ಅವಳು ಬದುಕಿರೋದು ಇನ್ನೊಂದೇ ದಿನ| ಅಷ್ಟರೊಳಗೆ ಆಕೆಯದ್ದು ಮಿಲನ ಭರಿತ ಸಮೃದ್ಧ ಜೀವನ !!
ಮನುಷ್ಯ ದೀರ್ಘಾಯುಷ್ಯನಾಗಿ ಹೇಗೆ ಬದುಕಲಿ ಎಂದು ಯೋಚಿಸುತ್ತ ಕೂತಾಗ ನೆನಪಾಗಿದ್ದು ಈ ಜೀವಿ. ಸೊಳ್ಳೆಯ ಜಾತಿಗೆ ಸೇರಿದ ಒಂದು ಜಾತಿಯ ಸೊಳ್ಳೆಯಾದ ‘ಮೇಫ್ಲೈ’ ನ ಆಯಸ್ಸು ಕೇವಲ 24 ಗಂಟೆಗಳು. ಈ ಮೇಫ್ಲೈ ಸೊಳ್ಳೆಗಳಿಗೆ ‘ಒನ್ ಡೇ ಮಾಸ್ಕಿಟೊ’ ಎಂದೂ ಕರೆಯುತ್ತಾರೆ. ಅದರಲ್ಲೂ ಒಂದು ಜಾತಿಯ ಹೆಣ್ಣು ಸೊಳ್ಳೆಯ ಆಯುಸ್ಸು ಭೂಮಿಯ ಮೇಲೆ ಕೇವಲ 5 ನಿಮಿಷಗಳು !
ನಾವು ಒಂದು ಗ್ಲಾಸು ಕಾಫಿ ಕುಡಿದು ಲೋಟ ಕೆಳಗಿಡುವಷ್ಟರಲ್ಲಿ ಮೇಫ್ಲೈ ಬಿದ್ದು ಸತ್ತು ಹೋಗಿರುತ್ತದೆ ! ನಾವು ಕುಡಿಯುವ ಕಾಫಿಯ ಗ್ಲಾಸಿಗೆ ಬಿದ್ದು ಸತ್ತರೂ ಸತ್ತೀತು !
5 ನಿಮಿಷ ಬದುಕುವುದಕ್ಕೆ ಯಾಕೆ ರಿಸ್ಕ್ ತಗೋಬೇಕೆಂದು ಮೇಫ್ಲೈ ಸುಮ್ಮನೆ ಕೂರುವುದಿಲ್ಲ. ಬದುಕು ಸಾವಿನ ಬಗ್ಗೆ ಯೋಚಿಸುತ್ತಾ ವೇದಾಂತಿಯಾಗಿ ಕೂರಲು ಅದಕ್ಕೆ ಸಮಯವಿಲ್ಲ. ಇಷ್ಟರಲ್ಲಾಗಲೇ ಒಂದೆರಡು ನಿಮಿಷ ಅದರ ಬದುಕಿನ ಅಕೌಂಟ್ ನಿಂದ ಜಾರಿ ಹೋಗಿರಬಹುದು. ಇನ್ನುಳಿದ ಮೂರು ನಿಮಿಷಗಳಲ್ಲಿ ಏನು ಮಾಡಲಾಗುತ್ತದೆ. ‘ಗೋ ಟು ಹೆಲ್ ‘. ‘ ಸತ್ತೋಗ್ಲಿ ‘ ಮುಂತಾಗಿ ಬೈದು ಮನಸ್ಸನ್ನು ಕಹಿ ಮಾಡಿಕೊಂಡು ಸುಮ್ಮನಿದ್ದುಬಿಡಬಹುದು. ಅಥವಾ, ಬೇಸರಿಸಿಕೊಂಡು, ಇನ್ನೇನು ಸಾಯುತ್ತಿದ್ದೀನಲ್ವಾ ಎಂದು ದುಃಖ ಉಮ್ಮಳಿಸಿ ಬಂದು, ಆ ಸ್ಟ್ರೆಸ್ ನಿಂದಾಗಿ ಒಂದು ನಿಮಿಷ ಮುಂಚೆಯೇ ಮಟಾಷ್ ಆಗಿಬಿಡಬಹುದು.
ಆದರೆ ದೈವಪುತ್ರ ಮೇಫ್ಲೈ ಗೆ ಆ ಐದು ನಿಮಿಷವೇ ದೊಡ್ಡದು. ಕೈಗೆ ಸಿಕ್ಕ ಐದು ನಿಮಿಷವೇ ಸಾಕು. ಅದರಲ್ಲೇ ಒಂದು ಚಿಕ್ಕ ಯವ್ವನ. ಪುಟ್ಟದಾಗಿ ಒಂದು ಅಲಂಕಾರ. ಆತನನ್ನಾಕರ್ಷಿಸಲು ಒಂದು ಪ್ರಯತ್ನ. ಟೆಕ್ಸ್ಟಿಂಗು, ಚಾಟಿಂಗು, ಸೆಕ್ಸ್ಟಿಂಗು ಮತ್ತು ಮೀಟಿಂಗು ಎಲ್ಲವೂ ಸೂಪರ್ ಫಾಸ್ಟಾಗಿ ನಡೆದುಹೋಗಬೇಕು. ಮುಂದುವರಿದು ಒಂದು ಅಪ್ಪುಗೆ, ಒಂದು ಸುಧೀರ್ಘ ಚುಂಬನ ಮತ್ತು ಪ್ರೀತಿಯ ಕೊನೆಯಲ್ಲಿ ನಿರಂತರ ಮಿಲನೋತ್ಸವ. ಇವೆಲ್ಲ ಘಟಿಸುವಷ್ಟರಲ್ಲಿ ಕೆಲವು ನಿಮಿಷ ಕಳೆದು ಹೋಗಿರುತ್ತದೆ. ಆನಂತರ ಆತನ ಮೊಳಕೆ ಆಕೆಯ ಅಪರಿಚಿತ ನೆಲದಲ್ಲಿ ಹೊಂದಿಕೊಂಡು, ಮೊಳೆತು, ಮೂಡಿ, ಮೊಟ್ಟೆಯಾಗಿ, ಅವಳು ಸೂಕ್ತ ಮನೆ ಹುಡುಕಿ ಜತನದಿಂದ ಮೊಟ್ಟೆ ಮಲಗಿಸುತ್ತಾಳೆ. ಅಲ್ಲಿಗೆ ಒಂದು ನೆಮ್ಮದಿ ಮತ್ತು ಸಾರ್ಥಕ್ಯತೆ ಆ ಜೋಡಿಯಲ್ಲಿ. ದೇಹಸುಖ ಇಳಿಯುವ ಮುನ್ನವೇ ಅವರಿಗೆ ತನ್ನ ಕೂಸು ಕಾಣುವ ಹಂಬಲ.
ಆದರೆ ಬದುಕಿನ ಮೇಸ್ಟರು ಅದಕ್ಕೆಲ್ಲಿ ಅವಕಾಶ ಕೊಡುತ್ತಾನೆ? ಜೀವನದ ಆನ್ಸರ್ ಶೀಟನ್ನು ಸರಕ್ಕನೆ ಎಳೆದುಕೊಂಡು ಬಿಡುತ್ತಾರೆ. ನಮಗಿನ್ನೂ ಮತ್ತಷ್ಟು ಬರೆಯೋಣ, ಉತ್ತರ ಗೊತ್ತಿಲ್ಲದೇ ಹೋದರೂ ಒಂದಷ್ಟು ಹೊತ್ತು ಗೀಚಿ ಕಾಲ ತಳ್ಳಿ ಬಿಡೋಣವೆಂದಿರುತ್ತದೆ. ಆದರೆ ಕಾಲನೆಂಬ ಶಿಕ್ಷಕನು ಪೇಪರನ್ನೆಳೆದುಕೊಳ್ಳುವುದೂ, ಘಂಟೆ ಬಾರಿಸುವುದೂ ಏಕಕಾಲದಲ್ಲಿ ನಡೆದುಹೋಗುತ್ತದೆ. ಅಲ್ಲಿಗೆ ಮೇಫ್ಲೈ ಪಟಕ್ಕಂತ ಕೆಳಗೆ ಬಿದ್ದು ಸತ್ತು ಹೋಗುತ್ತದೆ ; ಬಿದ್ದ ಸದ್ದು ಕೂಡ ಯಾರಿಗೂ ಕೇಳಿಸದಂತೆ.
ಈ ಜೀವಿಗಳಿಗೆ ಹೋಲಿಸಿದರೆ ನಮ್ಮ ಜೀವನ ಅದೆಷ್ಟು ಸಮೃದ್ಧವಲ್ವಾ?
ಸುದರ್ಶನ್ ಬಿ. ಪ್ರವೀಣ್, ಬೆಳಾಲು