Home News Train: ಮಂಗಳೂರು-ಮುಂಬೈ ಮಧ್ಯೆ ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಮಹತ್ವದ ಸೂಚನೆ !

Train: ಮಂಗಳೂರು-ಮುಂಬೈ ಮಧ್ಯೆ ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಮಹತ್ವದ ಸೂಚನೆ !

Train

Hindu neighbor gifts plot of land

Hindu neighbour gifts land to Muslim journalist

Train: ಮಂಗಳೂರು ಮತ್ತು ಮುಂಬೈ ಮಧ್ಯೆ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರ ಆಯ್ಕೆ ಮತ್ಸ್ಯಗಂಧ ಅಥವಾ ಮ್ಯಾಂಗಲೋರ್ ಎಕ್ಸ್ಪ್ರೆಸ್ ರೈಲುಗಳು. ಈ ರೈಲುಗಳಲ್ಲಿ ಪ್ರಯಾಣಿಕರ ಒಡವೆ, ಹಣ ಹಾಗೂ ಮೊಬೈಲ್ ಫೋನ್ ಕಳವಾಗುವ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಇದೆಲ್ಲಾ ರೈಲ್ವೆ ಪೊಲೀಸರ ಮೂಗಿನ ಅಡಿಯಲ್ಲೇ ನಡೆಯುತ್ತಿದೆ ಅನ್ನೋದು ಸಂಶಯಾತೀತ. ಈ ರೀತಿ ರೈಲ್ವೇಗಳಲ್ಲಿ ಹಗಲು ದರೋಡೆ ನಡೆಯೋದು ಮಾಮೂಲು. ಇನ್ನು ರೈಲಿನಲ್ಲಿ ಸಿಗುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಅನೇಕ ಬಾರಿ ದೂರುಗಳು ಕೇಳಿ ಬಂದಿವೆ. ಇದೀಗ ದಾಮೋದರ ಶೆಟ್ಟಿ, ಇರುವೈಲು ಎನ್ನುವವರು ಮಂಗಳೂರು-ಮುಂಬೈ ಮಧ್ಯೆ ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವಾಗ ತಮಗಾದ ಕೆಟ್ಟ ಅನುಭವದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಅವರ ಮಾತಲ್ಲಿಯೇ ಓದಿ.

‘ಮೊನ್ನೆ ನಾನು ದಿನಾಂಕ 4 ರಂದು ಮುಲ್ಕಿಯಿಂದ ಮಂಗಳೂರಿಗೆ 3rd AC ಯಲ್ಲಿ ಪ್ರಯಾಣಿಸುತ್ತಿದ್ದೆ. ರಾತ್ರಿ ಸುಮಾರು 8:30ರ ಹೊತ್ತಿಗೆ ಮಡಗಾವ್ ನಲ್ಲಿ ಊಟ ಕೊಡುವವರು ಬಂದು ಊಟ ಬೇಕಾ ಎಂದು ಕೇಳುತ್ತಿದ್ದರು. ನಾನು ರೂಪಾಯಿ 95 ಕೊಟ್ಟು ಒಂದು ಎಗ್ ಬಿರಿಯಾನಿ ಖರೀದಿಸಿದೆ. ಎಗ್ ಬಿರಿಯಾನಿ ಕೊಟ್ಟವ ನನ್ನಿಂದ ಹಣ ಪಡೆದು ಅಲ್ಲಿಂದ ಮಾಯವಾದ. ಎಗ್ ಬಿರಿಯಾನಿಯ ಡಬ್ಬಿ ಓಪನ್ ಮಾಡಿದಾಗ ಅದರಲ್ಲಿ ಎರಡು ಬೇಯಿಸಿದ ಮೊಟ್ಟೆ ಹಾಗೂ ಸುಮಾರು 50 ಗ್ರಾಮಿನಷ್ಟು ಹಳದಿ ಬಣ್ಣದ ಅನ್ನವಿತ್ತು. ಅದರಲ್ಲಿ ಯಾವುದೇ ರೀತಿಯ ಉಪ್ಪು ಖಾರ ಮಸಾಲೆ ಇರಲಿಲ್ಲ’.

‘ನಾನು ಅದನ್ನು ಅಲ್ಲೇ ಇದ್ದ ಟೀಸಿಗೆ ತೋರಿಸಿ ನನಗೆ ಕಂಪ್ಲೆಂಟ್ ಕೊಡಲಿಕ್ಕಿದೆ ಅಂತ ಹೇಳಿದೆ. ಆಗ ಟಿಸಿ ಅವರ ಮ್ಯಾನೇಜರ್ ಗೆ ಫೋನ್ ಮಾಡಿ ಕ್ಯಾಟ್ರಿಂಗ್ ಮಾಡುವವರ ಮ್ಯಾನೇಜರ್ ನ್ನು ಕರೆದ. ನಾನು ಅವನನ್ನು ಕರೆದಾಗ ನಾನು ಜನರಲ್ ಡಬ್ಬದಲ್ಲಿದ್ದೇನೆ, ಮುಂದಿನ ಸ್ಟೇಷನ್ನಲ್ಲಿ ಟ್ರೈನ್ ನಿಂತಾಗ ಬರುತ್ತೇನೆ ಅಂತ ಹೇಳಿದ. ನಾನು ಅವನಿಗೆ ಕೊಟ್ಟ ಬಿರಿಯಾನಿಯ ದುಸ್ಥಿತಿಯ ಬಗ್ಗೆ ವಿವರಿಸಿದೆ. ಮುಂದಿನ ಸ್ಟೇಷನ್ ನಲ್ಲಿ ಬೇರೊಂದು ಬಿರಿಯಾನಿ ಪ್ಯಾಕೆಟ್ ಹಿಡಿದು ಆತ ನನ್ನ ಬಳಿ ಬಂದಾಗ ಅವನಿಗೆ ನಾನು ಅರ್ಧ ತಿಂದು ಮುಗಿಸಿದ ಬಿರಿಯಾನಿ ತೋರಿಸಿದೆ. ನೀನು ಇಷ್ಟು ಬೇಗ ಬೇರೆ ಬಿರಿಯಾನಿ ಹೇಗೆ ತಂದಿ? ಅಂದರೆ ನಿಮ್ಮಲ್ಲಿ ಎರಡು ಬಗೆಯ ಬಿರಿಯಾನಿ ಮಾಡುತ್ತಾರೆಯೇ ? ಎಂದು ಕೇಳಿದಾಗ ಅವನಲ್ಲಿ ಉತ್ತರ ಇರಲಿಲ್ಲ’.

‘ಇನ್ನು ರೈಲಿನಲ್ಲಿ ಚಾ ತಿಂಡಿ ಊಟ ಮಾರಾಟ ಮಾಡುವ ಯಾವುದೇ ನೌಕರರ ಬಳಿ ಐಡೆಂಟಿಟಿ ಕಾರ್ಡ್ ಕೂಡ ಇರಲಿಲ್ಲ. ನಾನು ಅವನ ಬಿರಿಯಾನಿಯನ್ನು ಹಾಗೆ ಹಿಂದೆ ಕೊಟ್ಟು ಮುಂಬೈಗೆ ಬಂದ ತಕ್ಷಣ ರೈಲ್ವೆ ಬೋರ್ಡ್ ಗೆ, ರೈಲ್ವೆ ಮಂತ್ರಿಗೆ ಕೊಂಕಣ್ ರೈಲ್ವೆಗೆ ನನ್ನ ದೂರನ್ನು ಸಲ್ಲಿಸಿದೆ. ಇವತ್ತು ಕೊಂಕಣ್ ರೈಲ್ವೆಯವರು ನನಗೆ ಫೋನ್ ಮಾಡಿ ಏನು ಸಮಸ್ಯೆ ಇತ್ತು ಅಂತ ವಿಚಾರಿಸಿದ್ದರು. ನಾನು ಅವರಿಗೆ ಎಲ್ಲಾ ವಿಷಯಗಳನ್ನು ತಿಳಿಸಿದ್ದೇನೆ. ಅವರು “ಮುಂದಿನ ಕ್ರಮ” ಕೈಗೊಳ್ಳುವುದಾಗಿ ವಾಗ್ದಾನ ಮಾಡಿರುತ್ತಾರೆ. ಆದರೆ ಬೃಹತ್ ನುಂಗಣ್ಣಗಳೇ ತುಂಬಿರುವ ರೈಲ್ವೆ ಇಲಾಖೆಯಿಂದ ನನಗೆ ನ್ಯಾಯ ದೊರಕುವ ಯಾವ ಭರವಸೆಯೂ ಇಲ್ಲ’.

‘ಮತ್ತೆ ರೈಲಿನಲ್ಲಿ ಅಕ್ಕಪಕ್ಕದವರನ್ನು ನೋಡಿದಾಗ ನನ್ನಂತೆ ಊಟದ ಬಗ್ಗೆ ಗೊಣಗುತ್ತಿರುವ ಅನೇಕರನ್ನು ನೋಡಿದೆ. ಆದರೆ ಯಾರೂ ಮಾತನಾಡಲು ಸಿದ್ದರಿಲ್ಲ. ದುಡ್ಡು ಕೊಟ್ಟ ಕರ್ಮಕ್ಕೆ ತಿಂದು ಮುಗಿಸುತ್ತಿದ್ದರು. ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವ ಎಲ್ಲ ಕನ್ನಡಿಗರಲ್ಲಿ ನನ್ನದೊಂದು ವಿನಂತಿ, ದಯವಿಟ್ಟು ಯಾರೂ “Jolina Caterers”. ಕಂಪನಿಯ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ. ರಾತ್ರಿ ಊಟಕ್ಕೆ ನಿಮ್ಮದೇ ವ್ಯವಸ್ಥೆ ಮಾಡಿಕೊಂಡು ಹೋಗಿ’. ಇದು ರೈಲ್ವೆ ಪ್ರಯಾಣಿಕ ದಾಮೋದರ್’ವರ ಮಾತು.