

BJP Candidate-List: ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Election) ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಗೆ ಹೋಗಿರುವ ಸಿಎಂ ಬೊಮ್ಮಾಯಿಯವರು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ (BJP Candidate-List will be released tomorrow).
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆದಿದ್ದು, ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ಆಗಿದೆ. ಕೆಲ ಕ್ಷೇತ್ರಗಳ ಬಗ್ಗೆ ಇನ್ನೂ 2 ಗಂಟೆಗಳ ಕಾಲ ಚರ್ಚೆ ಅಗತ್ಯವಿದೆ. ಕೆಲವು ಕ್ಷೇತ್ರಗಳಲ್ಲಿ ಹಲವು ಅಭ್ಯರ್ಥಿಗಳಿದ್ದಾರೆ. ಅಲ್ಲಿ ಕಾರ್ಯಕರ್ತರ ಅಭಿಪ್ರಾಯ ಹಾಗೂ ಸರ್ವೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಇದಾದ ಬಳಿಕ ಬಿಜೆಪಿ ಸಂಸದೀಯ ಮಂಡಳಿಗೆ ಪಟ್ಟಿ ರವಾನಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ
‘ ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವುದು ಕೇವಲ ಊಹಾಪೋಹ, ಎರಡು ಸಲ ನಡೆದ ಚರ್ಚೆ ನಡೆದ ಫಲಶ್ರುತಿ ಇಂದು ಗೊತ್ತಾಗಲಿದೆ. ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ‘ ಎಂದು ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ರಾಜ್ಯ ನಾಯಕರೊಂದಿಗೆ ಶನಿವಾರ ಇಡೀ ದಿನ ಸಮಾಲೋಚನೆ ನಡೆಸಿದರು. ಆದರೂ, ಪಕ್ಷದ ಟಿಕೆಟ್ ಹಂಚಿಕೆಯ ಕಗ್ಗಂಟು ಕೆಲ ಕ್ಷೇತ್ರಗಳಲ್ಲಿ ಬಗೆಹರಿದಿಲ್ಲ ಎನ್ನಲಾಗಿದೆ.
ವಿಧಾನಸಭೆಯ ಪ್ರತಿ ಕ್ಷೇತ್ರಕ್ಕೆ ರಾಜ್ಯ ಪ್ರಮುಖರ ಸಮಿತಿಯು 2 ರಿಂದ 3 ಹೆಸರುಗಳನ್ನು ಶಿಫಾರಸು ಮಾಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಆಕಾಂಕ್ಷಿಯ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಶನಿವಾರ ನಡೆಸಲಾಗಿದ್ದು, ಅದು ಇಂದು ಭಾನುವಾರ ಸಹ ಮುಂದುವರಿಯಲಿದೆ.
ಇಂದು, ಭಾನುವಾರ ಸಂಜೆ 5 ಗಂಟೆಗೆ ಕೇಂದ್ರ ಸಂಸದೀಯ ಮಂಡಳಿಯ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಸಂಸದೀಯ ಮಂಡಳಿಯ ಹಲವು ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಭಾನುವಾರ ತಡ ರಾತ್ರಿ ಅಥವಾ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಈಗ ಮುಖ್ಯಮಂತ್ರಿಯವರು ಹೇಳಿಕೆ ನೀಡಿದ್ದು ನಾಳೆ ಮೊದಲ ಪಟ್ಟಿ ಪ್ರಕಟ ಆಗಲಿದೆ.
ಬಿಜೆಪಿ ಅಧ್ಯಕ್ಷ ನಡ್ಡಾ ನೇತೃತ್ವದಲ್ಲಿ ನಡೆದ ನಿನ್ನೆಯ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ಸಹ ಉಸ್ತುವಾರಿ ಮನ್ಸುಖ್ ಮಾಂಡವೀಯಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಆಕಾಂಕ್ಷಿಗಳ ಕುರಿತು ಮತ್ತು ಪ್ರತಿ ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ಬಸವರಾಜ ಬೊಮ್ಮಾಯಿ ಎರಡು ಬಾರಿ, ನಳಿನ್ ಕುಮಾರ್ ಕಟೀಲು ಒಂದು ಬಾರಿ ಹಾಗೂ ಕೇಂದ್ರ ನಾಯಕತ್ವ ಒಂದು ಬಾರಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಳ ಕುರಿತು ಕೂಡಾ ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ನಾಲ್ಕು ಸಮೀಕ್ಷೆಗಳನ್ನು ತುಲನೆ ಮಾಡಿ ಅಲ್ಲಿ ಅಂಕಗಳನ್ನು ನೀಡಲಾಗಿದ್ದು, ಗರಿಷ್ಠ ಅಂಕ ಪಡೆದವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರತಿ ಕ್ಷೇತ್ರದ ಕುರಿತು ಕೂಲಂಕಷವಾಗಿ ಚರ್ಚೆ ನಡೆದಿದ್ದು, ಹೀಗಾಗಿ ಸಭೆ ತಡ ರಾತ್ರಿಯವರೆಗೆ ಮುಂದುವರಿಯಿತು ಎಂಬ ಮಾಹಿತಿ ಲಭ್ಯ ಆಗಿದೆ.













