

Malpe: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೇ ಮಾಡಿದ ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಸಿಎಂ ಕೂಡ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಹಲ್ಲೆಗೆ ಒಳಗಾದ ಸಂತ್ರಸ್ತೆ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಹಲ್ಲೆಗೆ ಒಳಗಾದ ಮಹಿಳೆ ‘ಮೀನು ಕದ್ದಿದ್ದೇನೆಂದು ಆರೋಪಿಸಿ ನನಗೆ ಹೊಡೆದಿದ್ದಾರೆ. ಅನಂತರ ನಾನು ಬಂದರಿಗೆ ಹೋಗಿಲ್ಲ. ಇನ್ನು ಇಲ್ಲಿ ಕೆಲಸ ಮಾಡೋದು ಕಷ್ಟ, ಹೀಗಾಗಿ ನಾವು ನಮ್ಮ ಊರಿಗೆ ವಾಪಸ್ ಹೋಗುತ್ತೇವೆ’ ಎಂದು ತಿಳಿಸಿದ್ದಾರೆ.
ಅಲ್ಲದೆ ಸ್ವಲ್ಪ ಮೀನು ತೆಗೆದದ್ದು ಹೌದು. ಬಂದರಿನಲ್ಲಿ ಆ ಥರ ಮೀನು ತೆಗೆಯೋದು ಸಹಜ. ಆವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಅದಕ್ಕೆ ಏನು ಮಾಡೋಕೆ ಆಗಲ್ಲ. ಈಗ ಇಲ್ಲಿ ಇರೋಕೆ ಒಂಥರ ಆಗುತ್ತೆ. ಬೇರೆ ನನಗೆ ಯಾರು ತೊಂದರೆ ಕೊಟ್ಟಿಲ್ಲ. ನನಗೆ ಅವರ ಮೇಲೆ ಏನು ದ್ವೇಷ ಇಲ್ಲ. ಅವರಿಗೆ ನನ್ನ ಮೇಲೆ ದ್ವೇಷ ಇಲ್ಲ ಎಂದು ಹೇಳಿದರು. ಅವರನ್ನು ಬಂದರಿನಲ್ಲಿ ನಾನು ನೋಡಿ ಪರಿಚಯ ಇದೆ. ಯಾರಿಗೆ ಏನು ಮಾಡೋದು ಬೇಡ. ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ ‘ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ. ಅವರು ಮೇಲಿಂದಲೇ ಕಂಪ್ಲೇಂಟ್ ಕೊಡಲು ಹೇಳಿದರು. ಕಂಪ್ಲೇಂಟ್ ಕೊಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅವರು ಹೇಳಿದ್ದಕ್ಕೆ ನಾನು ಸಹಿ ಮಾಡಿದ್ದೇನೆ ಅಷ್ಟೇ. ಘಟನೆ ಆದ ದಿನ ರಾತ್ರಿ ರಾಜಿ ಮಾಡಿಕೊಂಡಿದ್ದೆವು. ಕೇಸ್ ಬೇಡ ಎಂದು ಮಾತನಾಡಿ ಬಂದಿದ್ದೆವು. ಆಮೇಲೆ ಮೇಲಿಂದ ಇದು ಆಯ್ತು ಎಂದು ಹೇಳಿದರು. ಯಾರಿಗೂ ಶಿಕ್ಷೆ ಆಗೋದು ಬೇಡ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ದುಡಿದು ತಿನ್ನುತ್ತೇವೆ ಎಂದರು.













