ಮಹಾಭಾರತ ಯುದ್ಧ ಘಟಿಸುವಷ್ಟರಲ್ಲಿ ಶ್ರೀಕೃಷ್ಣನಿಗೆ 89 ವರ್ಷ ವಯಸ್ಸು

ಮಹಾಭಾರತ ಅಂದ ಕೂಡಲೇ ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅದು ಕತೆಯು ನಮಗೆ ಕಟ್ಟಿಕೊಟ್ಟ ರೀತಿ ಮತ್ತು ನಮ್ಮ ರಾಜಾ ರವಿವರ್ಮ ಬೆರೆಸಿದ ವರ್ಣ ವೈಭವ. ಅದಲ್ಲದೆ ನಮ್ಮ ಸಿನಿಮಾಗಳು ಕೂಡಾ ನಮಗೆ ಕಾಲದಿಂದ ಕಾಲಕ್ಕೆ ಈ ಕಲ್ಪನೆಯನ್ನು ಬಲಪಡಿಸಿವೆ. ಅಂದಿನ ಎನ್ಟಿಆರ್ ನಿಂದ ಹಿಡಿದು ಇಂದಿನ ಕುರುಕ್ಷೇತ್ರದ ದರ್ಶನ್ ನ ವರೆಗೆ.

ಆದರೆ ಈ ದಿನ ನಿಮ್ಮ ಈವರೆಗಿನ ಕಲ್ಪನೆಗಳಿಗೆ ಭಂಗ ಬರಲಿದೆ. ಮಹಾಭಾರತದಲ್ಲಿ ನಾವು ಶ್ರೀಕೃಷ್ಣನನ್ನು, ಯುವ ಸ್ಪುರದ್ರೂಪಿ ಕಾಂತಿಪುರುಷನ ರೂಪದಲ್ಲಿ. ಆತನ ಕೈಯಲ್ಲೊಂದು ಕೊಳಲು, ತಲೆಯ ಮೇಲೇ ನವಿಲುಗರಿ ! ಶ್ರೀಕೃಷ್ಣನಷ್ಟೇ ಅಲ್ಲ, ಉಳಿದ ಎಲ್ಲ ಪಾಂಡವರೂ, ಕರ್ಣ ದುರ್ಯೋಧನರೂ ನಳನಳಿಸುವ ತುಂಬಿದ ತೋಳಿನ ಆರೋಗ್ಯವಂತರು, ಎಳಸು ಮಕ್ಕಳ ಕಣ್ಣಿನ  ಕಾಂತಿಯುಳ್ಳವರು, ತೊನೆಯುವ ನಯವಾದ ತಲೆಕೂದಲುಳ್ಳವರು. ಯುದ್ಧದ ಸಮಯದಲ್ಲಿ ನಾವು ಅವರನ್ನು ನಾವು ಕಲ್ಪಿಸಿಕೊಂಡದ್ದು ಇಪ್ಪತೈದರೊಳಗಿನ ಯುವಕರಾಗಿ.

ಆದರೆ, ಮಹಾಭಾರತ ಯುದ್ಧ ಘಟಿಸುವಷ್ಟರಲ್ಲಿ ಶ್ರೀಕೃಷ್ಣನಿಗೆ 89 ವರ್ಷ ವಯಸ್ಸಾಗಿತ್ತು ! ಮೌಸಲಪರ್ವದ ಪ್ರಕಾರ ಮಹಾಭಾರತ ಯುದ್ಧ ನಡೆದು 36 ವರ್ಷದ ನಂತರ ಶ್ರೀಕೃಷ್ಣ ಮರಣಿಸುತ್ತಾನೆ. ಅಂದರೆ ಶ್ರೀಕೃಷ್ಣನ ಜೀವಿತಾವಧಿ 125 ವರ್ಷಗಳು. ಅಷ್ಟೇ ಅಲ್ಲ, ಮಹಾಭಾರತದ ಇತರ ಪಾತ್ರದಾರಿಗಳಾದ ಯುಧಿಷ್ಠಿರ, ಭೀಮ, ನಕುಲ ಮತ್ತು ಸಹದೇವ-ಪ್ರತಿಯೊಬ್ಬರಿಗೂ ಮಹಾಭಾರತ ಯುದ್ಧದ ಸಂದರ್ಭದಲ್ಲಿ 80 ವರ್ಷದ ಮೇಲೆ ವಯಸ್ಸಾಗಿತ್ತು. ವಿವರವಾಗಿ ಹೇಳಬೇಕೆಂದರೆ, ಮಹಾಭಾರತ ಯುದ್ಧದ ಸಂಧರ್ಭದಲ್ಲಿ ಯುಧಿಷ್ಠಿರನಿಗೆ 91 ವರ್ಷ ವಯಸ್ಸು, ಭೀಮನಿಗೆ 90 ವರ್ಷ, ಅರ್ಜುನ ಮತ್ತು ಕೃಷ್ಣನಿಗೆ 89 ವರ್ಷ, ನಕುಲ ಮತ್ತು ಸಹದೇವನಿಗೆ 88 ವರ್ಷ ವಯಸ್ಸಾಗಿತ್ತು. ಎಲ್ಲರಿಗೂ ಎಲ್ಲರಿಗಿಂತ ಹಿರಿಯವನು ಕರ್ಣ. ಆತನು ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನಿಗಿಂತ 16 ವರ್ಷ ದೊಡ್ಡವನು. ಅಂದರೆ ಮಹಾಭಾರತ ಯುದ್ಧ ಕಾಲಕ್ಕಾಗಲೇ ಕರ್ಣನಿಗೆ ಬರೋಬ್ಬರಿ 107 ವರ್ಷ ವಯಸ್ಸು!

ಅಷ್ಟೊಂದು ಇಳಿ (?) ವಯಸ್ಸಿನಲ್ಲಿ ಅವರು ಹೇಗೆ ಯುದ್ಧ ಮಾಡಿದರು? ಅವರು ಯಾವೆಲ್ಲ ರೀತಿ ಫಿಸಿಕಲ್ ಸ್ಟ್ಯಾಮಿನ ಇಟ್ಟುಕೊಂಡಿದ್ದರು ಎಂಬುದು ಇವತ್ತಿನ ಕೌತುಗ !
ಮಹಾಭಾರತ ನಡೆದದ್ದು ಕ್ರಿಸ್ತ ಪೂರ್ವ 3138 ರ ಸುಮಾರಿಗೆ. ಸರಿಸುಮಾರು ಇವತ್ತಿಗಿಂತ 5150 ವರ್ಷಗಳ ಹಿಂದೆ. ನಮ್ಮ ಅಜ್ಜಂದಿರರೇ, ಎರಡು ತಲೆಮಾರಿನ ಹಿಂದೆ ಇದ್ದವರು 80-90 ವರ್ಷಗಳು ಬದುಕಿರುತ್ತಿದ್ದರು, ನಾರ್ಮಲ್ ಜೀವನ ಸಾಗಿಸುತ್ತಿದ್ದರು ಅಂದರೆ ಅದರಲ್ಲಿ ಅಂತಹ ಆಶ್ಚರ್ಯವಿಲ್ಲ. ಅದು ಅವರ ಅಂದಿನ ಆಹಾರ ವಿಧಾನ ಮತ್ತು ಶರೀರವನ್ನು ದುಡಿಮೆಯ ಮೂಲಕ ದಂಡಿಸಿದ್ದರ ಫಲ. ಬರಿಯ 30 ರಿಂದ 40 ವರ್ಷಗಳ ಹಿಂದಿನ ತಲೆಮಾರೇ 80 ವರ್ಷ ಬದುಕಿದ್ದಾರೆಂದಾದರೆ, 5000 ವರ್ಷಗಳಷ್ಟು ಹಿಂದಿನ ಮನುಷ್ಯರು ಹೇಗಿದ್ದಿರಬೇಡ?

ಆ ದಿನದ ಅವರ ಪ್ರಕೃತಿಯ ಜತೆಗಿನ ನಿರಂತರ ಒಡನಾಟ, ಸಾಕಷ್ಟು ಕಚ್ಚಾ ಮತ್ತು ಫ್ರೆಶ್ ಆಹಾರದಿಂದಾಗಿ, ಅವರುಗಳು ಅಷ್ಟೆಲ್ಲ ವರ್ಷ ಬದುಕಿದ್ದರೆನ್ನುವುದನ್ನು ಸಹಜವಾಗಿ ಕಾಣುತ್ತದೆ. ಬದುಕುವುದೇನೋ ಸರಿ, ಅಷ್ಟು ಇಳಿವಯಸ್ಸಿನಲ್ಲಿ ಯುದ್ಧ ಮಾಡಲು ದೇಹ ಹೇಗೆ ಸಹಕರಿಸುತ್ತದೆ ಎಂಬುದು ಇನ್ನೊಂದು ಪ್ರಶ್ನೆ. ಆಗಿನ ಕಾಲದಲ್ಲಿ 125 ರಿಂದ 150 ವರ್ಷ ಬದುಕಿರುತ್ತಿದ್ದರು ಎಂದೇ ಒಪ್ಪಿಕೊಳ್ಳೋಣ. ನೆನಪಿಡಿ, ಮಹಾಭಾರತದ ಸಮಯದಲ್ಲಿ ಭೀಷ್ಮನು ವಯೋವೃದ್ಧನಾಗಿದ್ದ. ಆಗ ಆತನ ವಯಸ್ಸು 141 ವರ್ಷಗಳಾಗಿತ್ತು ! ನಮ್ಮ ಈ ದಿನದ ಕಾಲಮಾನದಲ್ಲಿ 70 ವರ್ಷಕ್ಕೆ ವೃದ್ಧಾಪ್ಯ ಅಪ್ಪಿಕೊಂಡು ಏನೂ ಕೂಡಾ ಮಾಡಲಾಗದ ಸ್ಥಿತಿಯಲ್ಲಿರುತ್ತೇವೆ. ನಮ್ಮ 45 ವರ್ಷದ ಪ್ರಾಯದವರೆಗೆ ನಾವು ಸಾಕಷ್ಟು ದೈಹಿಕ ಚಟುವಟಿಕೆಯಿಂದ ಇರಬಹುದು. ಅಂದರೆ, 45/70= 64%. ತನ್ನ ಪ್ರಾಯದ 64% ವಯಸ್ಸಿನವರೆಗೆ ನಾವು ದೈಹಿಕವಾಗಿ ಚಟುವಟಿಕೆಯಿ೦ದಿರುತ್ತೇವಾದ್ದರಿಂದ, ಆ ಕಾಲದ 150 ವರ್ಷ ಜೀವಿತದ ಬದುಕಲ್ಲಿ 96 ವರ್ಷದವರೆಗೆ ಅವರೆಲ್ಲ ಫಿಟ್ನೆಸ್ ಇಟ್ಟುಕೊಂಡಿದ್ದಿರಬೇಕು. ( 150*64%= 96 ವರ್ಷಗಳು). ಸಾಧ್ಯತೆಗಳಿವೆ ; ಆ ದಿನಮಾನಗಳಲ್ಲಿ ಮನುಷ್ಯರು 150 ವರ್ಷಗಳು ಬದುಕುತ್ತಿದ್ದಾರೆಂದಾದರೆ ! (ಆ ಕಾಲದಲ್ಲಿ 150 ವರ್ಷ ಬದುಕಿರುತ್ತಿದ್ದರೆಂದು ಭೀಷ್ಮ ಮತ್ತು ಶ್ರೀಕೃಷ್ಣನ ವಯಸ್ಸಿನ ಆಧಾರದ ಮೇಲೆ ಹೇಳಬಹುದು. ಭೀಷ್ಮ ಮತ್ತು ಶ್ರೀಕೃಷ್ಣ ಇಬ್ಬರೂ ಸಹಜ ಮರಣವನ್ನಪ್ಪಲಿಲ್ಲ. ಭೀಷ್ಮನು ಯುದ್ಧದಲ್ಲೂ, ಶ್ರೀಕೃಷ್ಣನು ಬೇಡನೊಬ್ಬನ ಬಾಣದಿಂದಲೂ ಸಾವನ್ನಪ್ಪಿದರು.) ನಮ್ಮ ಈ ದಿನದ ಲೆಕ್ಕದಲ್ಲಿ 45 ವರ್ಷಗಳು, ಆ ದಿನದ ಲೆಕ್ಕದಲ್ಲಿ 96 ವರ್ಷಗಳಾಗುತ್ತವೆ. ಈ ವಯಸ್ಸಿನಲ್ಲಿ ಯುದ್ಧ ಮಾಡುವುದು ಸಾಧ್ಯ.

 

Leave A Reply

Your email address will not be published.