

BBMP Budget: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) 2025-26ನೇ ಸಾಲಿನ ಬಜೆಟ್ ಮಂಡನೆ ದಿಢೀರ್ ಮುಂದೂಡಲ್ಪಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Commissioner Tushar Girinath) ತಿಳಿಸಿದ್ದರು. ನಂತರ, ಅದು ಮಾರ್ಚ್ 28ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ಮಾರ್ಚ್ 29ರಂದು ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಪಾಲಿಕೆ ಸದಸ್ಯರಿಲ್ಲದೆ ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.
ಪಾಲಿಕೆ ಬಜೆಟ್ ಪ್ರತಿ ಬಾರಿ ಸರಾಸರಿ ಶೇ.5 ರಿಂದ 8ರಷ್ಟು ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಶೇ.40 ರಷ್ಟು ಏರಿಕೆ ಕಾಣಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಬಿಬಿಎಂಪಿ 2024-25ರಲ್ಲಿ 12,371.63 ಕೋಟಿ ರೂಪಾಯಿಗಳ ಬಜೆಟ್ ಮಂಡನೆ ಮಾಡಿತ್ತು. ಈ ಬಾರಿ ರಾಜ್ಯ ಸರ್ಕಾರ 7,000 ಕೋಟಿ ರೂ. ಅನುದಾನ ಒದಗಿಸಿದೆ ಎಂಬ ಮಾಹಿತಿ ಇದೆ. ಹಾಗಾಗಿ ಈ ಬಾರಿಯ ಬಜೆಟ್ ಗಾತ್ರ 18 ಸಾವಿರ ಕೋಟಿ ರೂ. ದಾಟಲಿದೆ.
2024-25ನೇ ಸಾಲಿನ ಆರ್ಥಿಕ ವರ್ಷ ಮಾ.31 ರಂದು ಮುಗಿಯಲಿದ್ದು, ಆ ಅವಧಿಯೊಳಗೆ ಬಜೆಟ್‌ಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಬೇಕಿದೆ. ಈ ವರ್ಷದ ಆಯವ್ಯಯದಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿ, ನಗರ ಸ್ವಚ್ಛತೆ, ಸುಗಮ ಸಂಚಾರ, ಹಸಿರೀಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ. ಈ ಮೂಲಕ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲು ಉದ್ದೇಶಿಸಿದೆ. ಪ್ರಮುಖ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ ಹಾಗೂ ತೀವ್ರವಾಗಿ ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನುಪರಿಹರಿಸಲು ಯೋಜನೆಗಳನ್ನು ರೂಪಿಸುವ ಸಾಧ್ಯತೆಗಳಿವೆ ಎಂದು ಪಾಲಿಕೆ ಮೂಲಗಳು ಹೇಳಿವೆ.













