ಪಂಡಿತಾರಾಧ್ಯ ಶ್ರೀಗಳ ನಿವೃತ್ತಿ ಇಂಗಿತ, ಬೇರೆಯವರಿಗಿಂತ ಭಿನ್ನವಾಗಿ ನಿಂತ ಶ್ರೀಗಳು
ಸಾಯುವವರೆಗೂ ಅಧಿಕಾರ, ಆಸ್ತಿ, ಪೀಠ ಅಂತ ಅಂಟಿಕೊಂಡು ಕೂರುವವರ ಮದ್ಯೆ ಶಾಖಾ ಮಠದ ತರಳಬಾಳು ಪಂಡಿತಾರಾಧ್ಯ ಸ್ವಾಮೀಜಿ, ಬೇರೆಯವರಿಗಿಂತ ಭಿನ್ನವಾಗಿ ನಿಂತಿದ್ದಾರೆ. ಅವರು ಪೀಠ ತ್ಯಾಗ ಮಾಡುವ ಮಾತಾಡಿದ್ದಾರೆ. ಸ್ವಯಂ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ.
”ಪೀಠಾಧಿಪತ್ಯವಹಿಸಿಕೊಂಡು ತುಂಬಾ ಕಾಲ ಆಯಿತು. ಈಗ 69 ವಯಸ್ಸು ನಡೀತಿದೆ. ಎಷ್ಟೋ ಸಲ ಪೀಠಾಧ್ಯಕ್ಷರಾಗಿದ್ದು ವಯೋ ಸಹಜವಾಗಿ ಮರಣ ಹೊಂದಿದಾಗ ಉತ್ತರಾಧಿಕಾರಿಯನ್ನು ಸರಿಯಾಗಿ ಪ್ಲಾನ್ ಮಾಡದ ಕಾರಣ, ವರ್ಷಗಟ್ಟಲೆ ಪೀಠಾಧ್ಯಕ್ಷರಿಲ್ಲದೆ ಮಠದ ಕೆಲಸಗಳು ನಿಂತುಬಿಡುತ್ತಿವೆ. ಹಿಂದೆ ನಮ್ಮಗುರುಗಳಾದ ಶಿವಕುಮಾರ ಸ್ವಾಮಿಗಳೂ ಕೂಡಾ, 60 ವರ್ಷಕ್ಕೆ ಪೀಠ ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕೆಂದು ಹೇಳಿದ್ದರು. ಮುಂಚಿತವಾಗಿ ಉತ್ತರಾಧಿಕಾರಿಗೆ ಸೂಕ್ತ ತರಬೇತಿ ನೀಡಿ ಪೀಠಾಧಿಕಾರಿಯನ್ನು ತಯಾರು ಮಾಡುವುದು ಅಗತ್ಯ.” ಹಾಗಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆ ಮೂಲಕ ಇತರ ಅಧಿಕಾರಕ್ಕೆ ಹಪಹಪಿಸಿ ಅಂಟಿ ಕೂರುವ ಸಂಘ ಸಂಸ್ಥೆಗಳ ಮುಖ್ಯಸ್ಥರಿಂದ ಭಿನ್ನವಾಗಿ, ಆದರ್ಶವಾಗಿ ಕಾಣುತ್ತಿದ್ದಾರೆ.