

Freak Accident: ಮನುಷ್ಯನಿಗೆ ಸಾವು ಯಾವ ರೂಪದಲ್ಲಿ ಬೇಕಾದರು ಬರಬಹುದು. ಇಲ್ಲೊಂದು ಘಟನೆಯಲ್ಲಿ ಮೂರು ವರ್ಷದ ಮಗುವಿನ ಮೇಲೆ 5 ಅಂತಸಿನ ಕಟ್ಟಡದ ಮೇಲಿಂದ ನಾಯಿ ಬಿದ್ದು ಮಗುವಿನ ಪ್ರಾಣವೇ ಹೋಗಿದೆ. ತನ್ನ ತಾಯಿಯೊಂದಿಗೆ ರಸ್ತೆಯಲ್ಲಿ ತನ್ನಪಾಡಿಗೆ ನಡೆದುಕೊಂಡು ಹೋಗ ಬೇಕಾದರೆ ಮೇಲಿಂದ ನಾಯಿ ಮಗುವಿನ ಮೇಲೆ ಬಿದ್ದಿದೆ. ದೈತ್ಯಾಕಾರದ ನಾಯಿ ಮಗುವಿನ ಮೇಲೆ ಬಿದ್ದ ರಭಸಕ್ಕೆ ಮಗುವಿನ ಕುತ್ತಿಗೆ, ತಲೆ ಹಾಗೂ ಮೈಗೆ ಗಾಯವಾಗಿ, ಪ್ರಜ್ಙೆ ಕಳೆದುಕೊಂಡಿದೆ. ಈ ಘಟನೆ ಮುಂಬೈನ ಮುಂಬ್ರಾ ಬಳಿಯ ಅಮೃತ್ ನಗರದಲ್ಲಿ ನಡೆದಿದೆ.
ಚಿರಾಗ್ ಮೆನ್ಸನ್ ಎಂಬ ಐದು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ವೊಂದರಲ್ಲಿ ನಾಯಿ ಸಾಕಲಾಗಿತ್ತು. ಈ ನಾಯಿ ಮೇಲಿಂದ ರಸ್ತೆಯ ಮೇಲೆ ಹಠಾತ್ ಬಿದ್ದಿದೆ. ಈ ವೇಳೆ ಅಜ್ಜಿ ಹಾಗೂ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗು ನಾಯಿಯ ಅಡಿಯಲ್ಲಿ ಸಿಲುಕಿದೆ. ತಕ್ಷಣ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ತೀವ್ರ ಗಾಯಗೊಂಡ ಮಗು ಚಿಕಿತ್ಸೆ ಫಲಕಾರಿಯಾಗದೇ, ಆಸ್ಪತ್ರೆಯಲ್ಲೇ ಸಾವನ್ನಪ್ಪಿದೆ. ನಾಯಿಯಿಂದಾಗಿ ಹೆತ್ತ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.
ಈ ನಾಯಿಯನ್ನು ಚಿರಾಗ್ ಮೆನ್ಸನ್ ನ ನಿವಾಸಿ ಜೈದ್ ಸೈಯ್ಯದ್ ಎಂಬುವವರದ್ದು ಎಂದು ತಿಳಿದು ಬಂದಿದೆ. ಆದರೆ ನಾಯಿ ಐದನೇ ಮಹಡಿಯಿಂದ ರಸ್ತೆಗೆ ಹೇಗೆ ಬಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನೂ ನಾಯಿಯೂ ಗಾಯಗೊಂಡಿದ್ದು, ಅದರ ಬೆನ್ನಿನ ಮೂಳೆ ಮುರಿದಿದೆ. ನಾಯಿಯನ್ನು ಪ್ರಾಣಿ ದಯಾ ಸಂಘದವರ ಮುಖಾಂತರ ಪಶು ಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಯಿ ಸಾಕುವ ಪರವಾನಿಗೆ ಇತ್ತಾ ಎಂಬುದನ್ನು ತನಿಖೆಗೊಳಪಡಿಸುತ್ತಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮುಗ್ಧ ಮಗುವಿನ ಸಾವು ಕಂಡು ಜನ ಬೇಸರಗೊಂಡಿದ್ದಾರೆ.













