

Bengaluru: ಬೆಂಗಳೂರಿನ (Bengaluru) ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಮುಜರಾಯಿ ಇಲಾಖೆಯ ಅಧೀನಕ್ಕೆ ದೇವಸ್ಥಾನವನ್ನು ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ದೇವಸ್ಥಾನದ ಹುಂಡಿ ಹಣವನ್ನು ಆಡಳಿತ ಮಂಡಳಿಯ ಕೆಲವು ಸದಸ್ಯರು ಕಳವು ಮಾಡಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಈ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಇತ್ತೀಚೆಗೆ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿ, ದೇವಸ್ಥಾನವನ್ನು ತನ್ನ ವಶಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವು 1997ರ ಕಾಯ್ದೆಯ 42 ಮತ್ತು 43ನೇ ವಿಧಿಗಳ ಅಡಿಯಲ್ಲಿ ದೇವಸ್ಥಾನವನ್ನು ಘೋಷಿತ ಸಂಸ್ಥೆಯಾಗಿ ಘೋಷಿಸಿದೆ.













