

Gold Bar: ಹನ್ನೊಂದು ವರ್ಷದ ಬಾಲಕನೊಬ್ಬನ ಹೊಟ್ಟೆ ಊದಿಕೊಂಡಿರುವುದು ಪೋಷಕರ ಗಮನಕ್ಕೆ ಬಂದಿದ್ದು, ಆದರೆ ಆತನಿಗೆ ಹೊಟ್ಟೆನೋವು ಇನ್ನಿತರ ಯಾವುದೋ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ.
ಹಾಗಾಗಿ ಹೊಟ್ಟೆ ಊದಿಕೊಂಡಿರುವುದಕ್ಕೆ ಅನುಮಾನಗೊಂಡ ಪೋಷಕರು ಆತನನ್ನು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಕ್ಸ್‌ರೇ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿ ಘನ ಲೋಹದ ವಸ್ತುವೊಂದು ಸಿಲುಕಿರುವುದು ಕಂಡು ಬಂದಿದೆ. ನಂತರ ಸ್ಕ್ಯಾನ್ ಮಾಡಿ ನೋಡಿದಾಗ 100 ಗ್ರಾಂ ತೂಕ ಚಿನ್ನದ ಗಟ್ಟಿ ಇರುವುದು ಕಂಡು ಬಂದಿದೆ. ಇದನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.
ಈ ಘಟನೆ ನಡೆದಿರುವುದು ಚೀನಾದ ಜಿಯಾಂಗ್ಸು ಎಂಬ ಪ್ರಾಂತ್ಯದಲ್ಲಿ.
ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಚಿನ್ನದ ಗಟ್ಟಿಯು ಮಲದ ಮೂಲಕ ಹೊರ ಹೋಗಲು ಸಾಧ್ಯವಾಗುವ ಔಷಧಿಯನ್ನು ವೈದ್ಯರು ನೀಡಿದ್ದಾರೆ. ಆದರೆ ಎರಡು ದಿನಗಳ ಬಳಿಕ ಮತ್ತೆ ಸ್ಕ್ಯಾನ್ ಮಾಡಿದಾಗ ಚಿನ್ನದ ಗಟ್ಟಿ ಬಾಲಕನ ಹೊಟ್ಟೆಯಲ್ಲಿಯೇ ಇರುವುದು ಕಂಡು ಬಂದಿದೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಬಾಲಕ ಚೇತರಿಸಿಕೊಂಡಿದ್ದು, ಊಟ ತಿಂಡಿ ಸೇವಿಸಲು ಆರಂಭ ಮಾಡಿದ್ದಾನೆ. ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ಖಚಿತ ಪಡಿಸಿದ ಮೇಲೆ ಬಾಲಕನನ್ನು ಡಿಸ್ಚಾರ್ಜ್ ಮಾಡಲಾಗಿದೆ.













