

Chinnaswamy Stampede: 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವ ಸಂಭ್ರಮ ಇದೀಗ ಮಾರಣಹೋಮವಾಗಿ ಪರಿಣಮಿಸಿದೆ.
ಈಗಾಗಲೇ 11 ಮಂದಿ ಸಾವಿಗೀಡಾಗಿರುವ ಮಾಹಿತಿ ದೊರಕಿದೆ. ವೈದೇಹಿಯಲ್ಲಿ ನಾಲ್ಕು ಮಂದಿ, ಬೌರಿಂಗ್ ಆಸ್ಪತ್ರೆಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂಗೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದು, ಅಪಾರ ಪ್ರಮಾಣದ ಅಭಿಮಾನಿಗಳು ಬರುವ ನಿರೀಕ್ಷೆ ಇದ್ದರೂ ರಾಜ್ಯ ಸರಕಾರ ಇದಕ್ಕೆ ಸೂಕ್ತ ಕ್ರಮವನ್ನು ಕೈಗೊಂಡಿರಲಿಲ್ಲ. ಸೂಕ್ತ ಬ್ಯಾರಿಕೇಡ್ ಹಾಕಿ ಸರಿಯಾದ ವ್ಯವಸ್ಥೆ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ.
ಚಿಕ್ಕಮಕ್ಕಳು, ಯುವಕರು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ. ಕಾಲ್ತುಳಿತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಅಭಿಮಾನಿಗೆ ಜನರೇ ಸಿಪಿಆರ್ ನೀಡುತ್ತಿದ್ದರು. ಈ ಘಟನೆಯಲ್ಲಿ 14 ವರ್ಷದ ದಿವ್ಯಾಂಶಿ ಸಾವು ಕಂಡಿದ್ದಾಳೆ. ತನ್ನ ಚಿಕ್ಕಮ್ಮನ ಜೊತೆ ಸ್ಟೇಡಿಯಂಗೆ ಬಂದ 9 ನೇ ತರಗತಿಯಲ್ಲಿದ್ದ ದಿವ್ಯಾಂಶಿ ಇದೀಗ ಸಾವಿಗೀಡಾಗಿದ್ದಾಳೆ.
ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನ ಪ್ರಧಾನ ಗೇಟನ್ನೇ ಮುರಿದು ಸ್ಟೇಡಿಯಂ ಒಳಹೋಗುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಈ ಸಂದರ್ಭದಲ್ಲಿ ಲಾಠಿಚಾರ್ಜ್ ಮಾಡಿದ್ದಾರೆ. ವಿರೋಧ ಪಕ್ಷಗಳ ನಾಯಕರು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದು, ಇದು ಸರಕಾರವೇ ಮಾಡಿರುವ ಕೊಲೆಗಳು ಎಂದು ದೂಷಿಸಿದ್ದಾರೆ.
ಒಂದೆಡೆ ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಇನ್ನೊಂದು ಕಡೆ ಸ್ಟೇಡಿಯಂನ ಒಳಗಡೆ ಆರ್‌ಸಿಬಿ ತಂಡದ ಸಂಭ್ರಮ ಮುಂದುವರಿದಿದೆ. ಕಾರ್ಯಕ್ರಮದ ಸಮಯವನ್ನು ಕಡಿಮೆ ಮಾಡಲಾಗಿದೆ. ಈ ಘಟನೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರು ಅಭಿಮಾನಿಗಳನ್ನು ನಿಯಂತ್ರಣ ಮಾಡಲು 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಆದರೂ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.













