

ಇತ್ತೀಚೆಗೆ 6 ವರ್ಷದ ಬಾಲಕಿ ಚಾಕಲೇಟ್ ನುಂಗಿ ಸಾವನ್ನಪ್ಪಿದ್ದಾಳೆ ಎಂಬ ವರದಿಯೊಂದು ಬಂದಿತ್ತು. ಆ ಬಾಲಕು ಹೆಸರೇ ಸಮನ್ವಿ. ಈಗ ಬಾಲಕಿ ಸಮನ್ವಿ ಸಾವಿಗೆ ವೈದ್ಯಕೀಯ ವರದಿ ಟ್ವಿಸ್ಟ್ ನೀಡಿದೆ.
ಹೌದು, ಬಾಲಕಿ ಸಮನ್ವಿ ಸಾವಿನ ಹಿಂದಿರುವ ನಿಜವಾದ ಕಾರಣ ವೈದ್ಯಕೀಯ ವರದಿ ಮೂಲಕ ಪತ್ತೆಯಾಗಿದೆ. ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಈ ಬಾಲಕಿ ಸಾವು ಹಾಗೂ ನಿಗೂಢವಾಗಿಯೇ ಇದ್ದ ವಿದ್ಯಾರ್ಥಿನಿ ಸಮನ್ವಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಬಾಲಕಿ ಸಮನ್ವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಸಮಸ್ಯೆಯಿತ್ತು ಎಂದು ವೈದ್ಯಕೀಯ ವರದಿಯಲ್ಲಿ ತಿಳಿದು ಬಂದಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6) ಉಪ್ಪುಂದದ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಜುಲೈ 20, 2022ರ ಬುಧವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಲು ಅನುವಾಗಿದ್ದ ಬಾಲಕಿ ನಂತರ ಅಮ್ಮಾ ಇವತ್ತು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಆದರೆ ಅಮ್ಮ ಬಾಲಕಿ ಸಮನ್ವಿಗೆ ಚಾಕಲೇಟ್ ಕೊಟ್ಟು ಸಮಾಧಾನಪಡಿಸಿದ್ದಾಳೆ. ಚಾಕಲೇಟ್ ಬಾಯಲ್ಲಿಟ್ಟ ಕೂಡಲೇ ಶಾಲೆ ಬಸ್ ಬಂದ ಕಾರಣ ತಾಯಿ ಸಮನ್ವಿ ಎತ್ತಿಕೊಂಡು ಬಸ್ ಬಳಿ ಬಂದಿದ್ದಾರೆ. ಬಸ್ ಬಳಿ ಬರುತ್ತಲೇ ಮಗು ಕುಸಿದು ಬಿದ್ದಿದೆ. ಗಾಬರಿಗೊಂಡ ತಾಯಿ ಬಳಿಕ ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಬಾಲಕಿ ಸಮನ್ವಿ ಅಷ್ಟೊತ್ತಿಗಾಗಲೇ ತೀರಿಕೊಂಡಿರುವುದು ದೃಢವಾಗಿತ್ತು.
ಆದರೆ ಸಮನ್ವಿ ಸಾವಿಗೆ ನಿಜವಾದ ಕಾರಣ ಹುಡುಕುವುದು ಕಷ್ಟವಾಗಿತ್ತು. ಕಾರಣ ಬಾಯಲ್ಲಿ ಚಾಕಲೇಟ್ ಇದ್ದಿದ್ದರಿಂದ ಚಾಕೇಟ್ ಗಂಟಲಲ್ಲಿ ಸಿಕ್ಕಿ ಸಾವನ್ನಪ್ಪಿದ್ದಾಳೆ ಎಂದೇ ತಿಳಿಯಲಾಗಿತ್ತು. ಬಳಿಕ ಬೈಂದೂರು ಪೊಲೀಸರು ಮಣಿಪಾಲದಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಎಫ್.ಎಸ್.ಎಲ್. ವರದಿಗಾಗಿ ಕಳಿಸಲಾಗಿತ್ತು. ಇದೀಗ ವರದಿ ಪೊಲೀಸರ ಕೈ ಸೇರಿದ್ದು, ಬಾಲಕಿಗೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಬಾಲಕಿ ಸಮನ್ವಿ ಸಾವಿನ ನಿಜ ಕಾರಣ ಬಯಲಾಗಿದೆ.













