

Shirur Landslide: ಶಿರೂರು ಭೂ ಕುಸಿತದ (Shirur Landslide) ಪರಿಣಾಮ ಗಂಗಾವಳಿ ನದಿಯಾಳದಲ್ಲಿ (Gangavali River) ಬಿದ್ದ ಟ್ರಕ್ ಜೊತೆಗೆ ಅರ್ಜುನ್ ಸೇರಿದಂತೆ ಹಲವರು ನಾಪತ್ತೆ ಆಗಿದ್ದು, ಇದೀಗ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಕೊನೆಗೂ ಪತ್ತೆಯಾಗಿದೆ. ಇಂದು ನಡೆದ ಶೋಧ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಅದರಲ್ಲಿ ಕೇರಳ ಮೂಲದ ಲಾರಿ ಚಾಲಕನಾಗಿದ್ದ ಅರ್ಜುನ್ ಶವ ಸೇರಿದಂತೆ ಮತ್ತೋರ್ವರ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಹೌದು, ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್ ಕಡೆಗೆ ಹೋಗುತ್ತಿದ್ದರು. ಅಂದು ಶಿರೂರು ಭೂ ಕುಸಿತದ ಬಳಿಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ ಬಿದ್ದಿತ್ತು. ಅದೇ ವೇಳೆ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ನಂತರ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಮತ್ತುಕಾಣೆಯಾದವರ ಬಗ್ಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.
ಸದ್ಯ ಅರ್ಜುನ್ ಓಡಿಸುತ್ತಿದ್ದ ಲಾರಿ ಕೂಡ ಪತ್ತೆಯಾಗಿದೆ. ಸದ್ಯ ಅರ್ಜುನ್ ಮೃತದೇಹ ಭಾರತ ಬೆಂಜ್ ಲಾರಿಯಲ್ಲಿದೆ. ಮತ್ತೊಂದು ಶವ ಯಾರದ್ದು ಎಂದು ಇನ್ನಷ್ಟೇ ದೃಢಪಡಿಸಬೇಕಿದೆ. ಶಿರೂರು ಬಳಿ, ಗಂಗಾವಳಿ ನದಿಯಲ್ಲಿ ಆರು ದಿನಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು. ಸದ್ಯ ಗಂಗಾವಳಿ ನದಿಯಿಂದ ಲಾರಿ ಮತ್ತು ಶವಗಳನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ.













