

Travel with the beehive :ಜೇನು ತುಪ್ಪ ಎಲ್ಲರಿಗೂ ಇಷ್ಟನೆ. ಆದರೆ ಅದನ್ನು ತಯಾರಿಸೋ ಹುಳುಗಳಂದ್ರೆ ಯಾರಿಗೂ ಬೇಡ ದೇವ್ರೆ. ಒಂದು ಸಲ ಮುತ್ತಿಟ್ಟವೆಂದರೆ ಹನುಮಂತನಂತೆ ಊದಿ, ಅದರ ನೋವು, ಊತ ಎಲ್ಲದೂ ಇಳಿಯಲು 24 ಗಂಟೆಗಳ ಕಾಯಲೇ ಬೇಕು. ಒಂದು ಎರಡು ಹುಳಗಳು ಕಚ್ಚಿದರೇ ಅದರ ಯಾತನೆ ಹೇಳತೀರದು. ಇನ್ನು ಇಡೀ ಗೂಡಿನ ಹುಳಗಳು ಎದ್ದು ಬಂದು ಕಚ್ಚಿದ್ರೆ ಕಥೆ ಮುಗೀತು. ಕೆಲವೊಮ್ಮೆ ಬೆನ್ನು ಹತ್ತಿ ಬರುವ ಜೇನುನೊಣಗಳು ಕಚ್ಚಿ ಕಚ್ಚಿ ಮನುಷ್ಯರು ಸತ್ತ ಪ್ರಕರಣಗಳೂ ಇವೆ. ಇಷ್ಟೆಲ್ಲಾ ಅಪಾಯಕಾರಿಯಾಗಿರುವ ಈ ಹುಳುಗಳ ಬಳಿ ಸುಳಿಯುವುದೇ ಅಸಾಧ್ಯವೆಂದಾಗ ಇಲ್ಲೊಬ್ಬ ಭೂಪ ಹರಸಾಹಸಕ್ಕೆ ಕೈ ಹಾಕಿದ್ದು, ಜೇನು ಹುಳಗಳ ಜೊತೆಯೇ ಕಾರಿನಲ್ಲಿ ಪ್ರಯಾಣ (Travel with the beehive) ಬೆಳೆಸಿದ್ದಾನೆ.
ಹೌದು, ಸೌತ್ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಇಂತಹ ಹುಚ್ಚಾಟಕ್ಕೆ ಕೈ ಹಾಕಿದ್ದಾನೆ. ಅಲ್ಲದೆ ತನ್ನ ಕಾರಿನಲ್ಲಿ ಜೇನುನೊಣಗಳು ಗೂಡ ಕಟ್ಟಿವೆ ಎಂದು ಕಾರಿನ ಮಾಲಿಕನಾದ ಆತ ಈ ಬಗ್ಗೆ ವಿಡಿಯೋ ಮಾಡಿ ಜನರಿಗೆ ಮಾಹಿತಿ ನೀಡಿದ್ದಾನೆ. ಅಲ್ಲದೆ ಅದರೊಂದಿಗೆ ತಾನೂ ಪ್ರಯಾಣ ಮಾಡುವುದಾಗಿ ಹೇಳುತ್ತಿದ್ದಾನೆ. ಜೇನು ಗೂಡಿನ ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ತನ್ನ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋದಲ್ಲಿರುವ ವ್ಯಕ್ತಿ ಕಾರು ಚಾಲನೆ ಮಾಡ್ತಿದ್ದಾನೆ. ಆತನ ತಲೆ ಬದಿಯಲ್ಲೇ ಜೇನು ಗೂಡು ಕಟ್ಟಿದೆ. ಜೇನು ನೊಣಗಳ ಜೊತೆ ನಾನು ಸಂಚಾರ ಮಾಡ್ತಿದ್ದೇನೆ ಎನ್ನುವ ವ್ಯಕ್ತಿ ತಾನು ಶೀಘ್ರದಲ್ಲೇ ಶ್ರೀಮಂತನಾಗಲಿದ್ದೇನೆ ಎಂದೂ ಹೇಳುತ್ತಿದ್ದಾನೆ. ಚೀನೀ ಸಂಸ್ಕೃತಿಯ ಪ್ರಕಾರ, ಮನೆಯೊಳಗೆ ಜೇನುಗೂಡು ಇರುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಅಂದಹಾಗೆ ಈ ಜೇನುನೊಣಗಳು ಕಾರಿಗೆ ಬಂದಿದ್ದು ಕೂಡ ವಿಶೇಷವೆ. ಯಾಕೆಂದ್ರೆ ಆತ ಮೊದಲು ಕಾರು ಚಾಲನೆ ಮಾಡಿದಾಗ ಹುಳುಗಳು ಇರಲಿಲ್ಲ. ಚಾಲಕ ಕಾಡಿನ ಮೂಲಕ ಹಾದು ಹೋಗುತ್ತಿದ್ದಾಗ ಕಾರನ್ನು ಎಲ್ಲೋ ನಿಲ್ಲಿಸಿದ್ದಾನೆ. ಮರಳಿ ಬಂದು ಬಾಗಿಲು ತೆರೆದಿದ್ದ ಕಾರಣ ನೊಣಗಳು ಕಾರಿನೊಳಗೆ ಪ್ರವೇಶ ಮಾಡಿವೆ. ಕಾರು ಹತ್ತಿದಾಗ ಆತನಿಗೆ ಈ ವಿಷ್ಯ ತಿಳಿದಿದೆ.
ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ದಂಗಾಗಿದ್ದಾರೆ. ಒಂದು ನಿಮಿಷ 35 ಸೆಕೆಂಡುಗಳ ಈ ವೀಡಿಯೊವನ್ನು 12.1 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದಾರೆ. ನೀವು ಜೇನುನೊಣಗಳನ್ನು ಅವರಪಾಡಿಗೆ ಬಿಟ್ರೆ ಅವು ನಿಮಗೆ ಏನೂ ಮಾಡೋದಿಲ್ಲ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಕಾರಿನ ಚಾಲಕ ಹಾಗೂ ಕಾರು ಎರಡೂ ಅದೃಷ್ಟ ಮಾಡಿದ್ದವು. ಅದಕ್ಕೆ ಜೇನು ಇಲ್ಲಿ ಗೂಡು ಕಟ್ಟಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಜೇನುನೊಣವು ನಿಮ್ಮ ಮನೆಯಲ್ಲಿ ಅಥವಾ ಕಾರಿನಲ್ಲಿ ಗೂಡು ಕಟ್ಟುವುದು ಶುಭ ಸಂಕೇತವಾಗಿದ್ದು, ಈ ವ್ಯಕ್ತಿ ಜೀವನದುದ್ದಕ್ಕೂ ಖುಷಿಯಾಗಿರ್ತಾನೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.













