Home Entertainment ವಾಜ್ದಾ ಸಿನಿಮಾ ನಿರ್ದೇಶಕ ಮಾತ್ರವಲ್ಲ ಹೋರಾಟಗಾರರಾಗಿದ್ದರು: ಜೋವಾನಾ

ವಾಜ್ದಾ ಸಿನಿಮಾ ನಿರ್ದೇಶಕ ಮಾತ್ರವಲ್ಲ ಹೋರಾಟಗಾರರಾಗಿದ್ದರು: ಜೋವಾನಾ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು, 30 ಜನವರಿ 2026: ಆಂಡ್ರೆ ವಾಜ್ದಾ ಒಬ್ಬ ಶ್ರೇಷ್ಠ ಚಲನಚಿತ್ರ ನಿರ್ದೇಶಕರಾಗಿದ್ದರು. ಅಗತ್ಯವಿದ್ದಾಗಲೆಲ್ಲಾ ಅವರು ಮಾತನಾಡುತ್ತಿದ್ದರು ಮತ್ತು ಹೋರಾಡುತ್ತಿದ್ದರು. ಆದರೆ ಅವರು ತಮ್ಮ ಹೋರಾಟವನ್ನು ಅತ್ಯಂತ ಚತುರತೆಯಿಂದ ಮಾಡುತ್ತಿದ್ದರು. ಏಕೆಂದರೆ ಅವರು ಅಂದಿನ ಕಟ್ಟುನಿಟ್ಟಾದ ಸೆನ್ಸಾರ್‌ಶಿಪ್ ವಿರುದ್ಧ ಹೋರಾಡಬೇಕಿತ್ತು. ಬಹಿರಂಗವಾಗಿ ಹೇಳಲಾಗದ ವಿಷಯಗಳನ್ನು ಹೇಳಲು ಅವರು ಹೊಸ ದಾರಿಗಳನ್ನು ಹುಡುಕುತ್ತಿದ್ದರು. ಅವರು ಸಿನಿಮಾ ಮೇಕರ್‌ ಮಾತ್ರವಲ್ಲ ಹೋರಾಟಗಾರರೂ ಆಗಿದ್ದರುʼ ಎಂದು ಗಡಿನಿಯಾ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕಿ ಜೋವಾನ್ನಾ ವಪಿನ್ಸ್ಕಾ ಮಾತನಾಡಿದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಮ್ಮಿಕೊಂಡಿದ್ದ “ಪೋಲಿಷ್ ಸಿನಿಮಾ ಮತ್ತು ಆಂಡ್ರೆ ವಾಜ್ದಾ ಅವರ ಪರಂಪರೆ” ಎಂಬ ಗೋಷ್ಠಿಯಲ್ಲಿ ಮಾತನಾಡಿದ ಜೊವಾನಾ, ʼವಾಜ್ದಾ ಪೋಲಿಷ್ ಚಿತ್ರರಂಗದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು. ಅವರು ‘ಪೋಲಿಷ್ ಫಿಲ್ಮ್ ಸ್ಕೂಲ್’ ಎಂಬ ಆಂದೋಲನವನ್ನು ಪ್ರಾರಂಭಿಸಿದರು. ನೀವು ಕೇಳಿರಬಹುದಾದ ಕೆನಾಲ್ (Kanal) ಮತ್ತು ಆಶಸ್ ಅಂಡ್ ಡೈಮಂಡ್ಸ್ ನಂತಹ ಚಿತ್ರಗಳು ಈ ಆಂದೋಲನಕ್ಕೆ ನಾಂದಿ ಹಾಡಿದವು. ಎರಡನೇ ಮಹಾಯುದ್ಧದ ನಂತರ ಪೋಲೆಂಡ್‌ನಲ್ಲಿ ಸರ್ಕಾರ ನಿರೀಕ್ಷಿಸುತ್ತಿದ್ದ ‘ಸೋಷಿಯಲಿಸ್ಟ್ ರಿಯಲಿಸಂ’ ಅನ್ನು ಇವರ ಸಿನಿಮಾಗಳು ಸಂಪೂರ್ಣವಾಗಿ ಪ್ರಶ್ನಿಸಿದವು. ಇವರು ಹೃದಯಾಂತರಾಳದ ಮಾತುಗಳನ್ನು ಆಡಲು ಬಯಸಿದ್ದರುʼ ಎಂದರು.
ವಾಜ್ದಾ ಕೇವಲ ಸಿನಿಮಾಗಾಗಿ ಅಲ್ಲ ಜನರಿಗಾಗಿ ಬದುಕಿದ್ದವರು. ಇದರ ಬಗ್ಗೆಯೂ ಮಾತನಾಡಿದ ಅವರು, ʼಎರಡನೇ ಮಹಾಯುದ್ಧದ ಸಮಯದಲ್ಲಿ ಯುವಕರಾಗಿದ್ದ ಆ ‘ಕಳೆದುಹೋದ ತಲೆಮಾರಿನ’ (Lost Generation) ವ್ಯಥೆಯನ್ನು ಚಿತ್ರಿಸಿದ್ದಾರೆ. ಆ ತಲೆಮಾರು ಒಂದು ಕಡೆ ಯುದ್ಧವನ್ನು ಗೆದ್ದಿತ್ತು, ಆದರೆ ಇನ್ನೊಂದು ಕಡೆ ತಮ್ಮ ದೇಶವನ್ನೇ ಕಳೆದುಕೊಂಡಿತ್ತು. ಈ ಒಂದು ಕಹಿ ಸನ್ನಿವೇಶ ಮತ್ತು ನೋವು ಆಂಡ್ರೆ ವಾಜ್ದಾ ಅವರ ಚಿತ್ರಗಳಲ್ಲಿ ಎದ್ದು ಕಾಣುತ್ತದೆ. ಅವರ ಮ್ಯಾನ್ ಆಫ್ ಮಾರ್ಬಲ್ (Man of Marble) ಅತ್ಯಂತ ಪ್ರಮುಖ ಚಿತ್ರ. ಆ ಸಿನಿಮಾ ಮುಗಿಯುತ್ತಿದ್ದಂತೆ ಪೋಲೆಂಡ್‌ನಲ್ಲಿ ಜನಜಾಗೃತಿ ಆಂದೋಲನ ಆರಂಭವಾಯಿತುʼ ಎಂದು ಹೇಳಿದರು.

ಇಂದಿನ ಪೋಲಿಷ್ ನಿರ್ದೇಶಕರಾದ ಪಾವ್ಲಿಕ್ ಹೌಸ್ಕಿ ಅವರಂತಹವರ ಚಿತ್ರಗಳಿಗೂ ವಾಜ್ದಾ ಅವರ ಸಿನಿಮಾಗಳೇ ಭದ್ರ ಬುನಾದಿ. ವಾಜ್ದಾ ಕೇವಲ ನಿರ್ದೇಶಕರಲ್ಲ, ಅವರು ಒಬ್ಬ ರಾಜಕಾರಣಿಯೂ ಆಗಿದ್ದರು. 90ರ ದಶಕದಲ್ಲಿ ಅವರು ಸೆನೆಟರ್ ಆಗಿ ಸೇವೆ ಸಲ್ಲಿಸಿದರು. ದೇಶಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಂಬಲ ಅವರಲ್ಲಿ ಕೊನೆಯವರೆಗೂ ಇತ್ತು. ಕೆಲವೊಮ್ಮೆ ಅವರು ತಮ್ಮನ್ನು ತಾವು ಅತಿಯಾದ ‘ಆದರ್ಶವಾದಿ’ ಎಂದು ಕರೆದುಕೊಳ್ಳುತ್ತಿದ್ದರು. ಅದು ಅವರ ವ್ಯಕ್ತಿತ್ವದ ಅತ್ಯಂತ ಮೃದುವಾದ ಮತ್ತು ಸ್ಪರ್ಶಿಸುವಂತಹ ಭಾಗವಾಗಿತ್ತು. ಅವರು ಇಂದಿಗೂ ನಮ್ಮ ನೆನಪುಗಳಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.

“ವಾಜ್ದಾ ಕೇವಲ ಒಬ್ಬ ಚಲನಚಿತ್ರ ನಿರ್ದೇಶಕರಾಗಿರಲಿಲ್ಲ; ಅವರು ಪೋಲೆಂಡ್‌ನ ಸಾಂಸ್ಕೃತಿಕ ಧ್ವನಿಯಾದರು. ದೃಶ್ಯ ವೈಭವದ ಮೂಲಕವೇ ಅವರು ಪ್ರತಿಭಟನೆಯ ಧ್ವನಿಯನ್ನು ಸಿನಿಮಾದಲ್ಲಿ ಅಡಗಿಸಿಡುತ್ತಿದ್ದರು. ಇದು 1980ರ ದಶಕದ ‘ಸಾಲಿಡಾರಿಟಿ’ ಚಳುವಳಿಯ ಸಮಯದಲ್ಲಿ ವಾಜ್ದಾ ಅವರನ್ನು ನಾಗರಿಕ ಪ್ರತಿರೋಧದ ಪ್ರಮುಖ ಸಾಂಸ್ಕೃತಿಕ ಧ್ವನಿಯನ್ನಾಗಿ ಮಾಡಿತು.” ಎಂದು ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ನವದೆಹಲಿಯ ಪೋಲಿಷ್ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಮಾಲ್ಗೊರ್ಝಾಟಾ ವೀಜಿಸ್-ಗೋಲೆಬಿಯಾಕ್ ಅವರು ಬೆಂಗಳೂರಿನಲ್ಲಿ ಪ್ರದರ್ಶಿಸಲಾಗುತ್ತಿರುವ ಈ ಚಿತ್ರಗಳ ಸಾಂಸ್ಕೃತಿಕ ರಾಯಭಾರತ್ವದ ಬಗ್ಗೆ ಮಾತನಾಡುತ್ತಾ, “ಸಂಸ್ಕೃತಿಯು ಸಂವಹನದ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಇದು ನಾವು ಗಡಿಗಳನ್ನು ಮೀರಿ ಸಹಕರಿಸಲು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ,” ಎಂದರು. ಚಲನಚಿತ್ರ ಸಂಯೋಜಕ ಮೃತುಂಜಯ ಅಲಿ ಖಾನ್ ಅವರು ಈ ಗೋಷ್ಠಿಯ ನಿರ್ವಹಣೆ ಮಾಡಿದರು ಮತ್ತು ಬೆಂಗಳೂರಿನ ಪೋಲೆಂಡ್ ಗೌರವ ರಾಯಭಾರಿ ಚನ್ನರಾಯಪಟ್ಟಣ ರಾಜಪ್ಪ ರಘು ಉಪಸ್ಥಿತರಿದ್ದರು.