

Dakshina Kannada : ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮುಸ್ಲಿಮರ ಸರಣಿ ಕೊಲೆಗಳು ನಡೆಯುತ್ತಿವೆ. ಮುಸ್ಲಿಮರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಇಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೀಗ ಇದಕ್ಕೆ ಮುನ್ನುಡಿ ಎಂಬಂತೆ ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೌದು, ಮಂಗಳೂರಿನ ಮಾಜಿ ಮೇಯರ್ ಕೆ. ಅಶ್ರಫ್ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಾಮೂಹಿಕ ರಾಜೀನಾಮೆ ಪರ್ವ ಆರಂಭವಾದಂತೆ ಕಾಣುತ್ತಿದೆ.
ಈ ಕುರಿತಾಗಿ ಪತ್ರಿಕ ಪ್ರಕಟಣೆಯಲ್ಲಿ ಅಶ್ರಫ್ ಅವರು “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ದ.ಕ.ಜಿಲ್ಲೆಯ ಮತ್ತು ರಾಜ್ಯದ ಇತರೆಡೆಗಳಲ್ಲಿ ಅಲ್ಪಸಂಖ್ಯಾತರರಿಗೆ ಸಂಘ ಪರಿವಾರದಿಂದ ಆಗುತ್ತಿರುವ ದೌರ್ಜನ್ಯ, ಕೋಮು ಪ್ರಚೋದಿತ ಚಟುವಟಿಕೆ, ದ್ವೇಷ ಭಾಷಣ, ಅಮಾಯಕ ವ್ಯಕ್ತಿಗಳ ಕೊಲೆ, ಅಮಾಯಕರ ಬಂಧನ, ಅಧಿಕಾರಿಗಳ ಮತೀಯ ತಾರತಮ್ಯ, ಅಬ್ದುಲ್ ರಹ್ಮಾನ್‌ರ ಬರ್ಬರ ಹತ್ಯೆ ತಡೆಯಲು ಪೊಲೀಸರು ಮತ್ತು ಗುಪ್ತಚರ ಅಧಿಕಾರಿಗಳ ವಿಫಲತೆ, ಜಿಲ್ಲೆಯಲ್ಲಿ ಘೋಷಿತ ಹತ್ಯೆಯ ಬೆದರಿಕೆಗೆ ಕಡಿವಾಣ ಹಾಕಲು ವಿಫಲತೆ, ಕಾನೂನು ಸುವ್ಯವಸ್ಥೆ ಪಾಲನೆ ವಿಫಲತೆ ಇತ್ಯಾದಿಯನ್ನು ನಿಭಾಯಿಸಲು ಹಾಲಿ ಸರಕಾರವು ವಿಫಲವಾದ ಕಾರಣ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ” ಮಾಜಿ ತಿಳಿಸಿದ್ದಾರೆ.













