

Davangere : ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಆದರೆ ಶಿವಮೊಗ್ಗ ಜಲ್ಲೆಯಲ್ಲಿ ಪತಿಮಹಾಶಯನೊಬ್ಬ ತನ್ನ ಪತ್ನಿಯ ಜೊತೆ ಜಗಳವಾಡಿ ಆಕೆಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ನಡೆದಿದೆ.
ಹೌದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮಂಟರಘಟ್ಟ ಗ್ರಾಮದಲ್ಲಿ ಧರ್ಮಸ್ಥಳ ಸಂಘದ ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳ ನಡೆದಿದ್ದು, ಪತ್ನಿಯ ಮೂಗನ್ನೇ ಹಲ್ಲಿನಿಂದ ಕಚ್ಚಿ, ಕಿತ್ತು ತೆಗೆದಿದ್ದಾನೆ. ವಿದ್ಯಾ(30) ರ ಮೂಗಿನ ಮುಂಭಾಗ ಸಂಪೂರ್ಣ ಕಟ್ ಆಗಿದೆ. ವಿದ್ಯಾ ಅವರ ಪತಿ ವಿಜಯ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ.
ವಿಜಯ್ ಮತ್ತು ವಿದ್ಯಾ ಎಂಬ ದಂಪತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಸುಮಾರು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಕಂತುಗಳನ್ನು ವಿದ್ಯಾ ಪ್ರತಿದಿನ ಕ್ರಮವಾಗಿ ತೀರಿಸುತ್ತಿದ್ದರು. ಆದರೆ ಕಳೆದ ತಿಂಗಳು ಎರಡು ವಾರದವರೆಗೆ ಕಂತು ಸರಿಯಾಗಿ ನೀಡಲಾಗಿರಲಿಲ್ಲ. ಈ ಬಗ್ಗೆ ಸಂಘದ ಸಿಬ್ಬಂದಿ ವಿಜಯ್‌ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಸಂಘದ ಕಡೆಯಿಂದ ಕರೆ ಬಂದ ಕೂಡಲೇ ವಿಜಯ್ ಕೋಪಗೊಂಡು, ಪತ್ನಿ ವಿದ್ಯಾಳೊಂದಿಗೆ ಗಲಾಟೆ ಆರಂಭಿಸಿದ. ಗಲಾಟೆ ವಿಕೋಪಕ್ಕೆ ತಿರುಗಿ, ವಿಜಯ್ ತನ್ನ ಪತ್ನಿಯ ಮೂಗು ಹಲ್ಲಿನಿಂದ ಕಚ್ಚಿ ಭಾರೀ ಗಾಯ ಮಾಡಿದ್ದಾನೆ. ನಂತರ ಮೂಗು ಏನಾಗಿದೆ ಎಂದು ನೋಡಿದರೆ, ಸಂಪೂರ್ಣವಾಗಿ ತುಂಡಾಗಿ ಬಿದ್ದಿದೆ.
ತಕ್ಷಣವೇ ಸ್ಥಳೀಯರು ಅವರಿಬ್ಬರ ಜಗಳ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಗಿದೆ. ಹಲ್ಲೆ ಸಂಬಂಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಂಎಲ್ ಸಿ ( Medical legal cases) ದಾಖಲಾಗಿತ್ತು. ಆ ಬಳಿಕ ಜಯನಗರ ಠಾಣೆಯಿಂದ ದೂರು ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.













