

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಿಯಮ ಉಲ್ಲಂಘನೆ ಮಾಡಿ ಭೇಟಿಯಾದ ಯಲಹಂಕ ಮೂಲದ ಕಾನ್ಸ್‌ಟೇಬಲ್ ಒಬ್ಬರ ಪ್ರಕರಣ ಮುನ್ನಲೆಗೆ ಬಂದಿದೆ.
ಈ ಘಟನೆ ಜ.24 ರಂದು ನಡೆದಿದ್ದು, ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಬಂದಿದ್ದು, ತಮ್ಮ ಅಧಿಕೃತ ಕೆಲಸ ಮುಗಿಸಿದ ನಂತರ ನಟ ದರ್ಶನ್ ಅವರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಜೈಲಿನ ವಾರ್ಡನ್ ಪ್ರಭು ಶಂಕರ್ ಎನ್ನುವವರು ಈ ಕಾನ್ಸ್‌ಟೇಬಲ್‌ಗೆ ಸಹಾಯ ಮಾಡಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಕಾಣದಂತೆ ದರ್ಶನ್ ಇದ್ದ ಬ್ಯಾರಕ್ ಸಮೀಪ ಕಾನ್ಸ್‌ಟೇಬಲ್ ಅವರನ್ನು ಕರೆದೊಯ್ದು ಭೇಟಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಜ.26 ರಂದು ಜೈಲುಗಳ ಮಹಾನಿರ್ದೇಶಕ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅನಾಮಧೇಯ ಪೊಲೀಸ್ ಅಧಿಕಾರಿಯೊಬ್ಬರು ನಿರ್ಬಂಧಿತ ಪ್ರದೇಶದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ನಿಯಮ ಉಲ್ಲಂಘನೆ ಮಾಡಿ ಭೇಟಿಗೆ ಅವಕಾಶ ನೀಡಿದ ವಾರ್ಡನ್ ಪ್ರಭು ಶಂಕರ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ನಿಯಮ ಮೀರಿ ನಟನನ್ನು ಭೇಟಿಯಾದ ಯಲಹಂಕ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಅವರು ಈಶಾನ್ಯ ವಿಭಾಗದ ಡಿಸಿಪಿಗೆ ಸೂಚನೆ ನೀಡಿದ್ದಾರೆ.













