

ಬೆಳ್ತಂಗಡಿ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರಆಶ್ರಯದಲ್ಲಿ ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಇವರ ತಂದೆತಾಯಿಗಳ ನೆನಪಿನಲ್ಲಿ ಕೊಡ ಮಾಡುವ 2026ನೇ ಸಾಲಿನ ವನಜ-ಸುಜನಾ ರಂಗಮನೆ ಪ್ರಶಸ್ತಿಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯ ಕಲಾವಿದ ಮಹೇಶ್ ಮಣಿಯಾಣಿ ಆಯ್ಕೆಯಾಗಿದ್ದಾರೆ.
ಸುಳ್ಯ ತಾಲೂಕಿನ ದೊಡ್ಡ ತೋಟದವರಾದ ಮಹೇಶ ಮಣಿಯಾಣಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಉಬರಡ್ಕ ಉಮೇಶ್ ಶೆಟ್ಟಿ ಯವರಿಂದ ಹೆಜ್ಜೆಗಾರಿಕೆ ಕಲಿತು ಮೇಳ ಸೇರಿದವರು. ಹಿರಿಯ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಮಾರ್ಗದರ್ಶನದಲ್ಲಿ ಕಟೀಲು ಮೇಳ ಸೇರಿದ ಇವರು, ಆರಂಭದಲ್ಲಿ ಬಪ್ಪನಾಡು ಮೇಳ, ನಂತರ ಧರ್ಮಸ್ಥಳ ಮೇಳಗಳಲ್ಲಿ ಸ್ತ್ರೀವೇಷ, ಪುಂಡುವೇಷ ನಂತರ ಪೂರ್ಣಪ್ರಮಾಣದ ಹಾಸ್ಯಗಾರರಾಗಿ ಒಟ್ಟು 37 ವರ್ಷ ಯಕ್ಷ ಸೇವೆ ಮಾಡಿದವರು. ಮಳೆಗಾಲದ ತಿರುಗಾಟದಲ್ಲಿ ಕಳೆದ ಏಳು ವರ್ಷದಿಂದ ಮಹಿಳಾ ಕಲಾವಿದೆ ವಿದ್ಯಾ ಕೋಳೂರು ಮತ್ತು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ತಂಡದೊಂದಿಗೆ ಅಮೇರಿಕಾ, ಯುರೋಪ್ ಯಕ್ಷ ಪ್ರವಾಸದ ಖಾಯಂ ಕಲಾವಿದರಾಗಿದ್ದಾರೆ. ಬಾಹುಕ, ರಕ್ಕಸ ದೂತ, ನಾರದ, ಮಕರಂದ, ವಿಜಯ, ಶ್ರೀನಿವಾಸ ಕಲ್ಯಾಣದ ಸಖ, ಮಹಾಕಲಿ ಮಗದೆಂದ್ರದ ಜಗಜಟ್ಟಿ, ಕೃಷ್ಣ ಲೀಲೆಯ ಮಂತ್ರವಾದಿ, ದಾರುಕ, ಸಮುದ್ರ ಮಥನದ ಮೂಕಾಸುರ ಮುಂತಾದವು ಇವರ ಜನಮೆಚ್ಚುಗೆಯ ಪ್ರಮುಖ ಪಾತ್ರಗಳು.













