Home News 1ರಿಂದ 5ನೇ ತರಗತಿ ಶಾಲಾರಂಭ | ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

1ರಿಂದ 5ನೇ ತರಗತಿ ಶಾಲಾರಂಭ | ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು, ಅ. 21: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸುದೀರ್ಘ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಒಂದರಿಂದ 5ನೆ ತರಗತಿ ಶಾಲೆಗಳು ಇದೆ 25ರಿಂದ ಪುನರಾರಂಭಗೊಳ್ಳಲಿದ್ದು, ನ.2ರಿಂದ ಪೂರ್ಣ ಪ್ರಮಾಣದ ಅವಧಿಗೆ ದೈನಂದಿನ ತರಗತಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯದಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1ರಿಂದ 5ನೆ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಭೌತಿಕವಾಗಿ ಅ.25ರಿಂದ ಆರಂಭಿಸಲಾಗುತ್ತಿದ್ದು, ಶಾಲೆಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪ್ರಕಟಿಸಲಾಗಿದೆ. ಶಾಲೆಗೆ ಹಾಜರಾಗುವ 6ರಿಂದ 10ನೆ ತರಗತಿಯ ವಿದ್ಯಾರ್ಥಿಗಳಿಗೆ ದೈನಂದಿನ ಪೂರ್ಣಾವಧಿ ನಡೆಯುವುದರಿಂದ ಮಧ್ಯಾಹ್ನದ ಉಪಾಹಾರದ ವ್ಯವಸ್ಥೆಯನ್ನು ಶಾಲೆಗಳಲ್ಲಿ ನೀಡಲಾಗುವುದು. ಅನುದಾನರಹಿತ ಶಾಲೆಗಳಲ್ಲಿನ ಮಕ್ಕಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಊಟ ತರುವಂತೆ ಸೂಚಿಸಬೇಕೆಂದು ನಿರ್ದೇಶಿಸಲಾಗಿದೆ.

ಮಾರ್ಗಸೂಚಿ: ರಾಜ್ಯದಲ್ಲಿನ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ 1ರಿಂದ 5ನೆ ತರಗತಿಗಳನ್ನು ಅ.25ರಿಂದ ಪ್ರಾರಂಭಿಸಲು ಅನುಮತಿ ನೀಡಿದೆ. ಅ.25ರಿಂದ 30ರ ವರೆಗೆ ಜಾರಿಗೆ ಬರುವಂತೆ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 1 ರಿಂದ 5ನೆ ತರಗತಿವರೆಗೆ ಅರ್ಧದಿನ ಭೌತಿಕ ತರಗತಿಗಳನ್ನು ನಡೆಸಲು ತಿಳಿಸಿದೆ. ನವೆಂಬರ್ 2ರಿಂದ ಪೂರ್ಣ ಪ್ರಮಾಣದಲ್ಲಿ ದೈನಂದಿನ ಪೂರ್ಣ ಅವಧಿಗೆ ತರಗತಿಗಳನ್ನು ನಡೆಸಲು ಕ್ರಮ ವಹಿಸುವುದು ಎಂದು ಸೂಚಿಸಲಾಗಿದೆ.

ಶಾಲೆಗಳಲ್ಲಿ 1ರಿಂದ 5ನೆ ತರಗತಿಯ ಎಲ್ಲ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಆದರೆ ಶಾಲೆಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಮಕ್ಕಳಿಗೆ ಪೋಷಕರ ಮೂಲಕ ಮಾಹಿತಿ ನೀಡಬೇಕು. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್‌ಶೀಲ್ಡ್ ಧರಿಸುವುದು ಕಡ್ಡಾಯ.

1ರಿಂದ 5ನೆ ತರಗತಿಯ ಶಾಲೆಗಳಲ್ಲಿ ಪ್ರಸ್ತುತ ಅರ್ಧದಿನ ಮಾತ್ರ ಶಾಲೆ ನಡೆಯುವುದರಿಂದ ಮಧ್ಯಾಹ್ನ ಉಪಾಹಾರ ವ್ಯವಸ್ಥೆ ಅನುಷ್ಟಾನಗೊಳಿಸಲಾಗುವುದಿಲ್ಲ. ನ.2ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಯು ಪ್ರಾರಂಭಗೊಂಡ ನಂತರ, ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಲಾಗುವುದು. ಅವಶ್ಯಕತೆ ಅನುಸಾರ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡುವುದು. 1ರಿಂದ 5ನೆ ತರಗತಿಗಳು ಒಂದೂವರೆ ವರ್ಷದಿಂದ ಭೌತಿಕವಾಗಿ ನಡೆಯದೇ ಇರುವುದರಿಂದ, ಮಕ್ಕಳ ಕಲಿಕೆಗೆ ಹಿನ್ನಡೆಯಾಗಿರುತ್ತದೆ. ಈ ಪ್ರಯುಕ್ತ ಮಕ್ಕಳಿಗೆ ಸೇತುಬಂಧ ಶಿಕ್ಷಣದಂತಹ ಬೋಧನಾ ಪದ್ಧತಿಯನ್ನು ಪ್ರಾರಂಭಿಸಬೇಕು.

ಮಕ್ಕಳ ಭೌತಿಕ ಹಾಜರಾತಿಯನ್ನು ಪರಿಗಣಿಸಿ ಮತ್ತು ತರಗತಿ ಕೊಠಡಿಯ ಅಳತೆಯನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ 20 ಮಕ್ಕಳ ತಂಡವನ್ನು ಅಥವಾ ಒಟ್ಟು ಹಾಜರಾದ ಮಕ್ಕಳಲ್ಲಿ ಶೇ.25ರಷ್ಟು ಮಕ್ಕಳಿಗೆ ತರಗತಿ ಕೊಠಡಿಯಲ್ಲಿ ಆಸನದ ವ್ಯವಸ್ಥೆ ಮಾಡುವುದು. ಪರಸ್ಪರ 1 ಮೀಟರ್ ಭೌತಿಕ ಅಂತರ ಪಾಲಿಸುವಂತೆ ಎಚ್ಚರಿಕೆ ವಹಿಸುವುದು. ಶಾಲೆಯ ಪ್ರವೇಶ ದ್ವಾರದಲ್ಲಿ ಕೋವಿಡ್-19 ಲಕ್ಷಣಗಳ ಕುರಿತು ತಪಾಸಣೆ ಮಾಡುವುದು.

ಕೆಮ್ಮು, ನೆಗಡಿ, ಜ್ವರ ಇದ್ದರೆ ಮನೆಗೆ: ಯಾವುದೇ ವಿದ್ಯಾರ್ಥಿಗೆ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವಂತ ಲಕ್ಷಣಗಳಿದ್ದಲ್ಲಿ, ಅವರನ್ನು ಐಸೋಲೇಷನ್ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಇರಿಸಿ, ಅವರ ಪಾಲಕರನ್ನು ಸಂಪರ್ಕಿಸಿ, ಮನೆಗೆ ಕಳುಹಿಸತಕ್ಕದ್ದು. ತರಗತಿಯ ಕೊಠಡಿಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಛಗೊಳಿಸುವುದು. ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಕಂಡುಬಂದಲ್ಲಿ ಶಾಲೆಯನ್ನು ಸ್ಯಾನಿಟೈಜ್ ಮಾಡಿ, ಸ್ಥಳೀಯ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಗಡಿಪಿಲ : ರಿಕ್ಷಾ ಚಾಲಕ ಚೇತನ್‌ಗೆ ಹಲ್ಲೆ ,ಹ್ಯಾರಿಸ್ ಮತ್ತು ತಂಡದಿಂದ ಕೃತ್ಯ ಶಂಕೆ