

Sachin Tendulkar: ಬರೋಬ್ಬರಿ 20 ಗಿನ್ನೆಸ್ ದಾಖಲೆ ಹೊಂದುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಒಬ್ಬರು ಮೀರಿಸಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಹಾಗೂ ಕಂಪ್ಯೂಟರ್ ತರಬೇತುದಾರ, ದೆಹಲಿಯ ಕಿರಾರಿ ಸುಲೇಮಾನ್ ನಗರದ ನಿವಾಸಿಯಾದ 43 ವರ್ಷದ ವಿನೋದ್ ಕುಮಾರ್ ಚೌಧರಿಯವರು ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಆದರೆ ನೆನಪಿಡಿ. ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದದ್ದು ಕ್ರಿಕೆಟ್ನಲ್ಲಿ ಅಲ್ಲ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೇಗವಾಗಿ ಟೈಪ್ ಮಾಡುವ, ಮೌತ್‌ಸ್ಟಿಕ್ ಬಳಸಿ, ಮೂಗಿನಿಂದ ಅಕ್ಷರವನ್ನು ಟೈಪ್ ಮಾಡುವ ಸಾಹಸ ಸೇರಿದಂತೆ ಹಲವು ದಾಖಲೆಗಳನ್ನು ಅವರು ಬರೆದಿದ್ದಾರೆ. ಇತ್ತೀಚಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಸೆಕೆಂಡುಗಳಲ್ಲಿ ಅತಿ ವೇಗವಾಗಿ ಹಿಮ್ಮುಖವಾಗಿ ಟೈಪ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ ವಿನೋದ್.
ಸ್ವತಃ ತೆಂಡೂಲ್ಕರ್ ಅಭಿಮಾನಿಯಾಗಿರುವ ವಿನೋದ್ ಚೌಧರಿ ತಮ್ಮ 20 ನೇ ಗಿನ್ನೆಸ್ ದಾಖಲೆಯ ಪತ್ರವನ್ನ ಸಚಿನ್ ರಿಂದಲೇ ಪಡೆದು ಸಂಭ್ರಮಿಸಿದ್ದಾರೆ. ‘ನಾನು ಸಚಿನ್ ಆಟವನ್ನು ನೋಡಿಕೊಂಡೇ ನಾನು ಬೆಳೆದೆ. ಅವರಂತೆಯೇ ದೇಶ ಹೆಮ್ಮೆ ಪಡುವ ಕೆಲಸವನ್ನು ಮಾಡಬೇಕೆಂಬುದು ನನ್ನ ಹಂಬಲವಾಗಿತ್ತು. 20 ನೇ ಗಿನ್ನೆಸ್ ದಾಖಲೆಯನ್ನು ನನ್ನ ಆರಾಧ್ಯ ಗುರು ಸಚಿನ್ ರಿಂದಲೇ ಪಡೆಯಬೇಕೆಂಬುದು ನನ್ನ ಬಯಕೆಯಾಗಿತ್ತು. ಬಾಲ್ಯದಿಂದಲೂ ನನಗೆ ಸ್ಫೂರ್ತಿಯಾಗಿದ್ದ ಸಚಿನ್ ರ ದಾಖಲೆಯನ್ನು ಮೀರುವುದೇ ನನ್ನ ಗುರಿಯಾಗಿತ್ತು’ ಎಂದು ವಿನೋದ್ ಹೇಳಿದ್ದಾರೆ. ಜತೆಗೆ ‘ಸಚಿನ್ ರ ಹೆಸರಿನಲ್ಲಿರುವ ದಾಖಲೆಯನ್ನು ಭಾರತೀಯನೊಬ್ಬ ಮುರಿದಿದ್ದು ಅವರಿಗೂ ಹೆಮ್ಮೆ ಎನಿಸಿದೆ ಎಂಬ ವಿಶ್ವಾಸ ನನ್ನದು’ ಎಂದಿದ್ದಾರೆ.
ಕಳೆದ 2023ರ ಮಾರ್ಚ್‌ನಲ್ಲಿ ಚೌಧರಿ ಕ್ರಿಕೆಟ್ ಗೌಸ್ ತೊಟ್ಟು ಅಕ್ಷರವನ್ನು ಹಿಮ್ಮುಖವಾಗಿ ಟೈಪ್ ಮಾಡಿದ್ದರು. ಇದಕ್ಕೆ ಅವರು 11.34 ಸೆಕೆಂಡು ಸಮಯ ತೆಗೆದುಕೊಂಡಿದ್ದರು.













