Home ದಕ್ಷಿಣ ಕನ್ನಡ ಒಡಿಯೂರು ರಥೋತ್ಸವ-ತುಳುನಾಡು ಜಾತ್ರೆ! ತುಳುವರು ಮಾತೃಭಾಷೆ ಮರೆಯದಿರಿ: ಒಡಿಯೂರು ಶ್ರೀ

ಒಡಿಯೂರು ರಥೋತ್ಸವ-ತುಳುನಾಡು ಜಾತ್ರೆ! ತುಳುವರು ಮಾತೃಭಾಷೆ ಮರೆಯದಿರಿ: ಒಡಿಯೂರು ಶ್ರೀ

Hindu neighbor gifts plot of land

Hindu neighbour gifts land to Muslim journalist

Vitla: ತುಳು ಭಾಷೆಗೆ ಮಾನ್ಯತೆ ಸಿಗಲು ವಿವಿಧ ಪ್ರದೇಶಗಳಲ್ಲಿ ಹಂಚಿ ಹೋದ ತುಳುವರು ಸೇರಿ ಒಗ್ಗಟ್ಟಾಗಿ ಹೋರಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.

 

ಒಡಿಯೂರು ರಥೋತ್ಸವ ತುಳು ನಾಡ ಜಾತ್ರೆ ಪ್ರಯುಕ್ತ ಫೆ. 6ರಂದು ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ಇಂದು ತುಳುವರು ಬೇರೆ ಬೇರೆ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಎಲ್ಲರೂ ಸೇರಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ಇಂಗ್ಲಿಷ್ ಸಹಿತ ಎಲ್ಲ ಭಾಷೆಗಳ ಮೇಲೆ ಗೌರವ ಇರಲಿ. ಆದರೆ ತುಳುವರು ತುಳು ಭಾಷೆಯನ್ನು ಮರೆಯಬಾರದು, ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುವರು ಎಂದರು ಸ್ವಾಮೀಜಿ.

 

ನಂತರ ಲೇಖಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ತುಳುವಿಗೆ ಮಾನ್ಯತೆ ಸಿಕ್ಕಿಲ್ಲ. ಯುವಜನರು ಕೃಷಿ ತ್ಯಜಿಸಿ ಪೇಟೆಗೆ ಮತ್ತು ವಿದೇಶಕ್ಕೆ ತೆರಳುತ್ತಿರುವುದು ಬೇಸರದ ಸಂಗತಿ ಎಂದರು.

 

ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುನಾಡ ರಕ್ಷಣ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಡುಪಿ ಎಂ.ಜಿ.ಎಂ.ಕಾಲೇಜಿನ ಪ್ರಾದೇಶಿಕ ಸಂಶೋಧನೆ ಕೇಂದ್ರದ ಸಂಶೋಧಕ ಡಾ. ಎಸ್. ಆರ್. ಅರುಣ್ ಕುಮಾರ್, “ತುಳುನಾಡ್ಡ ಸಂತ ಪರಂಪರೆ’, ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಅವರು “ತುಳುನಾಡ್ಡ ಜಾನಪದ ಪರಂಪರೆ’, ಗುಂಡ್ಯಡ್ಕ ಮಲ್ಲಿಕಾ ಜೆ. ರೈ ಅವರು “ತುಳುನಾಡ ಸಾಹಿತ್ಯ ಪರಂಪರೆ’ ಮುಂತಾದ ವಿಷಯಗಳಲ್ಲಿ ಮಾತನಾಡಿದರು.

 

ಸ್ವಾಮೀಜಿ ತುಳು ಲಿಪಿಯಲ್ಲಿ ಬರೆದ ಶ್ರೀಮದ್ಭಗವದ್ಗೀತೆ ಮತ್ತು ಡಾ. ವಸಂತ ಕುಮಾರ್ ಪೆರ್ಲರ “ಮಾಯಿಪ್ಪಾಡಿ ವೀರ ಪುಳ್ಳೂರ ಬಾಚೆ’ ತುಳು ಕೃತಿಗಳು ಬಿಡುಗಡೆಗೊಂಡವು.

 

ಪ್ರಶಸ್ತಿ ಪ್ರದಾನ 

ಪಾಡ್ತನ ಕಲಾವಿದೆ ಅಳದಂಗಡಿ ಕರ್ಗಿ ಶೆಡ್ತಿ, ತುಳು ಕನ್ನಡ ಸಿನೆಮಾ ನಿರ್ಮಾಪಕ ಮಲಾರು ಬೀಡು ಪುಷ್ಪರಾಜ ರೈ, ಸಮಾಜ ಸೇವಕ ಮಾಡ ಹರೀಶ್ ಶೆಟ್ಟಿ, ಸಾವಯವ ಕೃಷಿಕ ಕೇಪು ಕೃಷ್ಣಪ್ಪ ಪುರುಷ, ಆರಕ್ಷಕ ಸೇವೆಯ ನಡುಕೂಟೇಲು ಪ್ರವೀಣ್ ರೈ ಮತ್ತು ಕೃಷಿ ಕ್ಷೇತ್ರದ ಎಡಮಂಗಲ ಸೀತಮ್ಮ ಹಾಲೇಶ್ ಗೌಡರನ್ನು ತುಳು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಳು ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿದರು. ನಿತ್ಯಶ್ರೀ ರೈ ಆಶಯಗೀತೆ ಹಾಡಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳು ಸಿರಿ ಪುರಸ್ಕೃತರನ್ನು ಪರಿಚಯಿಸಿದರು. ಗ್ರಾಮ ವಿಕಾಸ ಯೋಜನೆಯ ಪಿಆರ್‌ಒ ಮಾತೇಶ್ ಭಂಡಾರಿ ವಂದಿಸಿದರು. ದೇವಿಪ್ರಸಾದ ಶೆಟ್ಟಿ ಬೆಜ್ಜ ನಿರೂಪಿಸಿದರು. ಸಮ್ಮೇಳನ ಪೂರ್ವ ತುಳು ಜಾನಪದ ಪರಿಚಯಿಸುವ ಮೆರವಣಿಗೆ ನಡೆದು ನಂತರ ಯಕ್ಷಗಾನ ಪ್ರದರ್ಶನಗೊಂಡಿತು.