

Neetu Singh: ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ರಾಹುಲ್ ಗಾಂಧಿ ಮಾತನಾಡಿದ್ದರು. ಬಳಿಕ ಸ್ಮೃತಿ ಇರಾನಿ ಇದರ ಬಗ್ಗೆ ಉತ್ತರ ನೀಡಲು ಆರಂಭಿಸಿದರು. ಈ ವೇಳೆ ಸದನದಿಂದ ಹೊರಹೀಗುವ ಹಾದಿಯಲ್ಲಿದ್ದ ರಾಹುಲ್ ಗಾಂಧಿ, ಫ್ಲೈಯಿಂಗ್ ಕಿಸ್ ನೀಡಿದ್ದರು ಎನ್ನಲಾಗಿದೆ. ಇದನ್ನು ಸ್ಮೃತಿ ಇರಾನಿ ಲೋಕಸಭೆಯ ಭಾಷಣದಲ್ಲಿಯೇ ಟೀಕೆ ಮಾಡಿದ್ದಲ್ಲದೆ, ಸದನದಲ್ಲಿ ಇಂತಹ ಕೃತ್ಯಗಳನ್ನು ಹಿಂದೆಂದೂ ನೋಡಿರಲಿಲ್ಲ ಎಂದಿದ್ದಾರೆ.
ಲೋಕಸಭೆಯಲ್ಲಿ ಸ್ಮೃತಿ ಇರಾನಿ ಅವರು ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಇದೀಗ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ (Neetu Singh) ಈ ಬಗ್ಗೆ ಮಾತನಾಡಿದ್ದಾರೆ.
ಸ್ಮೃತಿ ಇರಾನಿ ಮಾತನಾಡುವಾಗ ರಾಹುಲ್ ಗಾಂಧಿ (Rahul Gandhi) ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ (Kiss in Lok Sabha) ನೀಡಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ಗೆ ಬಿಜೆಪಿ ಮಹಿಳಾ ಸಂಸದರು ದೂರು ನೀಡಿದ್ದು, ಸಿಸಿಟಿವಿ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವತ್ತ ಆಗ್ರಹಿಸಿದ್ದಾರೆ. ಜೊತೆಗೆ ಶೋಭಾ ಕರಂದ್ಲಾಜೆ ಕೂಡ ಆಕ್ರೋಶ ವ್ಯಕ್ತಪಡಿಸಿ, ಈ ಕುರಿತು ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಸ್ಪೀಕರ್ ಓಂ ಬಿರ್ಲಾಗೆ ಲಿಖಿತ ದೂರು ನೀಡಿದ್ದಾರೆ.
ಸದ್ಯ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಈ ಬಗ್ಗೆ ಮಾತನಾಡಿದ್ದು, “ರಾಹುಲ್ ಗಾಂಧಿ ಅವರಿಗೆ ಹುಡುಗಿಯರ ಕೊರತೆ ಇಲ್ಲ. ಹಾಗೇನಾದರೂ ಅವರಿಗೆ ಫ್ಲೈಯಿಂಗ್ ಕಿಸ್ ನೀಡಬೇಕು ಅನಿಸಿದರೆ, ಅವರು ಯಾವುದಾದರೂ ಹುಡುಗಿಗೇ ನೀಡುತ್ತಾರೆ. 50 ವರ್ಷದ ಮುದುಕಿಗೆ ರಾಹುಲ್ ಗಾಂಧಿ ಯಾಕೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ. ರಾಹುಲ್ ಗಾಂಧಿ ವಿರುದ್ಧದ ಈ ಆರೋಪಗಳು ಆಧಾರರಹಿತವಾಗಿವೆ. ಈ ಫ್ಲೈಯಿಂಗ್ ಕಿಸ್ ವಿವಾದ ರಾಹುಲ್ ಗಾಂಧಿಯ ಇಮೇಜ್ ಅನ್ನು ಹಾಳು ಮಾಡುವ ಯತ್ನವಷ್ಟೇ” ಎಂದು ನೀತು ಸಿಂಗ್ ಹೇಳಿದ್ದಾರೆ.
ಸದ್ಯ ಈ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ನೀತು ಸಿಂಗ್ ಆಡಿರುವ ಮಾತಿಗೆ ಬಿಜೆಪಿ ಕಿಡಿಕಿಡಿಯಾಗಿದ್ದು, ಒಂದು ಮಹಿಳೆಯಾಗಿ ನೀವು ಆಡಿರುವ ಮಾತುಗಳು ಅತ್ಯಂತ ಹೀನವಾದದ್ದು ಎಂದು ಹೇಳಿದ್ಜು, ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.













