವಳದ ಬಾಗಿಲನ್ನು ತೆರೆದುಬಿಟ್ಟಿತ್ತು. ಈವರೆಗೆ ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ 2018 ರ ತೀರ್ಪಿನ ವಿರುದ್ಧ ಬರೋಬ್ಬರಿ 60 ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಶಬರಿಮಲೆ ಪ್ರಕರಣದಲ್ಲಿ ಗುರುವಾರ ಬಹುಮತದ ತೀರ್ಪನ್ನು ಓದಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಎಲ್ಲಾ ವಯಸ್ಸಿನ ಮಹಿಳೆಯರನ್ನು ಶಬರಿಮಲೆಗೆ ಅನುಮತಿಸಬೇಕೆ ಎಂಬ ಪ್ರಶ್ನೆ ದೊಡ್ಡ ಚರ್ಚೆಯ ಭಾಗವಾಗಿದೆ ಎಂದು ಹೇಳಿದರು. ಆದುದರಿಂದ, ಇವತ್ತಿನ ಕೋರ್ಟಿನ ತೀರ್ಪಿನ ಪ್ರಕಾರ, ಹಳೆಯ ಸುಪ್ರೀಂ ಕೋರ್ಟಿನ ತೀರ್ಪು ಜಾರಿಯಲ್ಲಿರುತ್ತದೆ ಮತ್ತು ಸುಪ್ರೀಂ ಕೋರ್ಟು ಈ ಕೇಸ್ ಅನ್ನು 7 ಜಡ್ಜ್ ಗಳಿರುವ ಸಾವಿಧಾನಿಕ ಪೀಠಕ್ಕೆ ರೆಫರ್ ಮಾಡಿದೆ.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸುವ 10 ರಿಂದ 50 ರ ಪ್ರಾಯದ ನಡುವಿನ ಮಹಿಳೆಯರ ಮೇಲಿನ ನಿಷೇಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಪರಿಶೀಲಿಸಬೇಕೇ ಬೇಡವೇ ಎಂಬ ನಿರ್ಧಾರವನ್ನು ಏಳು ನ್ಯಾಯಾಧೀಶರಿರುವ ದೊಡ್ಡ ಪೀಠವು ತೆಗೆದುಕೊಳ್ಳಲಿದೆ. ನಿನ್ನೆ ಗುರುವಾರ ಬಹುಮತದ ತೀರ್ಪನ್ನು ಓದಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಶಬರಿಮಲೆ ದೇವಾಲಯಕ್ಕೆ ಮುಟ್ಟಾಗುವ ವಯಸ್ಸಿನ ಅಂದರೆ 10-50 ವಯಸ್ಸಿನ ಸ್ತ್ರೀಯರ ಪ್ರವೇಶ ಮಾಡಬೇಕೆ ಬೇಡವೇ ಎಂಬುದು ದೊಡ್ಡ ಮಟ್ಟದ ಚರ್ಚೆಯ ವಸ್ತು. ಈ ಚರ್ಚೆಯನ್ನು, ಇದೇ ರೀತಿಯ ಸಂಪ್ರದಾಯವಿರುವ ಮುಸ್ಲಿಂ ಮತ್ತು ಪಾರ್ಸಿ ಮಹಿಳೆಯರಿಗೆ ಧಾರ್ಮಿಕ ಆಚರಣೆಗೆ ಮತ್ತು ಪ್ರವೇಶಿಸಲು ಅವಕಾಶ ನೀಡುವುದು ಮತ್ತು ದಾವೂಡಿ ಬೊಹ್ರಾ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಸ್ತ್ರೀ ಜನನಾಂಗವನ್ನು ವಿಕಲಗೊಳಿಸುವ ಪರಿಪಾಠದ ಬಗ್ಗೆಯೂ ದೊಡ್ಡ ಚರ್ಚೆ ಅನಿವಾರ್ಯವಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಶಬರಿಮಲೆಗೆ ಸೀಮಿತವಾಗಿಲ್ಲ ಮತ್ತು ಇತರ ಧರ್ಮಗಳಲ್ಲೂ ಚಾಲ್ತಿಯಲ್ಲಿದೆ ಎಂದು ನ್ಯಾಯಾಲಯ ತಿಳಿಸಿದೆ. “ಅರ್ಜಿದಾರರ ಪ್ರಯತ್ನವೆಂದರೆ ಧರ್ಮ ಮತ್ತು ನಂಬಿಕೆಯ ಕುರಿತ ಚರ್ಚೆಯನ್ನು ಪುನರುಜ್ಜೀವನಗೊಳಿಸುವುದು” ಎಂದು ಮುಖ್ಯ ನ್ಯಾಯಮೂರ್ತಿ ಗೊಗೊಯ್ ಈ ಸಂದರ್ಭದಲ್ಲಿ ಹೇಳಿದರು. ಎಲ್ಲಾ ಪಕ್ಷಗಳಿಗೆ ಹೊಸ ಅವಕಾಶಗಳನ್ನು( ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳಲು) ನೀಡಲಾಗುವುದು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ನಾಂದಿ ಹಾಡಿತ್ತು. ಆ ನಂತರ 60 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈಗ ನ್ಯಾಯಾಲಯವು ತನ್ನ ಹಿಂದಿನ ಆದೇಶವನ್ನು ತಡೆಹಿಡಿಯದಿದ್ದರೂ, ವಿರೋಧ ಪಕ್ಷಗಳು “ಹಳೆಯ ಆದೇಶಕ್ಕೆ ಸ್ಟೇ ತರಲಾಗಿದೆ ” ಎಂದು ಹೇಳುತ್ತಿದ್ದಾರೆ. ಮತ್ತು ಕೇರಳ ಸರ್ಕಾರ ಅದನ್ನು( ಸ್ಟೇ ) ಅನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
“ಶಬರಿಮಲೆ ಒಂದು ಪ್ರಮುಖ ದೇವಾಲಯ. ಕೇರಳ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತೀರ್ಪಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಯುವತಿಯರನ್ನು ಶಬರಿಮಲೆ ದೇವಸ್ಥಾನಕ್ಕೆ ಹೋಗದಂತೆ ರಾಜ್ಯ ಸರ್ಕಾರ ಅದನ್ನು ತಡೆಯಬೇಕು ” ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿಥಾಲಾ ಹೇಳಿದರು. ಕೇರಳ ಸರ್ಕಾರ ಕಾನೂನು ಸಲಹೆಗಳನ್ನು ಪಡೆದು ಅದನ್ನು ಪಾಲಿಸಲಿದೆ ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಕೆ.ಕೆ.ಶೈಲಜಾ ಹೇಳಿದರು.
ಕಳೆದ ವರ್ಷ 4:1 ರ ಬಹುಮತದ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್, ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು 10 ರಿಂದ 50 ರ ನಡುವಿನ ಅಂದರೆ ಮುಟ್ಟಿನ ವಯಸ್ಸಿನವರು ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸುವುದನ್ನು ‘ಧಾರ್ಮಿಕ ಕೃತ್ಯ ‘ ಎಂದು ಕರೆದರೂ, ಅದು “ಕಾನೂನುಬಾಹಿರ ಮತ್ತು ಅಸಂವಿಧಾನಿಕ” ಎಂದು ಕೋರ್ಟು ಹೇಳಿತ್ತು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ನಂಬಿಕೆಯನ್ನು ಅಭ್ಯಾಸ ಮಾಡುವ ಸಾಂವಿಧಾನಿಕ ಹಕ್ಕು ಪ್ರತಿಯೊಬ್ಬರಿಗೂ ಇದೆ ( ಗಂಡು ಅಥವಾ ಹೆಣ್ಣು ) ಎಂದು ಕೋರ್ಟ್ ಒತ್ತಿ ಹೇಳಿದೆ.
ಕಳೆದ ಸಲ ತೀರ್ಪಿನ ನಂತರ ಸಾಮಾನ್ಯ ಮಹಿಳೆಯರು ಯಾರೂ ಕೂಡ ದೇವಾಲಯ ಪ್ರವೇಶಿಸಲು ಉತ್ಸುಕರಾಗಿರಲಿಲ್ಲ. ಆದ್ರೆ ಎಡಪಂತೀಯ ನಡವಳಿಕೆಯ ಮಹಿಳೆಯರಿಬ್ಬರು ಕಳೆದ ಸಲ ದೇವಳ ಪ್ರವೇಶಿದ್ದರು, ಪೋಲೀಸರ ಸರ್ಪಗಾವಲಿನ ಜೊತೆಗೆ. ಆದರೆ ಆ ಮಹಿಳೆಯರಿಗೆ ಅವರ ಸ್ವಂತ ಕುಟುಂಬದಿಂದಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬಾಕೆಯ ಮೇಲೆಯಂತೂ ಅವಳ ಅತ್ತೆ ಆಕ್ರಮಣ ಮಾಡಿ ಆಕೆಯನ್ನು ಮನೆಯಿಂದ ಹೊರಹಾಕಿ, ಅವಳು ಆಸ್ಪತ್ರೆ ಸೇರುವಂತೆ ಆಗಿತ್ತು.
ಮಹಿಳೆಯರ ಪ್ರವೇಶದ ಬಗ್ಗೆ ಸಂಘರ್ಷದ ನಿಲುವುಗಳನ್ನು ತೆಗೆದುಕೊಂಡಿರುವ ಕೇರಳದ ಎಡ-ನೇತೃತ್ವದ ಸರ್ಕಾರ ಹಿಂದಿನ ತೀರ್ಪನ್ನು ಬೆಂಬಲಿಸಿದ್ದರೂ, ಒಟ್ಟಾರೆ ಗಂಡಸರು ಮತ್ತು ಸ್ತ್ರೀಯರೂ ಇಬ್ಬರೂ ದೇವಳ ಪ್ರವೇಶವನ್ನು ವಿರೋದಿಸುತ್ತಾ ಬಂದಿದ್ದಾರೆ.
ಕೆಲವು ಪರಿಶೀಲನಾ ಅರ್ಜಿಗಳು “ಒಂದು ನಿರ್ದಿಷ್ಟ ದೇವತೆಯನ್ನು ನಿರ್ದಿಷ್ಟ ರೀತಿಯಲ್ಲಿ ಪೂಜಿಸುವ ಧಾರ್ಮಿಕ ಸಮುದಾಯದ ಆಂತರಿಕ ವ್ಯವಹಾರದಲ್ಲಿ” ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದವು. ಈಗ ಮತ್ತೆ ಫೆಬ್ರುವರಿ 2020 ರ ವರೆಗೆ ಅಂತಿಮ ತೀರ್ಪಿಗೆ ಕಾಯುವುದು ಅನಿವಾರ್ಯ.