

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಸ್ಯಾಂಡಲ್‌ವುಡ್ ನಟ ಮಡೆನೂರು ಮನು ಅವರ ಮೇಲೆ ಗಂಭೀರವಾದ ಅ*ಚಾರ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ನಟ ಮಡೆನೂರು ಮನು (Madenur Manu) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಮನು ಮೇಲೆ ಸ್ನೇಹಿತೆ, ಸಂತ್ರಸ್ತೆ ಅನೇಕ ಆರೋಪಗಳನ್ನು ಹೊರಿಸಿದ್ದಾರೆ.
ಹೌದು, ಮೊದಲ ಬಾರಿಗೆ ಸಂತ್ರಸ್ಥ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಲವ್ ಮಾಡಿಲ್ಲ. ನನಗೆ ಅವನು ಬೆಸ್ಟ್ ಫ್ರೆಂಡ್ ಆಗಿದ್ದ. ಅದನ್ನೇ ದುರ್ಬಳಕೆ ಮಾಡಿಕೊಂಡ. ಅವನಿಗೆ ಮದುವೆ ಆಗಿ, ಮಗಳು ಇದ್ದಾಳೆ. ಆದರೂ ಅತ್ಯಾಚಾರ ಮಾಡಿದ್ದಾನೆ. ಅಂಥವನನ್ನು ನಾನು ಯಾಕೆ ಲವ್ ಮಾಡಲಿ? ಅತ್ಯಾಚಾರ ಮಾಡುವಾಗ ಅವನ ತಲೆಯಲ್ಲಿ ಬುದ್ಧಿ ಇರಲಿಲ್ಲವಾ? ಬೇರೆ ಯಾರೋ ನನ್ನ ಮೇಲೆ ಅತ್ಯಾಚಾರ ಮಾಡಿದ್ದರೆ ಮುಲಾಜಿಲ್ಲದೇ ದೂರು ನೀಡುತ್ತಿದ್ದೆ. ಆದರೆ ಮನು (Madenur Manu) ನನ್ನ ಬೆಸ್ಟ್ ಫ್ರೆಂಡ್. ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಮದುವೆ ಆಗಿ ಮಗಳು ಇರುವವನು ನನ್ನ ಮೇಲೆ ಕೆಟ್ಟ ದೃಷ್ಟಿ ಬೀರಲ್ಲ ಅಂತ ನಾನು ನಂಬಿದ್ದೆ’ ಎಂದಿದ್ದಾರೆ ಸಂತ್ರಸ್ಥ ಮಹಿಳೆ.
ಅಲ್ಲದೆ ‘ಅವನು ಏನೇನೋ ಮಾಡುತ್ತಿದ್ದ. ಮಾಟ ಮಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಅವನು ಮಾಡುತ್ತಿದ್ದ ರೀತಿ ನನಗೆ ಮಂಕು ಮಾಡಲು ಶುರು ಮಾಡಿತು. ಬೂದಿ ತಂದು ಮುಖಕ್ಕೆ ಎರಚುವುದು ಮತ್ತು ವಶೀಕರಣ ಮಾಡುತ್ತಿದ್ದ. ಅದರಿಂದ ನಾನು ಮಂಕಾದೆ. ಪದೇಪದೇ ಗರ್ಭಪಾತ ಆಯಿತು. ಒಂದು ಮಗು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದೆ. ಈಗ ಬೇಡ, 2 ವರ್ಷ ಬಿಟ್ಟು ಎಲ್ಲರಿಗೂ ಹೇಳೋಣ ಎಂದಿದ್ದ. ಹಿಂಸೆ ಕೊಟ್ಟು ಗರ್ಭಪಾತ ಮಾಡಿಸಿದ’ ಎಂದು ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ.
ಇನ್ನು ಅತ್ಯಾಚಾರ ಮಾಡಿದ ಬಳಿಕ ಮದುವೆ ಆಗುತ್ತೇನೆ ಅಂತ ಹೇಳಿದ್ದ. ಎಲ್ಲರ ಮುಂದೆ ಹೇಳಿ ಮದುವೆ ಆದರೆ ನರಕ ತೋರಿಸುತ್ತೇನೆ ಅಂತ ಹೆದರಿಸಿದ್ದ. ಹುಷಾರಿಲ್ಲದ ನನಗೆ ಬಲವಂತವಾಗಿ ಕುಡಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಖಾಸಗಿ ವಿಡಿಯೋ ಮಾಡಿಕೊಂಡು ಹೋಗಿದ್ದಾನೆ. ಡಿಲೀಟ್ ಮಾಡಿದ್ದೇನೆ ಅಂತ ಹೇಳಿದ್ದ. ಆದರೆ ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಇಷ್ಟು ವಿಕೃತಿ ಮೆರೆಯುವ ಅವನಿಗೆ ಶಿಕ್ಷೆ ಆಗಲೇಬೇಕು’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.













