

Goutami Jadav: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತ ತಲುಪಿದೆ. ಗಣರಾಜ್ಯೋತ್ಸವದ ವೇಳೆ ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಇದೀಗ ಮನೆಯಲ್ಲಿ 9 ಸ್ಪರ್ದಿಗಳು ಉಳಿದುಕೊಂಡಿದ್ದು ಒಬ್ಬರಿಗೊಬ್ಬರು ಪೈಪೋಟಿ ನೀಡಿ ಆಟವಾಡುತ್ತಿದ್ದಾರೆ. ಈ ಮಧ್ಯೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಆಗಿರುವ ಗೌತಮಿ ಜಾದವ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಬಿಗ್ಇ ಬಾಸ್ರು ನಲ್ಲಿರುವ ನಟಿ ಗೌತಮಿ ಜಾದವ್(Goutami Jadav)ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರಾ? ಅಥವಾ ನಿರ್ಲಕ್ಷಿಸುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಮೂಡಿದೆ. ಇದಕ್ಕೆ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಹಿರಿಯ ನಟಿ ಯಮುನಾ ಶ್ರೀನಿಧಿ ನೀಡಿರುವ ಹೇಳಿಕೆ. ಒಂದೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಯಮುನಾ ಶ್ರೀನಿಧಿ ತಾವು ಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದು, ಈ ವೇಳೆ ತಮ್ಮ ಮನಸ್ಸಿಗೆ ನೋವಾದ ಒಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ನವೆಂಬರ್ 1ನೇ ತಾರೀಖು ನಮ್ಮೆಲ್ಲಾ ಕನ್ನಡಿಗರು ಹೆಮ್ಮೆ ಪಡಬೇಕಾದಂತಹ ದಿನ ಕನ್ನಡ ರಾಜ್ಯೋತ್ಸವ. ಆ ದಿನವನ್ನು ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಚರಣೆ ಮಾಡುತ್ತಾರೆ. ಮೈ ತುಂಬಾ ನಮ್ಮ ಉಡುಗೆಯನ್ನು ತೊಟ್ಟು ನಮ್ಮ ನಾಡಗೀತೆಯನ್ನು ಹಾಡುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಗಮನಿಸಿದ್ದು, ನಾನು ಗಮನಿಸಿ ಸುಮ್ಮನಾದೆ. ನನಗೆ ಒಬ್ಬಳಿಗೆ ಮಾತ್ರ ಕಾಣಿಸುತ್ತಿದೆಯೋ ಅಂತಾ ಸುಮ್ಮನಾದೆ.
ಎಲ್ಲರೂ ನಾಡಗೀತೆಯನ್ನು ಹಾಡಬೇಕಾದರೆ ನಮ್ಮ ಶಿಶಿರ್ ಅಂತವರು ಗಟ್ಟಿ ಧ್ವನಿಯಲ್ಲಿ ಚೆನ್ನಾಗಿ ಹಾಡುತ್ತಾರೆ. ಇನ್ನು ಉಳಿದವರು ಬರುವಷ್ಟನ್ನು ಹಾಡಿ ಉಳಿದದನ್ನು ಲಿಪ್ ಸಿಂಕ್ ಮಾಡುತ್ತಾರೆ. ಎಲ್ಲರಿಗೂ ಎಲ್ಲಾ ಸಾಲು ಬರಬೇಕಂದಿಲ್ಲ. ಆದರೆ ಅಲ್ಲಿರುವಂತಹ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ’ ಎಂದು ಹೇಳಿದರು.
‘ಈಗ ನಾವು ಹೊರದೇಶಕ್ಕೆ ಹೋದಾಗ ಯಾವುದೋ ದೇಶದ ದೇಶ ಭಕ್ತಿ ಗೀತೆಯನ್ನು ಹಾಕಿದರೆ ನಮಗೆ ಬರಲ್ಲ. ನಾವು ಸುಮ್ಮನೆ ನಿಲ್ಲಬೇಕು. ಹಾಗೇ ಗೌತಮಿ ನಮ್ಮ ನಾಡಗೀತೆ ಬರುವಾಗ ನಿಂತಿದ್ದರು. ಅವರು ಮರಾಠಿಯವರು ಆಗಿರಬಹುದು. ಹನ್ನೆರಡು ವರ್ಷದಿಂದ ಕರ್ನಾಟಕದಲ್ಲಿ ಇದ್ದಾರೆ. ಕನ್ನಡ ಧಾರಾವಾಹಿಗಳನ್ನು ಮಾಡುತ್ತಾರೆ. ಇಲ್ಲಿನ ನೆಲ ಬೇಕು, ಇಲ್ಲಿನ ಜಲ ಬೇಕು, ಇಲ್ಲಿನ ಅವಕಾಶ ಸಿಗಬೇಕು, ಇಲ್ಲಿನ ಎಲ್ಲವೂ ಬೇಕು ಆದರೆ ನಮ್ಮ ನಾಡಗೀತೆ ಯಾವುದು ಗೊತ್ತಿಲ್ವಾ?’ ಎಂದು ಪ್ರಶ್ನಿಸಿದ್ದಾರೆ.
ಬೇರೆ ದೇಶದ ಗೀತೆಯಾಗಿದ್ದರೆ ನಾವು ಹಾಡುವುದಿಲ್ಲ, ಅದೇ ರೀತಿ ಗೌತಮಿ ಮಾಡಿದ್ದಾರೆ. ಗೌತಮಿ ಮರಾಠಿ ಮೂಲದವರಂತೆ, ಪರವಾಗಿಲ್ಲ, ಆದರೆ ಕಲಿಯಬಹುದಿತ್ತಲ್ಲ. ಬರದಿದ್ದರೆ ಕಲಿಯಲು ಎಷ್ಟು ದಿನ ಬೇಕು? ವಿದೇಶದಲ್ಲಿರುವ ಕನ್ನಡಿಗರು ಕನ್ನಡ ಬರೆದು ಓದುತ್ತಾರೆ, ನಾಡಗೀತೆ ಹಾಡುತ್ತಾರೆ. ನಾನು ಅಮೆರಿಕಾದಲ್ಲಿ ಕನ್ನಡ ಸಂಘದ ಅಧ್ಯಕ್ಷೆ ಆಗಿದ್ದಕ್ಕೆ ಹೇಳ್ತಿದ್ದೀನಿ. ಅಲ್ಲಿನ ಮಕ್ಕಳು ನಾಡಗೀತೆ ಹಾಡುತ್ತಾರೆ. ಆದರೆ 12 ವರ್ಷಗಳಿಂದ ಇದ್ದರೂ ಗೌತಮಿಗೆ ಕನ್ನಡ ಓದಲು ಬರಲ್ಲ, ಒಂದು ದಿನವೂ ಟಾಸ್ಕ್ ಬಗ್ಗೆ ಓದಲಿಲ್ಲ” ಎಂದು ಯಮುನಾ ಆರೋಪಿಸಿದ್ದಾರೆ.













