

Mahakumbh Mela: ಮಹಾಕುಂಭಮೇಳಕ್ಕೆ ತೆರಳಲು ಟೆಕೆಟ್ ಬುಕ್ ಮಾಡುವುದಾಗಿ ಅರ್ಚಕರೊಬ್ಬರಿಗೆ ವಂಚನೆ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಫೇಸ್‌ಬುಕ್ ಜಾಹೀರಾತು ನಂಬಿ 1.60 ಲಕ್ಷ ರೂ. ಕಳೆದುಕೊಂಡ ಅರ್ಚಕರೊಬ್ಬರು (42) ನೀಡಿರುವ ದೂರಿನ ಅನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅರ್ಚಕರು ವೈಯಾಲಿಕಾವಲ್‌ನ ನಿವಾಸಿಯಾಗಿದ್ದು, ಮಹಾಕುಂಭಮೇಳದಲ್ಲಿ ಭಾಗಿಯಾಗುವ ಸಲುವಾಗಿ ಪ್ರಯಾಗ್‌ರಾಜ್‌ಗೆ ಪ್ರಯಾಣ ಮಾಡಲು ಆಯ್ಕೆಯನ್ನು ಹುಡುಕಾಡುತ್ತಿದ್ದ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಕಾರ್ತಿಕೇಯನ್ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿದ್ದ ಆಡ್ ಗಮನಿಸಿದ್ದ ದೂರುದಾರರು ಸಂಪರ್ಕ ಮಾಡಿದ್ದು, ಫೋನ್ ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿ, ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿಕೊಡುವುದಾಗಿ ಹೇಳಿ ನಂಬಿಸಿ, ಅರ್ಚಕರಿಂದ ಹಂತ ಹಂತವಾಗಿ 1.60 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದ.
ಆದರೆ ಹಣ ಕೈ ಸೇರಿದ ನಂತರ ಆತ ಟಿಕೆಟ್ ಬುಕ್ ಮಾಡಿಕೊಡದೇ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿರುವುದಾಗಿ ಹೇಳಿದ್ದಾರೆ.













