Home News ‘ಗಬ್ಬರ್ ಸಿಂಗ್’ ದರೋಡೆ ಕಡಿಮೆ ಮಾಡಿದ್ದಾನೆ, ಅದಕ್ಕಾಗಿ GST ಉತ್ಸವ: ಪ್ರಿಯಾಂಕ್ ಖರ್ಗೆ

‘ಗಬ್ಬರ್ ಸಿಂಗ್’ ದರೋಡೆ ಕಡಿಮೆ ಮಾಡಿದ್ದಾನೆ, ಅದಕ್ಕಾಗಿ GST ಉತ್ಸವ: ಪ್ರಿಯಾಂಕ್ ಖರ್ಗೆ

Minister Priyank Kharge

Hindu neighbor gifts plot of land

Hindu neighbour gifts land to Muslim journalist

Bengaluru: “ಇದೀಗ ಗಬ್ಬರ್ ಸಿಂಗ್ ದರೋಡೆ ಪ್ರಮಾಣವನ್ನು ಕಡಿಮೆ ಮಾಡಿದ್ದಾನೆ, ಇದಕ್ಕಾಗಿ ಎಲ್ಲರೂ ಜಿಎಸ್ ಟಿ ಉಳಿತಾಯ ಉತ್ಸವ ಆಚರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ” ಸೋಮವಾರ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆಯವರು, ‘ಈ ಗಬ್ಬರ್ ಸಿಂಗ್ 8 ವರ್ಷ ಮಾಡಿದ ಪೂರ್ಣ ಪ್ರಮಾಣದ ಲೂಟಿಯನ್ನು ಎಲ್ಲರೂ ಮರೆತುಬಿಡಬೇಕು. ಇದು ಕೇಂದ್ರ ಸರ್ಕಾರದ ವರಸೆ! ಈ ದೇಶದ ಜನರನ್ನು ಹೇಗೆ ಬೇಕಾದರೂ ಮರಳು ಮಾಡಬಹುದಾದಷ್ಟು ಮೂರ್ಖರು ಎಂದು ಭ್ರಮಿಸಿದೆ ಬಿಜೆಪಿ. ಆದರೆ ಜನರು ಮೂರ್ಖರಲ್ಲ’ ಎಂದು ಆತ್ಯಂತ ಕಟು ಟೀಕಾ ಪ್ರಹಾರ ನಡೆಸಿದ್ದಾರೆ.

“ಈಗ ನಾವು ‘GST ಉಳಿತಾಯ ಉತ್ಸವ’ ಮಾಡಬೇಕಂತೆ, ಕಳೆದ 8 ವರ್ಷದಿಂದ ‘GST ಲೂಟಿ ಉತ್ಸವ’ ಮಾಡುತ್ತಿದ್ದರಲ್ಲವೇ? ಜನರನ್ನು ಬಾವಿಗೆ ತಳ್ಳಿದ್ದು ಇವರೇ! ಈಗ ಬಾವಿಯಿಂದ ಮೇಲೇತ್ತಲು ಏಣಿ ಕೊಟ್ಟಿದ್ದೇವೆ ಎನ್ನುತ್ತಿರುವವರೂ ಕೂಡಾ ಇವರೇ! ಈಗ ಏಣಿ ಕೊಟ್ಟಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. 8 ವರ್ಷದಿಂದ ಜನರನ್ನು ಬಾವಿಗೆ ತಳ್ಳಿದ್ದರ ಪಾಪದ ಹೊಣೆಯೂ ಮೋದಿಯವರದ್ದೇ” ಎಂದು ಅವರು ಟೀಕಾ ದಾಳಿ ನಡೆಸಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿಯವರು ‘ಗಬ್ಬರ್ ಸಿಂಗ್ ಟ್ಯಾಕ್ಸ್ ‘ ಕಡಿತಗೊಳಿಸಬೇಕೆಂದು ಈ ಹಿಂದೆಯೇ ಹಲವು ಬಾರಿ ಆಗ್ರಹಿಸಿದ್ದರು. ಆಗ ಅವರ ಮಾತುಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿಯವರಿಗೆ ಈಗ ಜನಾಕ್ರೋಶಕ್ಕೆ ಬೆದರಿ GST ಕಡಿತಗೊಳಿಸಿದ್ದರ ಕ್ರೆಡಿಟ್ ತೆಗೆದುಕೊಳ್ಳಲು ನಾಚಿಕೆ ಅನ್ನಿಸುವುದಿಲ್ಲವೇ?’ ಎಂದು ಅವರು ಟೀಕಿಸಿದ್ದಾರೆ.

“ಇವರು ಎಂಥ ಜನ ಅಂದ್ರೆ, ದುಬಾರಿ GST ಜಾರಿ ಮಾಡಿದಾಗಲೂ ಮಾಸ್ಟರ್ ಸ್ಟ್ರೋಕ್ ಅಂದರು, ಈಗ GST ಕಡಿತಗೊಳಿಸಿದ್ದನ್ನೂ ಮಾಸ್ಟರ್ ಸ್ಟ್ರೋಕ್ ಅನ್ನುತ್ತಿದ್ದಾರೆ! ಆದರೆ ಕಳೆದ 8 ವರ್ಷಗಳಲ್ಲಿ ಜನತೆಗೆ ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು ಭರಿಸುವವರು ಯಾರು? ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು GST ಕಾರಣದಿಂದ ಮುಚ್ಚಿಹೋಗಿದ್ದಕ್ಕೆ ಯಾರು ಜವಾಬ್ದಾರಿ? ದೇಶದ ಆರ್ಥಿಕತೆಗೆ ಬಿದ್ದ ಹೊಡೆತಕ್ಕೆ ಹೊಣೆಯಾರು? ಆಗಿರುವ ಉದ್ಯೋಗ ನಷ್ಟಕ್ಕೆ ಜವಾಬ್ದಾರಿ ಯಾರು? ಇದೆಲ್ಲವಕ್ಕೂ ಮೋದಿಯವರೇ ಹೊಣೆಯಲ್ಲವೇ?” ಎಂದು ಸಾಲು ಸಾಲು ಪ್ರಶ್ನೆ ಮುಂದಿಟ್ಟು ಅವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ.