

Fact Check: ಮದುವೆಯ ದಿನ ವಧು ಸಂಪ್ರದಾಯ ಬದ್ಧವಾಗಿ ರೇಶ್ಮೆ ಸೀರೆ ಅಥವಾ ಲೆಹಾಂಗ ತೊಟ್ಟು ಸಿಂಗಾರ ಮಾಡಿಕೊಂಡು ಬರುವ ಬದಲಾಗಿ, ಲಕ್ನೋದ ವಧುವೊಬ್ಬಳು ಬಿಕಿನಿ ತೊಟ್ಟು ಹಸೆಮಣೆ ಏರಿದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಮದುಮಗಳು ಬಿಕಿನಿ ತೊಟ್ಟು ಹಸೆಮಣೆ ಏರಿದ್ದು ಯಾಕೆ ಇದು ನಿಜಾನಾ ? ಈ ವೈರಲ್ ಫೋಟೊದ ಹಿಂದಿನ ಸತ್ಯಾಂಶ ಏನೆಂದು ಬಯಲಾಗಿದೆ (Fact Check) .
https://twitter.com/hi_samie/status/1862082098447765510
ಇತ್ತೀಚಿಗೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಎಐ ತಂತ್ರಜ್ಞಾನದಿಂದ ರಚಿತವಾದ ಡೀಪ್ ಫೇಕ್ ವಿಡಿಯೋಗಳು, ಫೋಟೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಮಗೆ ಗೊತ್ತೇ ಇದೆ. ಅದರಲ್ಲೂ ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅಂತೆಯೇ ಇದೀಗ ವಧು ಬಿಕಿನಿ ತೊಟ್ಟು ಹಸೆಮಣೆ ಏರಿದಂತಹ ಫೋಟೋ ಕೂಡಾ ಎಐ ರಚಿತ ಫೋಟೋವಾಗಿದ್ದು, ಇದು ನೈಜ ಘಟನೆಯಲ್ಲ ಎಂಬುದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಶೇರ್ವಾನಿ ಧರಿಸಿ ನಿಂತಿದ್ದ ವರನ ಪಕ್ಕದಲ್ಲಿ ಹಳದಿ ಬಣ್ಣದ ಬನಾರಸಿ ಬಿಕಿನಿ ತೊಟ್ಟು ನಿಂತಿದ್ದ ವಧು ವರಮಾಲೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದ ಫೋಟೋ ವೈರಲ್ ಆಗಿತ್ತು. ಇದು ಲಕ್ನೋದ ವಧು ಎಂದು ಸುಳ್ಳು ಸುದ್ದಿಯನ್ನು ಕೂಡಾ ಹಬ್ಬಿಸಲಾಗಿತ್ತು. ವಾಸ್ತವದಲ್ಲಿ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಎಐ ರಚಿತ ಫೋಟೋವಾಗಿದೆ.













