

Election Result: ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಪ್ರಾರಂಭದಲ್ಲಿಯೇ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಅಂತೆಯೇ ಇದೀಗ ಬೆಳಗ್ಗೆಯಿಂದ ಆರಂಭವಾದ ಮತ ಎಣಿಕೆಯನ್ನು ನೋಡುವುದಾದರೆ NDA ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದ್ದು, ಇಂಡಿಯಾ(INDIA)ಕೂಟದ ಮುನ್ನಡೆ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ.
ಹೌದು, ಆರಂಭದ ಮುನ್ನಡೆಗಳನ್ನು ಗಮನಿಸಿದರೆ ಯಾಕೋ ಎಕ್ಸಿಟ್ ಪೋಲ್ ಗಳ ಭವಿಷ್ಯ ತಲೆ ಕೆಳಗಾಗುವ ಎಲ್ಲಾ ಲಕ್ಷ ಕಂಡುಬರುತ್ತಿದೆ. ಯಾಕೆಂದರೆ 300ರ ಗಡಿ ದಾಟಿದ್ದ ಬಿಜೆಪಿ ಇದೀಗ 295-290ಕ್ಕೆ ಕುಸಿದಿದೆ. ಆದರೆ ಇಂಡಿಯಾ ಕೂಟ ಮಾತ್ರ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಮುನ್ನುಗ್ಗುತ್ತಲೇ ಇದೆ.
ಅದರಲ್ಲೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಬಿಜೆಪಿಗೆ ಭಾರೀ ಸೆಡ್ಡು ಹೊಡೆಯುತ್ತಿವೆ. ಅಲ್ಲಿ 35 ಸೀಟುಗಳಲ್ಲಿ ಇಂಡಿಯಾ ಕೂಟ ಮುನ್ನಡೆ ಸಾಧಿಸಿದೆ. ಬಿಜೆಪಿ 50ರೊಳಗೆ ಕುಸಿದಿದೆ. ಒಟ್ಟಿನಲ್ಲಿ ಯಾಕೋ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ.
ಅಂದಹಾಗೆ ಇದು ಆರಂಭಿಕ ಎಣಿಕೆ ಅಷ್ಟೇ. ಆದರೆ ಅಂತಿಮ ಫಲಿತಾಂಶದ ತನಕ ಹಾವು ಏಣಿ ಆಟ ಇದ್ದೆ ಇರುತ್ತದೆ. ಕೆಲವು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆದಿದೆ. ಆ ಕ್ಷೇತ್ರಗಳಲ್ಲಿ ಅಂತಿಮ ಫಲಿತಾಂಶವೇ ಕುತೂಹಲಕ್ಕೆ ತೆರೆ ಎಳೆಯ ಬೇಕು.













