

PM Modi: ಪ್ರಧಾನಿ ಮೋದಿಯವರು ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಗೆ ತೆರಳಿದ್ದಾರೆ. ಚೀನಾದಲ್ಲಿ ಪ್ರಧಾನಿ ಮೋದಿ ಅವರಿಗೆ ರಾಜಮರ್ಯಾದೆ ಸಿಗುತ್ತಿದೆ ಎನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಟಿಯಾಂಜಿನ್ ನಗರಕ್ಕೆ ಭೇಟಿ ನೀಡಿರುವ ಮೋದಿ ಅವರಿಗೆ ಚೀನ ಸರ್ಕಾರವು ಅಧ್ಯಕ್ಷ ಜಿನ್‌ಪಿಂಗ್ ಅವರ ನೆಚ್ಚಿನ “ಹಾಂಗ್ಕಿ ‘ ಕಾರನ್ನು ಒದಗಿಸಿದೆ.
ಹೌದು, ಅಧ್ಯಕ್ಷ ಜಿನ್‌ಪಿಂಗ್ ಅವರ ನೆಚ್ಚಿನ ಕಾರು ಹಾಂಗ್ಕಿ. ಇದು ಚೀನಾದಲ್ಲೇ ನಿರ್ಮಾಣಗೊಂಡ ಕಾರು. “ರೆಡ್ ಫ್ಲ್ಯಾಗ್’ ಎಂದೂ ಕರೆಯಲ್ಪಡುವ ಹಾಂಗ್ಕಿ ಎಲ್5 ಕಾರನ್ನು ಜಿನ್‌ಪಿಂಗ್ 2019ರಲ್ಲಿ ಮಹಾಬಲಿಪುರಂಗೆ ಭೇಟಿ ನೀಡಿದ್ದಾಗ ಬಳಸಿದ್ದರು. ಹಾಂಗ್ಕಿ ಕಾರು ಮೊದಲು ತಯಾರಾದದ್ದು 1958ರಲ್ಲಿ. ಆಗ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾದ ಗಣ್ಯರಿಗಾಗಿ ಸರ್ಕಾರಿ ಸ್ವಾಮ್ಯದ ಫಸ್ಟ್ ಆಟೋಮೋಟಿವ್ ವರ್ಕ್ಸ್ ಇದನ್ನು ಪ್ರಾರಂಭಿಸಿತು.
ಇನ್ನು ರಷ್ಯಾ ಅಧ್ಯಕ್ಷ ಪುಟಿನ್ ಅವರು ಟಿಯಾಂಜಿನ್ ನಗರದಲ್ಲಿ ಚೀನೀ ರಾಜತಾಂತ್ರಿಕ ನೋಂದಣಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ “ಆರಸ್’ ಎಂಬ ಐಷಾರಾಮಿ ಕಾರಿನಲ್ಲೇ ಸಂಚರಿಸಲಿದ್ದಾರೆ.
ಇನ್ನು ಭಾರತ, ಚೀನಾ ಸ್ನೇಹಿತರಾಗಿರುವುದೇ ಉತ್ತಮ. ಗಡಿ ಸಮಸ್ಯೆಯು ದ್ವಿಪಕ್ಷೀಯ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಹೇಳಿದ್ದಾರೆ.













