ಸ್ಯಾಕ್ಸೋಫೋನ್ ಮಾ೦ತ್ರಿಕ ಕದ್ರಿ ಗೋಪಾಲನಾಥ್ ವಿಧಿ ವಶ

ಸಾಕ್ಸೋ ಫೋನ್ ನ ಗಂಟಲಲ್ಲಿ ಉಸಿರು ಬಂಧಿಯಾಗಿ ಹೋಯಿತು.ಹಿರಿಯ ಸ್ಯಾಕ್ಸೋಫೋನ್ ವಾದಕ, ಸ್ಯಾಕ್ಸೋಫೋನ್ (Saxophone) ನ್ನು ಪ್ರಪಂಚದೆತ್ತರಕ್ಕೆ ಕೊಂಡೊಯ್ದ ಮಾಂತ್ರಿಕ ಕದ್ರಿ ಗೋಪಾಲನಾಥ್ ಇನ್ನಿಲ್ಲ.

 ಅವರು ಪದ್ಮಶ್ರೀ ಪಡೆದವರು, ಮಂಗಳೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದವರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವಾರ್ಡ್ ಪಡೆದವರು -ಇವೆಲ್ಲದವುಗಳಿಗಿಂತ ಹೆಚ್ಚಿನದ್ದು, ಮಹತ್ವದ್ದು ಮತ್ತು ಅವರು ನುಡಿಸುತ್ತಿದ್ದ ಸ್ವರ ಮಾಧುರ್ಯ ಮತ್ತದು ನಮಗೆ ನೀಡುತಿದ್ದ ಆನಂದ. ನಿಶ್ಯಬ್ದತೆಯಲ್ಲಿ ಕೂತು ಆ ವಾದನವನ್ನು ಕೇಳುವುದೇ ಚೆಂದ. ಹೀಗೆ ಒಂದು ಸಲ ಮನಸ್ಸು ಮುರಿದುಕೊಂಡು ಯಾವುದೊ ಒಂದು ಸಮಾರಂಭದಲ್ಲಿ ಕೂತಿದ್ದಾಗ ಕದ್ರಿ ಗೋಪಾಲನಾಥ್ ತಮ್ಮ ಕೈಯಲ್ಲಿರುವ ಉದ್ದನೆಯ ವಾದ್ಯವೊಂದಕ್ಕೆ ಉಸಿರು ಊದಿದರು ನೋಡಿ: ಮನಸ್ಸು ಕಳೆದುಹೋಗುವಂತೆ ಸಾಕ್ಸೋ ಫೋನ್ ಗೆ ಜೀವ ತುಂಬಬಲ್ಲ ಶಕ್ತಿ ಅವರಿಗಿತ್ತು.

 ಇವತ್ತಿಗೂ ನಮ್ಮ ಮನೆಯ ಯಾವುದೇ ಶುಭಸಮಾರಂಭಗಳಲ್ಲಿ ಅವರ ಸ್ಯಾಕ್ಸೋಫೋನ್ ನ ನಿನಾದ ನಮಗೆ ಅರಿವೆಯೇ ಇಲ್ಲದಂತೆ ಡಿವಿಡಿಗಳ ಮೂಲಕ ಅನುರಣನಗೊಂಡು ನಮ್ಮನ್ನೊಂದು ದೈವಿಕ ಮೂಡ್ ಗೆ ಒಳಪಡಿಸುತ್ತಿವೆ.

 ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜೀಪ ಮೂಡದಲ್ಲಿ 1949 ರಲ್ಲಿ,ನಾಗಸ್ವರ ವಾದಕ ತನಿಯಪ್ಪ ದಂಪತಿಗಳಿಗೆ ಜನಿಸಿದರು. ಹುಟ್ಟಿದ್ದು ಮಂಗಳೂರೇ ಆದರೂ ಮುಂದೆ ಸ್ಯಾಕ್ಸೋಫೋನ್ ನಲ್ಲಿ ಟಿ ವಿ ಗೋಪಾಲಕೃಷ್ಣನ್ ಅವರಲ್ಲಿ ತನ್ನ ಗುರುವನ್ನು ಮತ್ತು ಗೈಡ್ ಅನ್ನು ಕಂಡುಕೊಂಡು ಚೆನ್ನೈ ಅನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. ಇದಕ್ಕೂ ಮೊದಲು ತಂದೆಯಿಂದ ನಾಗಸ್ವರವನ್ನೂ ಮತ್ತು ಆ ನಂತರ ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್ ಅನ್ನು ಕರಗತ ಮಾಡಿಕೊಂಡು ಅದಕ್ಕೆ ಕರ್ನಾಟಿಕ್ ಸಂಗೀತದ ಭಾವ ಸೇರಿಸಿ ಹಾಡುತ್ತಿದ್ದರು.ಆದವರಿಗೆ ದೇಶವಿದೇಶಗಳಲ್ಲಿ ಬೇಡಿಕೆ ಬರುವಂತೆ ಮಾಡಿತು.

 ಬಹಳಷ್ಟು ಶಿಸ್ತಿನಿಂದ, ರಾಜಕಳೆಯಿಂದ ಬದುಕಿದವರು ಕದ್ರಿಯವರು.ಅವರು ತಾನು ಪರಿಶ್ರಮಪಟ್ಟು ಪಡೆದುಕೊಂಡ ಈಗಿನ ಅವರ ಸ್ಥಿತಿಗೆ ಹೆಮ್ಮೆಪಡುತ್ತಿದ್ದರು. ಒಂದು ಅಹಂ ಅವರಲ್ಲಿ. ಆದರೆ ಯಾವತ್ತೂ ಅಹಂಕಾರ ಪಟ್ಟವರಲ್ಲ. ಕಿರಿಯ ಸಹಕಲಾವಿದರ ಬಗ್ಗೆ ಅವರಿಗೆ ಪ್ರೀತಿಯಿತ್ತು.


 ಮೂಲತಃ ವಿದೇಶಿ ವಾದ್ಯವಾದ ಸಾಕ್ಸೋ ಫೋನ್ ಗೆ ಸ್ವದೇಶಿ ಕಾರ್ನಾಟಿಕ್ ಸಂಗೀತ ಮಿಳಿತ ಮಾಡಿ ಅದಕ್ಕೊಂದು ಹೊಸ ಸೊಬಗು ತಂದವರು ಕದ್ರಿ ಗೋಪಾಲನಾಥ್. ಸಾಕ್ಸೋ ಫೋನ್ ಗೆ ಮತ್ತು ತಾನು ವಾಸವಾಗಿರುವುವ ‘ಕದ್ರಿ’ ಗೆ ಅನ್ವರ್ಥನಾಮದಂತೆ ಇದ್ದ ಕದ್ರಿಯವರ ಸಾವು ಮೂವರು ಮಕ್ಕಳನ್ನು,ಪತ್ನಿಯನ್ನು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ.ಅವರು ನುಡಿಸಿದ ಸಂಗೀತದ ಮೂಲಕವೇ ಅದು ಎಲ್ಲರನ್ನ ಸಂತೈಸಲಿ.

ಸುದರ್ಶನ್ ಬಿ. ಪ್ರವೀಣ್

Leave A Reply

Your email address will not be published.